ಪೊಲೀಸ್ ಠಾಣೆ ತಲುಪಿದ ’ಕಪಿಲ್ ಶರ್ಮಾ ಶೋ’

Update: 2016-09-26 04:30 GMT

ಮುಂಬೈ, ಸೆ.26: ಹಾಸ್ಯನಟ ಕಪಿಲ್ ಶರ್ಮಾ ಅವರ ವಸತಿ ಸಮುಚ್ಚಯದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಬಗ್ಗೆ ಶುಕ್ರವಾರ ಪೊಲೀಸರ ಜತೆ ಜಂಟಿ ತಪಾಸಣೆ ನಡೆಸಿದ ಬೃಹನ್ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳು, ಹಾಸ್ಯನಟನ ವಿರುದ್ಧ ಕಾನೂನು ಕ್ರಮಕ್ಕೆ ಮಂಜೂರಾತಿ ನೀಡಲು ಮುಂದಾಗಿದ್ದಾರೆ.

ಮಹಾರಾಷ್ಟ್ರ ಪ್ರಾದೇಶಿಕ ನಗರಾಭಿವೃದ್ಧಿ ಕಾಯ್ದೆಯಡಿ ಕಪಿಲ್ ಶರ್ಮಾ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಓಶಿವಾರ ಪೊಲೀಸರು ತನಿಖೆ ನಡೆಸುತ್ತಿದ್ದರು. ತನಿಖೆ ಪೂರ್ಣಗೊಂಡ ಬಳಿಕ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಬಿಎಂಸಿ ಅನುಮೋದನೆ ಬೇಕಾಗುತ್ತದೆ.

ಪೊಲೀಸರು ಹಾಗೂ ಪೌರ ಅಧಿಕಾರಿಗಳು, ಕಟ್ಟಡದ ಮೂಲ ನಕ್ಷೆಯೊಂದಿಗೆ ವಸತಿ ಸಮುಚ್ಚಯಕ್ಕೆ ಶುಕ್ರವಾರ ಹಾಗೂ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವುದೇ ಅನುಮತಿ ಇಲ್ಲದೇ ಶರ್ಮಾ ಮೂರು ಗೋಡೆಗಳನ್ನು ಬದಲಾಯಿಸಿರುವುದು ಹಾಗೂ ಸುರಕ್ಷಾತ್ಮಕವಾಗಿ ಬಿಟ್ಟಿರುವ ಜಾಗವನ್ನು ಅತಿಕ್ರಮಿಸಿಕೊಂಡಿರುವುದು ಖಚಿತವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಪೊಲೀಸರು ವಸತಿ ಸಮುಚ್ಚಯದ ಪಂಚನಾಮೆ ನಡೆಸಲು ಅಧಿಕಾರಿಗಳು ಸಹಕರಿಸಿದರು. ಆ ಬಳಿಕ ಕಪಿಲ್ ಶರ್ಮಾ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪಾಲಿಕೆ ಅಧಿಕಾರಿಗಳು ನನ್ನ ಕಚೇರಿಗೆ ಅನುಮತಿ ನೀಡಲು ಐದು ಲಕ್ಷ ರೂ. ಲಂಚ ಕೇಳಿದ್ದಾರೆ ಎಂದು ಸೆಪ್ಟೆಂಬರ್ 9ರಂದು ಟ್ವೀಟ್ ಮಾಡಿ ಕಪಿಲ್ ಶರ್ಮಾ ವಿವಾದದ ಕಿಡಿ ಹೊತ್ತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News