ಮಹಾದಾಯಿ-ಕಾವೇರಿ: ಭಾಜಪಕ್ಕೆ ಈಗ ಸತ್ವ ಪರೀಕ್ಷೆಯ ಕಾಲ

Update: 2016-09-28 18:38 GMT

ಮಹಾದಾಯಿ-ಕಾವೇರಿ ವಿವಾದಗಳು ಕರ್ನಾಟಕದ ಭಾಜಪಕ್ಕೆ ಸತ್ವ ಪರೀಕ್ಷೆಯ ಕಾಲ ಎನ್ನುವ ಮಾತು ರಾಜಕೀಯ ವಲಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಅದರ ಅಳಿವು-ಉಳಿವು ಮತ್ತು ಭವಿಷ್ಯ ಈ ವಿವಾದಗಳು ಹೇಗೆ ಇತ್ಯರ್ಥವಾಗಬಹುದು ಎನ್ನುವುದರ ಮೇಲೆ ಅವಲಂಬಿತವಾಗಿದೆ ಎನ್ನುವ ರಾಜಕೀಯ ವೀಕ್ಷಕರ ಮತ್ತು ವಿಶ್ಲೇಷಕರ ಅಭಿಪ್ರಾಯದಲ್ಲಿ ಅರ್ಥವಿದೆ. ಮಹಾದಾಯಿ ಹೋರಾಟ ಒಂದು ವರ್ಷವನ್ನು ಪೂರೈಸಿದೆ. ಅದನ್ನು ಬಗೆಹರಿಸುವ ಮಾತಿರಲಿ, ವಿವಾದವನ್ನು ದಿಲ್ಲಿಯ ದೊರೆಯ ತನಕ ತಲುಪಿಸುವಲ್ಲಿಯೂ ಭಾಜಪ ವಿಫಲವಾಗಿದೆ. ಈ ನಿಟ್ಟಿನಲ್ಲಿ ಅದು ಇನ್ನೂ ದೃಢವಾದ ನಿಲುವನ್ನು ತೆಗೆದುಕೊಳ್ಳದೆ, ಸುತ್ತಿ ಬಳಸಿ ಮಾತನಾಡುತ್ತಿದೆ. ಅದರ ಇತ್ತೀಚಿನ ಧೋರಣೆ ‘‘ಹಾವೂ ಸಾಯಬಾರದು..ಕೋಲೂ ಮುರಿಯಬಾರದು’’ ಎನ್ನುವಂತಿದೆ. ನ್ಯಾಯ ಮಂಡಳಿಯಲ್ಲಿದೆ... ಪ್ರಧಾನಿಗಳು ಮಧ್ಯೆ ಪ್ರವೇಶಿಸಲಾಗದು ... ವಿಷಯ ಸಬ್ ಜ್ಯುಡಿಸ್ ಆಗುತ್ತದೆ ಎನ್ನುವ ಹಳೆಯ ಹಾಡನ್ನೇ ಹಾಡುತ್ತಿದೆ. ಈ ಮಧ್ಯೆ ಮಹಾದಾಯಿ ಪ್ರದೇಶಕ್ಕೆ ಪ್ರಧಾನಿ ಎರಡು ಬಾರಿ ಭೇಟಿ ನೀಡಿದರೂ, ಅದೇ ಸಮಯದಲ್ಲಿ ಹೋರಾಟ ನಡೆಯುತ್ತಿದ್ದರೂ, ಅವರು ಈ ನಿಟ್ಟಿನಲ್ಲಿ ಒಂದೇ ಒಂದು ಮಾತು ಆಡದಿರುವುದು ಮತ್ತು ಆ ಬಗ್ಗೆೆ ಕರ್ನಾಟಕದ ಸಂಸದರು ಪ್ರಧಾನಿಗಳನ್ನು ಒತ್ತಾಯಿಸದಿರುವುದು ಕನ್ನಡಿಗರಿಗೆ ನಿರಾಸೆ ಉಂಟು ಮಾಡಿದೆ. ಈಗ ಕೊನೆಗೂ ಸುಪ್ರೀಂ ಕೋರ್ಟ್‌ನಿಂದಾಗಿ ಈ ಪ್ರಕರಣದ ಹೊಣೆ ಕೇಂದ್ರದ ಮೇಲೆ ಬಿದ್ದಿದ್ದು ಅದು ಈ ಪ್ರಕರಣವನ್ನು ಅನಿವಾರ್ಯವಾಗಿ ನಿಭಾಯಿಸಬೇಕಾದ ಪರಿಸ್ಥಿತಿ ಬಂದು ನಿಂತಿದೆ.
ದಕ್ಷಿಣ ಭಾರತದಲ್ಲಿ ಭಾಜಪಕ್ಕೆ 17 ಸಂಸದರ ಮೂಲಕ ನೆಲೆಕೊಟ್ಟ ರಾಜ್ಯವನ್ನು ಈ ರೀತಿ ನಡೆಸಿಕೊಂಡ ಬಗ್ಗೆ ಪ್ರಜ್ಞಾವಂತರ ಸಂಗಡ ರಾಜಕೀಯದ ಅ, ಇ ತಿಳಿಯದ ಜನಸಾಮಾನ್ಯರೂ ಇಂದು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆಗೆ ದೀರ್ಘ ಇತಿಹಾಸ ಇದೆ. ಆದರೆ, ಭಾಜಪದ ಆಡಳಿತದಲ್ಲಿ ಇದು ಮುಗಿಲು ಮುಟ್ಟಿದೆ ಎನ್ನುವ ಭಾವನೆ ಕೇಳುತ್ತಿದೆ. ಕರ್ನಾಟಕ ಹೇಗೂ ತಮ್ಮ ತೆಕ್ಕೆಯಲ್ಲಿದ್ದು, ಭಾಜಪಕ್ಕೆ ನೆಲೆ ಕೊಡದ ಇತರ ದಕ್ಷಿಣ ರಾಜ್ಯಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದೆ ಎನ್ನುವ ಮಾತೂ ಕೇಳುತ್ತಿದೆ.
  ಮಹಾದಾಯಿ ವಿವಾದ ಇನ್ನೂ ತಣ್ಣಗಾಗದಿರುವಾಗಲೇ, ಕಾವೇರಿ ಕಿಚ್ಚು ಹತ್ತಿದೆ. ಈ ವಿಷಯದಲ್ಲೂ ಇದುವರೆಗಿನ ಪ್ರಧಾನಿಯವರ ಮೌನ ಕನ್ನಡಿಗರನ್ನು ಕಂಗೆಡಿಸಿದೆ. ಎರಡೂ ರಾಜ್ಯಗಳಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಪ್ರಧಾನಿ, ವಿವಾದದ ಬಗೆಗೆ ಮಾತನಾಡದಿರುವುದು ಆಶ್ಚರ್ಯವಾಗಿದೆ. ಈ ನಿಟ್ಟಿನಲ್ಲಿ ಮಂತ್ರಿಗಳಾದ ಅನಂತಕುಮಾರ್, ಸದಾನಂದ ಗೌಡ ಮತ್ತು ನಿರ್ಮಲಾ ಸೀತಾರಾಮನ್ ಪ್ರಧಾನಿಗಳನ್ನು ಭೇಟಿಯಾದರೂ, ಯಾವುದೇ ನಿಲುವು ಪ್ರಕಟಿಸದೆ, ಜಲಸಂಪನ್ಮೂಲ ಮಂತ್ರಿ ಉಮಾ ಭಾರತಿಯವರತ್ತ ಕೈತೋರಿದರು. ಕಾವೇರಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜಾಣ ಮೌನ ರಾಜ್ಯ ಬಿಜೆಪಿಯನ್ನು ಕಂಗೆಡಿಸಿದಂತಿದೆ. ಬಿಸಿ ತುಪ್ಪದ ಅನುಭವ ಅವರಿಗೆ ಆಗುತ್ತಿದೆ. ಹಿಂದಿನ ಪ್ರಧಾನಿಗಳು ಇಂತಹ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಉದಾಹರಣೆಗಳು ಇರುವಾಗ, ಪ್ರಧಾನಿ ಮೋದಿಯವರ ಮೌನ ರಾಜ್ಯ ಭಾಜಪವನ್ನು ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿಸಿರುವುದು ನಿಜ. ಈ ವಿಷಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ರಾಗದಲ್ಲಿ ಧ್ವನಿಗೂಡಿಸಿದಾಗ, ಭಾಜಪ ಏಕಾಂಗಿಯಾಗಿ ಉಳಿದಿತ್ತು. ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಮಧ್ಯಪ್ರವೇಶದ ಬಗ್ಗೆ ಪ್ರಸ್ತಾಪವಾದರೆ ಮುಜುಗರ ಅನುಭವಿಸಬೇಕಾಗಬಹುದು ಎಂದು ಯಾವುದೋ ಕುಂಟು ನೆಪದಲ್ಲಿ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿ ಕನ್ನಡಿಗರ ಆಕ್ರೋಶಕ್ಕೆ ಬಲಿಯಾಯಿತು. ಸರ್ವ ಪಕ್ಷ ಸಭೆಗೆ ಹಾಜರಾಗದಿರುವ ಹಿಂದಿನ ಕಾರಣಗಳೇನೇ ಇರಲಿ, ಭಾಜಪದ ಕ್ರಮವನ್ನು ಕನ್ನಡಿಗರು ಸ್ವಾಗತಿಸಲಿಲ್ಲ. ರಾಜ್ಯದ ಜ್ವಲಂತ ಸಮಸ್ಯೆ ಕುರಿತು ಸರಕಾರ ಸರ್ವ ಪಕ್ಷಗಳ ಸಭೆಯನ್ನು ಕರೆದಾಗ, ಅಧಿಕೃತ ವಿರೋಧ ಪಕ್ಷವಾದ ಭಾಜಪ ಭಾಗವಹಿಸಿ ತನ್ನ ನಿಲುವನ್ನು ಪ್ರಕಟಗೊಳಿಸಬೇಕಾಗಿತ್ತು ಮತ್ತು ಸರಕಾರಕ್ಕೆ ತನ್ನ ಸಲಹೆ-ಸೂಚನೆಗಳನ್ನು ನೀಡಬೇಕಾಗಿತ್ತು. ಆದರೆ ಕಾವೇರಿ ವಿವಾದದಿಂದಾಗಿ ರಾಜ್ಯ ಕೆಂಡವಾಗಿ ಉರಿಯುತ್ತಿದ್ದರೂ, ಪ್ರಧಾನಿ ಮಧ್ಯಸ್ಥಿಕೆಗೆ ಕೂಗು ಮುಗಿಲು ಮುಟ್ಟಿದರೂ ರಾಜ್ಯವನ್ನು ಪ್ರತಿನಿಧಿಸುವ 17 ಸಂಸದರಲ್ಲಿ ಯಾರೊಬ್ಬರೂ ಈ ಕೂಗಿಗೆ ಧ್ವನಿಗೂಡಿ ಸಲಿಲ್ಲ. ಹಾಗೆಯೇ ಪ್ರಧಾನಿ ಬಳಿ ನಿಯೋಗ ಹೋಗುವ ಪ್ರಸ್ತಾವಕ್ಕೂ ಸ್ಪಂದಿಸಲಿಲ್ಲ. ಭಾಜಪಕ್ಕೆ ರಾಜ್ಯದ ಹಿತಕ್ಕಿಂತ ‘ವರಿಷ್ಠರ ಕಮಾಂಡ್’ ಮುಖ್ಯವಾಯಿತೇ ಎನ್ನುವ ಚರ್ಚೆ ರಾಜ್ಯಾದ್ಯಂತ ಕೇಳಿಬರುತ್ತಿದೆ. ಈ ವಿವಾದಗಳ ಬಗ್ಗೆೆ ಮುಖ್ಯಮಂತ್ರಿಗಳು ಬರೆದ ಎಂಟು ಪತ್ರಗಳಿಗೆ ಇನ್ನೂ ಉತ್ತರ ಬರ ಬೇಕಾಗಿದೆ. ಹಾಗೆಯೇ ಅವರಿಗೆ ಪ್ರಧಾನಿ ಭೇಟಿಗೂ ಸಮಯ ಸಿಗಲಿಲ್ಲವಂತೆ. ಮುಂಬರುವ ಚುನಾವಣೆಗಳಲ್ಲಿ ಕನ್ನಡಿಗರು ಇವನ್ನೆಲ್ಲ ನೆನಪಲ್ಲಿಟ್ಟುಕೊಂಡು ಮತದಾನ ಮಾಡಿದರೆ?
 ಮಹಾದಾಯಿ ಯೋಜನೆ ವಿವಾದದಲ್ಲಿ ಭಾಜಪ ಉತ್ತರ ಕರ್ನಾಟಕದಲ್ಲಿ ಈಗಾಗಲೇ ತನ್ನ ವರ್ಚಸ್ಸಿಗೆ ಧಕ್ಕೆ ಮಾಡಿಕೊಂಡಿದೆ. ಈಗ ಕಾವೇರಿ ವಿವಾದದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕೂಡಾ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. 2014ರ ಸಂಸತ್ ಚುನಾವಣೆಯ ನಂತರ ಕರ್ನಾಟಕದಲ್ಲಿ ಭಾಜಪಕ್ಕೆ ಭವಿಷ್ಯದ ಚುನಾವಣೆಯಲ್ಲಿ ಆಧಿಕಾರದ ಚುಕ್ಕಾಣಿ ಹಿಡಿಯುವ ಆಶೆಯನ್ನು ಚಿಗುರಿಸಿತ್ತು. ಆದರೆ ರಾಜ್ಯದಲ್ಲಿ ತಮ್ಮ ಅಂತರಿಕ ತುಮುಲ ಮತ್ತು ಗೊಂದಲವನ್ನು ನಿವಾರಿಸಿಕೊಳ್ಳಲಾಗದ ಅಸಹಾಯಕತೆ, ತಮ್ಮ ರಾಜ್ಯದ ಬೇಡಿಕೆಗಳ ಬಗ್ಗೆ ತಮ್ಮ ದಿಲ್ಲಿ ವರಿಷ್ಠರ ಎದುರು ನಿಂತು ದೃಢವಾಗಿ ಪ್ರತಿಪಾದಿಸಲಾಗದ ಕುಬ್ಜತನ, ಅವರಿಗೆ ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ಆಧಿಕಾರ ಮರೀಚಿಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಭಾಜಪ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕವನ್ನು ನಿರ್ಲಕ್ಷಿಸುತ್ತಿದೆ, ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಭಾವನೆ ಜನರ ಮನದಲ್ಲಿ ಬಂದಾಗಿದೆ. ನಾಲ್ಕಾರು ಸ್ಮಾರ್ಟ್ ಸಿಟಿಗಳು ಮತ್ತು ಒಂದು ಐಐಟಿ ಹಾಗೂ ಬೆಂಗಳೂರು ನಗರಕ್ಕೆ ಎರಡನೆ ಹಂತದ ಮೆಟ್ರೋ ಭಾಜಪಕ್ಕೆ ಆಧಿಕಾರದ ಹೈವೇ ಆಗಲಾರದು. ಮಹಾದಾಯಿ ಮತ್ತು ಕಾವೇರಿಯಲ್ಲಿ ಭಾಜಪದ ಆಡಳಿತದ ಚುಕ್ಕಾಣಿ ಅಡಗಿದೆ.

Writer - ರಮಾನಂದ ಶರ್ಮಾ

contributor

Editor - ರಮಾನಂದ ಶರ್ಮಾ

contributor

Similar News