ರಾಯಚೂರು: ಮದ್ಯಮಾರಾಟ ವಿರೋಧಿಸಿ ಮಹಿಳೆಯರಿಂದ ಬೃಹತ್ ಆಂದೋಲನ

Update: 2016-10-02 15:01 GMT

ರಾಯಚೂರು/ಬೆಂಗಳೂರು, ಅ.2: ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣ ನಿಷೇಧಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರ ಜೀವನವನ್ನು ಸರಕಾರ ಉಳಿಸುವ ದಿಟ್ಟ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
 ರವಿವಾರ ಗಾಂಧಿ ಜಯಂತಿ ಅಂಗವಾಗಿ ಮದ್ಯಪಾನ ನಿಷೇಧ ಆಂದೋಲನ- ಕರ್ನಾಟಕದ ಪರವಾಗಿ ರಾಯಚೂರು ನಗರದ ರಾಜೇಂದ್ರ ಗಂಜ್(ಎಪಿಎಂಸಿ)ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ‘ನಶಾಮುಕ್ತ್ ಭಾರತ್’ನ ಪರಿಕಲ್ಪನೆ ಸಾಕಾರಗೊಳಿಸಲು ಗುಜರಾತ್, ಬಿಹಾರ, ಮಣಿಪುರ, ನಾಗಾಲ್ಯಾಂಡ್, ಲಕ್ಷದ್ವೀಪ ಹಾಗೂ ಕೇರಳ ರಾಜ್ಯಗಳ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಸಂಪೂರ್ಣ ಮದ್ಯಪಾನ ನಿಷೇಧಿಸಬೇಕು ಎಂದು ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ನಾಯಕಿ ಸ್ವರ್ಣ ಭಟ್ ಆಗ್ರಹಿಸಿದರು.
ಹಲವು ದಶಕಗಳಿಂದ ಕುಡಿತಕ್ಕೆ ಬಲಿಯಾಗಿ ಲಕ್ಷಾಂತರ ಹದಿ ಹರೆಯದ ಯುವಕ, ಯುವತಿಯರು ಬೀದಿಪಾಲಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೆ ಅನಾಥರಾಗಿ, ವಿಧವೆಯರಾಗಿ, ಅನಾರೋಗ್ಯ ಪಿಡೀತರಾದ ಕುಟುಂಬಗಳ ಜೀವನೋಪಾಯಕ್ಕಾಗಿ ಸೂಕ್ತ ಪರಿಹಾರ ಹಾಗೂ ಪುನರ್ವಸತಿಯನ್ನು ಸರಕಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸರಕಾರ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುವ ಮಾಡುವ ಮೂಲಕ ಬಡವರು ಹಾಗೂ ಮಧ್ಯಮವರ್ಗದ ಜನರ ಜೀವನವನ್ನು ನಾಶ ಮಾಡುತ್ತಿದೆ. ಸಮಾಜಕ್ಕೆ ಮಾರಾಕವಾಗಿರುವ ಮದ್ಯವನ್ನು ಸರಕಾರದ ಸಂಸ್ಥೆಗಳ ಮೂಲಕವೆ ಮಾರಾಟ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.
ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಸಂಗ್ರಹ ಮಾಡುವ ಏಕೈಕ ಉದ್ದೇಶದಿಂದ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಸಭೆಯಲ್ಲಿ ಪಾಲ್ಗೊಂಡಿರುವ ಬಹುತೇಕ ಮಹಿಳೆಯರು ಈ ಮದ್ಯಪಾನದ ಪಿಡುಗಿನಿಂದಾಗಿ ತಮ್ಮ ಜೀವನದಲ್ಲಿ ಹಲವು ಬಗೆಯ ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂದು ಸ್ವರ್ಣಭಟ್ ಹೇಳಿದರು.

ಮದ್ಯಪಾನದಿಂದಾಗಿ ರಾಜ್ಯದಲ್ಲಿ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಹೊಸ ಮದ್ಯದಂಡಗಳಿಗೆ ಪರವಾನಗಿ ನೀಡಲು ಮುಂದಾಗುವ ಮೂಲಕ ಮಹಿಳೆಯರನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು ಕಷ್ಟಪಟ್ಟು ದುಡಿಯುವ ಹಣವನ್ನು ಅವರ ಗಂಡಂದಿರು ಕಸಿದುಕೊಂಡು ಹೋಗಿ ಮದ್ಯಸೇವನೆ ಮಾಡುತ್ತಿದ್ದಾರೆ. ಅಲ್ಲದೆ, ಮನೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸೆಯು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿದ್ದ ಮಹಿಳೆಯೊಬ್ಬರು ಮಾತನಾಡಿ, ನನ್ನ ಗಂಡ ನನ್ನ ತಾಳಿಯನ್ನು ಮಾರಾಟ ಮಾಡಿ ಮದ್ಯಪಾನ ಮಾಡಿದ್ದಾನೆ. ಈಗ ಆತ ರೋಗಗ್ರಸ್ಥನಾಗಿ ಮನೆಯಲ್ಲಿದ್ದಾನೆ. ಆತನ ಆರೈಕೆ ಮಾಡುವುದರ ಜೊತೆಗೆ, ಐವರು ಮಕ್ಕಳನ್ನು ನಾನು ಸಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ಜೀವನದಲ್ಲಿ ಎದುರಾಗಿರುವ ಕಷ್ಟಗಳನ್ನು ನೋಡುತ್ತಿದ್ದರೆ, ಜೀವನಕ್ಕಿಂತ ಸಾವೇ ಮೇಲು ಎಂಬ ಭಾವನೆ ಮೂಡುತ್ತಿದೆ ಎಂದು ಕಣ್ಣೀರು ಹಾಕಿದರು.
ಘೋಷಣೆಗಳು: ಬೀರು-ಬ್ರಾಂಡಿ ಬೇಡವೇ ಬೇಡ, ಭೂಮಿ ವಸತಿ ಬೇಕೇ ಬೇಕು, ಹೆಂಡ-ಸಾರಾಯಿ ಬೇಡವೇ ಬೇಡ, ವಿದ್ಯೆ-ಉದ್ಯೋಗ ಬೇಕೆ ಬೇಕು, ಅಮಲಿನ ಕೇಂದ್ರಗಳು ಬೇಡವೇ ಬೇಡ, ಆರೋಗ್ಯ ಕೇಂದ್ರಗಳು ಬೇಕೆ ಬೇಕು ಎಂದು ಸಾವಿರಾರು ಮಹಿಳೆಯರು ಘೋಷಣೆಗಳನ್ನು ಕೂಗುತ್ತಾ ಎಪಿಎಂಸಿ ಯಾರ್ಡ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಮಹಿಳೆಯರ ನಿಯೋಗವು, ನಮ್ಮ ಮನವಿಯನ್ನು ಸರಕಾರದ ಗಮನಕ್ಕೆ ತಂದು, ನೂರಾರು ಕುಟುಂಬಗಳನ್ನು ರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನವಜೀವನ ಮಹಿಳಾ ಒಕ್ಕೂಟದ ನಾಯಕಿ ಮೋಕ್ಷಮ್ಮ, ಮುಖಂಡರಾದ ವಿದ್ಯಾಪಾಟೀಲ್, ವಿರೂಪಮ್ಮ, ಪದ್ಮಾ, ಸುಲೋಚನಾ, ವರಲಕ್ಷ್ಮಿ, ಟಿಯುಸಿಐ ಮಾನಸಯ್ಯ, ಬಡಿಗೇರ, ಗಂಗಾಧರ, ಅಂಬಣ್ಣ ಅರೋಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News