ಪಡಿತರ ಚೀಟಿದಾರರಿಗೆ ಗೋಧಿ ಬದಲಿಗೆ ಅಕ್ಕಿ

Update: 2016-10-05 18:31 GMT

ಬೆಂಗಳೂರು, ಅ.5: ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳಿಂದ ಗೋಧಿಯ ಬದಲಿಗೆ ಅಕ್ಕಿಯನ್ನು ನೀಡಲು ಉದ್ದೇಶಿಸಿದ್ದು, ಪ್ರತಿ ಯೂನಿಟ್‌ಗೆ ಐದು ಕೆ.ಜಿ. ಅಕ್ಕಿಯನ್ನೇ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಇದೀಗ ಪ್ರತಿ ಯೂನಿಟ್‌ಗೆ 3ಕೆ.ಜಿ.ಅಕ್ಕಿ ಮತ್ತು 2ಕೆ.ಜಿ.ಗೋಧಿ ನೀಡಲಾಗುತ್ತಿದೆ. ಹೆಚ್ಚುವರಿ ಅಕ್ಕಿಗೆ ಬೇಡಿಕೆ ಬಂದಿರುವ ಕಾರಣ ಗೋಧಿಯ ಬದಲಿಗೆ ಅಕ್ಕಿ ನೀಡಲಾಗುವುದು ಎಂದರು.

ಗೋಧಿಯನ್ನು ಶುದ್ಧಗೊಳಿಸಿ ಹಿಟ್ಟು ಮಾಡಿಸಿಕೊಂಡು ಬಳಕೆ ಮಾಡಬೇಕು. ಹೀಗಾಗಿ ಅದನ್ನು ಹೆಚ್ಚಿನ ಜನರು ಬಳಕೆ ಮಾಡುವುದಿಲ್ಲ. ಆದುದರಿಂದ ಗೋಧಿ ವಿತರಣೆಯನ್ನೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದ ಖಾದರ್, ರಾಗಿ, ಎಣ್ಣೆ, ಉಪ್ಪು ಯಥಾ ರೀತಿಯಲ್ಲಿ ವಿತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ವ್ಯವಸ್ಥಾಪಕರೇ ಹೊಣೆ: ಕಳಪೆ ಗುಣಮಟ್ಟದ ಪಡಿತರ ವಿತರಿಸಿದರೆ ಆಹಾರ ಧಾನ್ಯಗಳ ದಾಸ್ತಾನು ಮಳಿಗೆಯ ವ್ಯವಸ್ಥಾಪಕ ಅಧಿಕಾರಿ ಮತ್ತು ವಿತರಿಸಿದ ನ್ಯಾಯಬೆಲೆ ಅಂಗಡಿಗಳ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಾದರ್ ಇದೇ ವೇಳೆ ಎಚ್ಚರಿಸಿದರು.

ಆಯಾ ತಿಂಗಳ ಪಡಿತರ ಪದಾರ್ಥಗಳನ್ನು ಅದೇ ತಿಂಗಳಲ್ಲಿ ವಿತರಣೆ ಮಾಡಬೇಕು. ಕಲ್ಲು ಮತ್ತು ಹುಳು ಬಿದ್ದ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ಆಹಾರ ಪದಾರ್ಥಗಳನ್ನು ಪಡೆಯುವುದು ಪಡಿತರ ಚೀಟಿದಾರರ ಹಕ್ಕು ಎಂದು ಅವರು ಪ್ರತಿಪಾದಿಸಿದರು.

ಕೂಪನ್ ಸುಲಭ: ಪಡಿತರ ಭದ್ರತಾ ಚೀಟಿ(ಕೂಪನ್) ಪಡೆಯಲು ಅತ್ಯಂತ ಸರಳ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಚೀಟಿದಾರರು ತಮ್ಮ ಮನೆಯಿಂದಲೇ ಕೂಪನ್ ಪಡೆದುಕೊಳ್ಳಬಹುದು. ‘161’ಗೆ ಕರೆ ಮಾಡಿ ಸಂಪರ್ಕ ಪಡೆದ ಬಳಿಕ ‘4’ನ್ನು ಒತ್ತಿ, ಆಧಾರ್ ಸಂಖ್ಯೆಯನ್ನು ದಾಖಲಿಸಿದರೆ ಕೂಡಲೇ ಕೂಪನ್ ಕೋಡ್ ಸಂದೇಶ ಪಡೆಯಬಹುದು ಎಂದು ಖಾದರ್ ಮಾಹಿತಿ ನೀಡಿದರು.

 ರಾಜ್ಯಾದ್ಯಂತ ಅಕ್ಟೋಬರ್ ತಿಂಗಳಿಂದಲೇ ಪಡಿತರ ಚೀಟಿದಾರರಿಗೆ 3ತಿಂಗಳ ಕೂಪನ್‌ಗಳನ್ನು ಒಟ್ಟಿಗೆ ನೀಡಲಾಗಿದೆ. ಕೂಪನ್ ವಿತರಣೆ ಕೇಂದ್ರಗಳನ್ನು ಹೆಚ್ಚಿಸಿದ್ದು, ಆಧಾರ್ ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್‌ಸಂಖ್ಯೆಯಲ್ಲೇ ಪಡಿತರ ಚೀಟಿಗೆ ಸಂದೇಶ ಕಳುಹಿಸಬೇಕು. ಒಂದು ವೇಳೆ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಅದನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಹೊಸ ಪಡಿತರ ಚೀಟಿ: ಹೊಸ ಪಡಿತರ ಚೀಟಿ ಪಡೆಯಲು ನಿಯಮಗಳನ್ನು ಸರಳೀಕರಿಸಿದ್ದು, ಈ ಸಂಬಂಧ ಸಾಫ್ಟ್‌ವೇರ್ ಉನ್ನತೀಕರಣ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಇನ್ನು ಒಂದೂವರೆ ತಿಂಗಳಲ್ಲಿ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News