‘ಯಾನ’ ಕಲಾವಿದನ ಮಹಾಯಾನ

Update: 2016-10-08 18:43 GMT

ಬೆಂಗಳೂರು ಮಹಾನಗರದ ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದ ಸುಖಾಗಮನ ಮೊಗಸಾಲೆ. ನಗರಕ್ಕೆ ಬಂದಿಳಿದ ಪ್ರಯಾಣಿಕರ ವಿಮಾನ ಯಾನ ಸುಖಕರವಾಗಿತ್ತೋ ಇಲ್ಲವೋ... ಆದರೆ ವಿಮಾನ ನಿಲ್ದಾಣದ ಸುಖಾಗಮನ ಮೊಗಸಾಲೆ ಪ್ರವೇಶಿಸಿದ ಕೂಡಲೇ ಅವರ ಮುಖದಲ್ಲಿ ಮಂದಹಾಸ ಕಂಗೊಳಿಸುತ್ತದೆ-ತಮ್ಮನ್ನು ಸ್ವಾಗತಿಸಲೆಂದೇ ನಿಂತಿರುವಂಥ ಝಗಮಗಿಸುವ ಸುಂದರ ಕಲಾಕೃತಿಯೊಂದನ್ನು ಕಂಡು ಪ್ರಯಾಣದ ಆಯಾಸವೆಲ್ಲ ಹಾರಿಹೋಗುತ್ತದೆ ಇದರ ಭವ್ಯತೆಯ ಮುಂದೆ. ಉಕ್ಕು ಮತ್ತು ತಾಮ್ರಗಳ ಮಿಶ್ರಲೋಹದಿಂದ ರೂಪಿಸಲಾದ ಕಲಾಕೃತಿ. ಕೃತಕ ಅಭ್ರಕ ಶಿಲೆಯ ಮೇಲೆ ವಿರಾಜಮಾನವಾಗಿರುವ ಈ ಕಲಾಕೃತಿ ಒಂದು ಲೋಹ ಶಿಲ್ಪ. ಲೋಹದ ಐವತ್ತೈದು ಘಟಕಗಳನ್ನೊಳಗೊಂಡ ಅದ್ಭುತ ಸಂಯೋಜನೆ. ಈ ಕಲಾಕೃತಿಯ ಕರ್ತೃ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಯೂಸುಫ್ ಅರಕ್ಕಳ್.

ವಿಮಾನ ನಿಲ್ದಾಣವಷ್ಟೇ ಅಲ್ಲ, ಬೆಂಗಳೂರು ಮಹಾನಗರದ ಅನೇಕ ಪ್ರಮುಖ ತಾಣಗಳು ಯುಸುಫ್ ಅರಕ್ಕಳ್ ಅವರ ಕಲಾಕೃತಿಗಳಿಂದ ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಂಡು ರಸಿಕರನ್ನು ಆಕರ್ಷಿಸುತ್ತಿವೆ. ವಿಶೇಷವಾಗಿ, ವಿಠಲ ಮಲ್ಯ ರಸ್ತೆ ಮತ್ತು ಕಸ್ತೂರ್ಬಾ ರಸ್ತೆಗಳ ಸಂಧಿತಾಣದಲ್ಲಿ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ, ಮಹಾತ್ಮ ಗಾಂಧಿ ರಸ್ತೆಯಲ್ಲಿ-ಹೀಗೆ ನಗರದ ಮೂವತ್ತಕ್ಕೂ ಹೆಚ್ಚು ಕೇಂದ್ರೀಯ ತಾಣಗಳಲ್ಲಿ ಅರಕ್ಕಳ್ ಅವರ ಭಿತ್ತಿಚಿತ್ರಗಳು ಮತ್ತು ಶಿಲ್ಪಗಳು ಈ ಸ್ಥಳಗಳನ್ನು ಶೋಭಾಯಮಾನಗೊಳಿಸಿರುವುದನ್ನು ನಾವು ಕಾಣುತ್ತೇವೆ. ಇದೇ ನಾಲ್ಕನೆಯ ತೇದಿಯಂದು ವಿಧಿವಶರಾದ ಯೂಸುಫ್ ಅರಕ್ಕಳ್ ಅವರು ಅರವತ್ತರ ದಶಕದಿಂದ ಬೆಂಗಳೂರಿನ ಕಲಾಪ್ರಿಯರಿಗೆ ಚಿರಪರಿಚಿತರು. ಕೇರಳದ ಚಾವಕ್ಕಾಡ್‌ನಲ್ಲಿ ಜನಿಸಿ(1945) ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಅರಕ್ಕಳ್ ಅವರು ಉದರಂಭರಣಕ್ಕಾಗಿ ನಗರದ ವಿಮಾನ ಕಾರ್ಖಾನೆಯಲ್ಲಿ ಉದ್ಯೋಗ ಹಿಡಿದು, ಜೊತೆಜೊತೆಯಲ್ಲೇ ಚಿತ್ರಕಲೆಯ ಗೀಳನ್ನು ಬೆಳೆಸಿಕೊಂಡವರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರ ಕಲೆಯನ್ನು ಅಭ್ಯಾಸಮಾಡಿ 1973ರಲ್ಲಿ ಕಲೆಯಲ್ಲಿ ಡಿಪ್ಲೊಮಾ ಪಡೆದಾಗ ಅವರಿಗೆ ಇಪ್ಪತ್ತೆಂಟರ ಪ್ರಾಯ. ನಂತರ ಸುಪ್ರಸಿದ್ಧ ಚಿತ್ರಕಾರ ರಾಜಾ ರವಿವರ್ಮನ ವಂಶಜರಾದ ಜಾಯ್ ವರ್ಮಾ ಅವರಲ್ಲಿ ಸ್ವಲ್ಪಕಾಲ ಶಿಷ್ಯವೃತ್ತಿ ನಡೆಸಿದ್ದೂ ಉಂಟು.

  ಬೆಂಗಳೂರಿನಲ್ಲಿದ್ದಕೊಂಡು ನಿರಂತರವಾಗಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯ ಶೃಂಗವೇರಿದ ಯೂಸುಫ್ ಅರಕ್ಕಳ್ ಅವರ ಸಾಧನೆ ವಿಸ್ಮಯಕಾರಿಯಾದುದು. ಅರಕ್ಕಳ್ ಪ್ರಯೋಗಶಿಲರು. ಜಲವರ್ಣ, ತೈಲ ವರ್ಣ, ರೇಖಾ ಚಿತ್ರ, ಗ್ರಾಪಿಕ್ಸ್, ಶಿಲ್ಪಕಲೆ ಇತ್ಯಾದಿ ಹಲವಾರು ಕಲಾ ಪ್ರಕಾರಗಳಲ್ಲಿ ಪರಿಣತಿಗಳಿಸಿ ಕಲಾ ರಸಿಕರು ಮತ್ತು ಕಲಾ ವಿಮರ್ಶಕರ ಪ್ರೀತಿ, ಪ್ರಶಂಸೆಗಳಿಗೆ ಪಾತ್ರರಾದವರು. ಅರಕ್ಕಳ್ ಬಣ್ಣಗಳಷ್ಟೆ ಅಲ್ಲದೆ ಕಲಾಕೃತಿಗಳ ರಚನೆಗೆ ಚಕ್ರಗಳು, ಚರಂಡಿ ಕೊಳವೆಗಳು ಮೊದಲಾದ ನಿತ್ಯೋಪಯೋಗಿ ಕಚ್ಚಾ ವಸ್ತುಗಳನ್ನು ಸಾಧನಸಂಪತ್ತಾಗಿ ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ. ಶಿಲ್ಪಕಲಾವಿದರಾಗಿ ಅವರು ಕಾಷ್ಠ, ಶಿಲೆ, ಕಂಚು, ಸೆರಾಮಿಕ್ ಮೊದಲಾದ ಮಾಧ್ಯಮಗಳಲ್ಲಿ ಶಿಲ್ಪಗಳನ್ನು ರಚಿಸಿದ್ದಾರೆ. ಯೂಸುಫ್ ಅರಕ್ಕಳ್ ಕಲಾ ಪರಂಪರೆಯಲ್ಲಿ ಅಭಿವ್ಯಕ್ತಿವಾದಿ (ಎಕ್ಸಪ್ರೆಸನಿಷ್ಟ್) ಪಂಥಕ್ಕೆ ಒಲಿದವರು. ಅವರಿಗೆ ತಮ್ಮ ಸುತ್ತಲ ಪ್ರಕೃತಿ ಮತ್ತು ಜನಜೀವನವೇ ಸ್ಫೂರ್ತಿಯ ಮೂಲ ಸ್ರೋತವಿದ್ದಂತಿದೆ. ಸಾಹಿತಿ-ಕಲಾವಿದರು ಸಾಮಾಜಿಕ ಹೊಣೆಗಾರಿಕೆಗೆ ಬದ್ಧರಾಗಿರಬೇಕು ಎಂದು ಗಾಢವಾಗಿ ನಂಬಿದವರು. ಸುತ್ತಲ ಸಮಾಜದಲ್ಲಿ ಕಂಡು ಬಂದ ಶೋಷಣೆ, ನೋವು ಯಾತನೆಗಳು, ಅನ್ಯಾಯಗಳು ಅವರನ್ನು ಕಾಡಿಸದೇ ಬಿಟ್ಟಿಲ್ಲ. ಎಂದೇ ಅವರ ಕಲಾಕೃತಿಗಳಲ್ಲ್ಲಿ ಸಾಮಾಜಿಕ ಕಳಕಳಿ, ಕಕ್ಕುಲಾತಿಗಳು ಒಂದು ಬಣ್ಣ ಹೆಚ್ಚಾಗಿಯೇ ಇದೆ ಎನ್ನುತ್ತಾರೆ ವಿಮರ್ಶಕರು. ಶೋಷಣೆಗೊಳಗಾದ ಶ್ರಮಜೀವಿಗಳು ಮತ್ತು ಮಹಿಳೆಯರು, ಭವಿಷ್ಯದ ಭರವಸೆಯಿಲ್ಲದ ಕಳಾಹೀನ ಮಕ್ಕಳು, ಹಳ್ಳಿಗಳ ನಿರ್ಗತಿಕರು, ಅಸ್ಪಶ್ಯರು, ಭೀಕರ ಬರಗಾಲದ ಹಸಿವಿನಿಂದ ಕಂಗೆಟ್ಟ ಮುಖಗಳು -ಹೀಗೆ, ಜಾತಿ-ವರ್ಗಭೇದಗಳಿಂದ ಹಿಡಿದು ಪ್ರಕೃತಿಯ ವಿಕೋಪಗಳವರೆಗೆ, ಹಲವು ಹನ್ನೊಂದು ಪೀಡನೆಗಳಿಂದ ಜರ್ಝರಿತವಾದ ಸಮಾಜದ ನೋವಿನ ಮುಖಗಳು, ಯಾತನೆಯ ದೃಶ್ಯಗಳು ಅವರ ಚಿತ್ರಗಳಲ್ಲಿ ಓತಪ್ರೋತವಾಗಿ ಅಭಿವ್ಯಕ್ತಿ ಪಡೆದಿವೆ. ಈ ಕರಾಳ ಮುಖಗಳನ್ನು ಬಿಂಬಿಸಲು ಅವರು ಕಡುಗಪ್ಪು ವರ್ಣವನ್ನೇ ಬಳಸುತ್ತಾರೆ. ಮೊತ್ತದಲ್ಲಿ ಹೇಳುವುದಾದರೆ, ಅನ್ಯಾಯ-ಶೋಷಣೆಗಳಿಂದ ನೊಂದ ಖಿನ್ನತೆಯ ಮುಖಗಳು, ಸಾಮಾಜಿಕ ಅಸಮಾನತೆಯಿಂದ ಭಗ್ನಗೊಂಡ ಬದುಕಿನ ಕರಾಳ ಮುಖಗಳು ಅವರ ಚಿತ್ರಗಳ ವಸ್ತು.ವಿಶೇ.ಷವಾಗಿ ನಗರದ ಬಡಜನರ ಭಗ್ನ ಬದುಕು ಅವರ ಸಂವೇದನೆಯನ್ನು ಹೆಚ್ಚಾಗಿ ಘಾಸಿಗೊಳಿಸಿವೆ. ಎಪ್ಪತ್ತರ ದಶಕದ ಅವರ ಚಿತ್ರಗಳನ್ನು ಈ ಮಾತಿಗೆ ನಿದರ್ಶನವಾಗಿ ನೋಡಬಹುದು. ನಗರದ ಕೊಳೆಗೇರಿಗಳ ಬದುಕು, ತಲೆಯ ಮೇಲೊಂದು ಸೂರಿಲ್ಲದೆ ಬಯಲಿನಲ್ಲಿ, ನಾಗರಿಕರ ಮನೆಗಳಿಗೆ ನೀರು ಹರಿಸುವ ಬೃಹತ್ ಕೊಳವೆಗಳು ಮತ್ತು ತೆಂಗು-ಈಚಲು ಗರಿಗಳ ಜೋಪಡಿಗಳಲ್ಲಿ ಅಹನ್ಯಹನಿ ಕಾಲಕ್ಷೇಪ ಮಾಡುವ ದೀನದಲಿತರ ಬದುಕು-ಬವಣೆಗಳು, ನಗರ ಜೀವನದ ಒಂಟಿತನ, ಅನಾಥ ಪ್ರಜ್ಞೆ ಅವರ ಚಿತ್ರಗಳಲ್ಲಿ ಹೃದಯವಿದ್ರಾವಕವಾಗಿ, ಖಿನ್ನಮಯವಾದ ಗಾಢನಿಗೂಢ ಬಣ್ಣಗಳಲ್ಲಿ, ನೆರಳುಬೆಳಕಿನ ಛಾಯೆಗಳಲ್ಲಿ ಬಿಂಬಿತ.
 2002ರ ಗುಜರಾತ್ ಹಿಂಸಾಕಾಂಡ ಯೂಸುಫ್ ಅರಕ್ಕಳ್ ಅವರನ್ನು ಅತಿಯಾಗಿ ಘಾಸಿಗೊಳಿಸಿದ ವಿದ್ಯಮಾನ. ಅಂದಿನ ಗುಜರಾತಿನ ಅಮಾನ ವೀಯ ವಿದ್ಯಮಾನಗಳನ್ನು ಕುರಿತು ಅರಕ್ಕಳ್ ಸರಣಿ ಚಿತ್ರಗಳನ್ನು ರಚಿಸಿದ್ದಾರೆ. ಅವರ ತೀಕ್ಷ್ಣ ಸಂವೇದನೆ ಮತ್ತು ಸಾಮಾಜಿಕ ಕಾಳಜಿ, ಕಳಕಳಿಗಳನ್ನು ಬಿಂಬಿಸುವ ಈ ಚಿತ್ರಗಳು ದಿಗಿಲು ಹುಟ್ಟಿಸುವಂಥ ಕಟು ವಾಸ್ತವದ ಅಭಿವ್ಯಕ್ತಿಯಾಗಿ ನಮ್ಮನ್ನು ಸೆಳೆಯುತ್ತವೆ, ಘಾಸಿಗೊಳಿಸುತ್ತವೆ. ಸಮಾಜದಲ್ಲಿನ ಕೇಡು ಮತ್ತು ದುಷ್ಟ ಶಕ್ತಿಗಳ ವಿರುದ್ಧ ಸಂವೇದನಾಶೀಲ ಕಲಾವಿದನೊಬ್ಬನ ಕೋಪ-ಆಕ್ರೋಶಗಳನ್ನು ಅಭಿವ್ಯಕ್ತಿಸುವ ದಾಖಲೆಗಳಾಗಿಯೂ ಅರಕ್ಕಳ್ ಅವರ ಈ ಚಿತ್ರಗಳು ಐತಿಹಾಸಿಕ ಮಹತ್ವ ಪಡೆದಿವೆ.
 ಕೇರಳದ ಚಾವಕ್ಕಾಡ್‌ನಿಂದ ಬೆಂಗಳೂರಿಗೆ, ಎಚ್‌ಎಎಲ್‌ನ ತಂತ್ರಜ್ಞನ ಉದ್ಯೋಗದಿಂದ ಕಲಾ ಪ್ರಪಂಚಕ್ಕೆ ಯೂಸುಫ್ ಅರಕ್ಕಳ್ ಅವರದು ಹಿಂದಿರುಗಿ ನೋಡದ ಮಹಾ ಪಯಣ. ಬಡತನದಿಂದ ಕಲೆಯ ಸಿರಿಗೆ ನಡೆಸಿದ ಪಯಣ. ‘‘ಈಜಲಾಗದಿದ್ದರೆ ತೇಲುತ್ತಲಾದರೂ ಇರಿ. ಮುಳುಗು ವುದು ಮಾತ್ರ ಬೇಡ’’-ಇದು ಅರಕ್ಕಳ್ ಅವರದೇ ಮಾತು. ಪ್ರತಿಭೆಯ ಜೊತೆಗೆ ಈ ಸಂಕಲ್ಪಬಲ ಮತ್ತು ಇಚ್ಛಾಶಕ್ತಿಗಳೇ ಅವರನ್ನು ಅಂತಾರಾಷ್ಟ್ರೀಯ ಖ್ಯಾತಿಯ ಎತ್ತರಕ್ಕೆ ಒಯ್ದಿರಬೇಕು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರಕ್ಕಳ್ ಅವರ ಕಲಾಕೃತಿಗಳು ಹಲವಾರು ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಪ್ರದರ್ಶನ ಗೊಂಡಿವೆ. 1971ರಲ್ಲಿ ಬೈಲೊರಷ್ಯಾದಲ್ಲಿ ನಡೆದ ಭಾರತೀಯ ಕಲಾಕೃತಿಗಳ ಪ್ರದರ್ಶನ, 1985ರಲ್ಲಿ ಅಮೆರಿಕದ ಬೇಮಾಂಟ್‌ನಲ್ಲಿ ನಡೆದ ಸಮಕಾಲೀನ ಭಾರತೀಯ ಚಿತ್ರ ಕಲಾ ಪ್ರದರ್ಶನಗಳಲ್ಲದೆ, ಜಪಾನಿನ ಕುವೋಕಾ, ಹವಾನ ಮತ್ತ ಲಂಡನ್ನಿನ ‘ದಿ ಆಟ್‌ರ್  ಗ್ಯಾಲರಿ’ ಮೊದಲಾದೆಡೆಗಳಲ್ಲೂ ಅವರ ಚಿತ್ರಗಳು- ಶಿಲ್ಪಗಳೂ ಪ್ರದರ್ಶನ ಕಂಡಿವೆ. ಅವರ ‘ವಾರ್ ಗುಜರ್ನಿಕ ರೆಕರ್ಸ್‌’ ಕೃತಿಗೆ 2033ರಲ್ಲಿ ಲೊರೆನ್ಸೊ-ದೆ-ಮೆಡಿಸಿ ಬೆಳ್ಳಿ ಪದಕ ಮತ್ತು ಫ್ಲಾರೆನ್ಸ್ ನಲ್ಲಿ ನಡೆದ ‘ಸಮಕಾಲೀನ ಚಿತ್ರ ಕಲೆ ಪ್ರದರ್ಶನ’ದಲ್ಲಿ ‘ಬೇಕನ್ಸ ಮ್ಯಾನ್ ವಿತ್ ದಿ ಚೈಲ್ಡ್ ಅಂಡ್ ಪ್ರೀಸ್ಟ್’ ತೈಲ ವರ್ಣ ಚಿತ್ರಕ್ಕೆ ಚಿನ್ನದ ಪದಕ ಲಭಿಸಿದೆ. ಕರ್ನಾಟಕ ಲಲಿತ ಕಲಾ ಅಕಾಡಮಿ, ಕೇಂದ್ರ ಲಲಿತ ಕಲಾ ಅಕಾಡಮಿ, ಕೇರಳ ಸರಕಾರ ನೀಡುವ ರಾಜಾ ರವಿ ವರ್ಮಾ ಪ್ರಶಸ್ತಿ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಅರಕ್ಕಳ್ ಅವರನ್ನು ಅರಸಿ ಬಂದಿವೆ.

ಪ್ರಸಿದ್ಧಿ ಪ್ರಶಸ್ತಿಗಳ ಹಮ್ಮುಬಿಮ್ಮು ಯೂಸುಫ್ ಅರಕ್ಕಳ್ ಅವರಲ್ಲಿರಲಿಲ್ಲ. ಮಿತ್ರರು ವರ್ಣಿಸುವಂತೆ, ಅವರು ಸ್ನೇಹ ಜೀವಿಯಾಗಿದ್ದರು. ಕಲೆ ಮತ್ತು ಕಲಾವಿದರ ಉತ್ತಮ ಸಂಘಟಕರಾಗಿದ್ದರು. ಕಲಾಭಿರುಚಿ ಬೆಳೆಸುವುದರಲ್ಲಿ ಹಾಗೂ ಕಲೆಯ ಪೋಷಣೆ, ಪ್ರೋತ್ಸಾಹ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. 1970ರಷ್ಟು ಹಿಂದೆಯೇ ಬೆಂಗಳೂರಿನಲ್ಲಿ ಕರ್ನಾಟಕ ಕಲಾವಿದರ ಸಂಘವನ್ನು ಕಟ್ಟಿ ಕಲಾವಿದರ ಸಮಾಗಮ-ಚರ್ಚೆ-ಸಮಾಲೋಚನೆಗಳಿಗೆ ವೇದಿಕೆಯೊಂದನ್ನು ಕಲ್ಪಿಸಿದ್ದರು. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕಲಾವಿದರ ಶಿಬಿರ ಅವರ ಕಲ್ಪನೆಯ ಕೂಸೇ ಆಗಿತ್ತು. ಅದರಲ್ಲಿ ಅವರು ವಹಿಸಿದ ಪಾತ್ರ ಸ್ಮರಣೀಯವಾದುದೆಂದು ಕಲಾವಿದ ಗೆಳೆಯರು ಯಾವಾಗಲೂ ನೆನೆಯುತ್ತಾರೆ. ಯೂಸುಫ್ ಅರಕ್ಕಳ್ ಸಾಹಿತ್ಯ ರಚನೆಯಲ್ಲೂ ಆಸಕ್ತರಾಗಿದ್ದರು. ಕವಿತೆಗಳನ್ನು ಬರೆದಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಅಂಕಣ ಲೇಖನಗಳನ್ನು ಬರೆಯುತ್ತಿದ್ದರು. ಚಿತ್ರಕಲೆ ಮತ್ತು ಶಿಲ್ಪಕಲೆ ಅವರ ಜೀವನದ ಉಸಿರಾಗಿತ್ತು. ಜೀವಿತದ ಕೊನೆಯವರೆಗೂ ಅವರು ವರ್ಣ ಚಿತ್ರ, ರೇಖಾ ಚಿತ್ರ ಮತ್ತು ಶಿಲ್ಪಗಳ ರಚನೆಯಲ್ಲಿ ನಿರತರಾಗಿದ್ದರು. ಸಹ ಕಲಾವಿದರು ಮತ್ತು ಸಾಹಿತಿಗಳೊಂದಿಗೆ ವಿಶೇಷ ನಂಟು ಹೊಂದಿದ್ದ ಅರಕ್ಕಳ್ ಸಾಹಿತಿ ಕಲಾವಿದ ಮಿತ್ರರ ಭಾವಚಿತ್ರಗಳನ್ನೂ ಅಣಕಚಿತ್ರ(ಕ್ಯಾರಿಕೇಚರ್)ಗಳನ್ನೂರಚಿಸಿರುವುದುಂಟು. ಅವುಗಳಲ್ಲಿ, ಎಂ.ಎಫ್.ಹುಸೈನ್ ಅವರನ್ನು ಕುರಿತ ಸರಣಿ ಚಿತ್ರಗಳು, ಕೇರಳದ ಕವಯತ್ರಿ ಕಮಲಾ ದಾಸ್ ಮತ್ತು ಕಾದಂಬರಿಕಾರ ಬಷೀರ್ ಅವರ ಚಿತ್ರಗಳು ಮುಖ್ಯವಾದುವು. ವ್ಯಕ್ತಿಗಳು, ನಿಸರ್ಗ, ಪಶುಪಕ್ಷಿಪ್ರಾಣಿಗಳ ಜೀವನವನ್ನು ನಿರೂಪಿಸುವ ಅರಕ್ಕಳ್ ಅವರ ‘ಚಿತ್ರಮಾಲಿಕೆ ಭಾರತೀಯ ಚಿತ್ರ ಕಲಾಶೈಲಿ ಮತ್ತು ಸಂಪ್ರದಾಯಗಳಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿವೆ. ಈ ಮಾತಿಗೆ ನಿದರ್ಶನವಾಗಿ ಅವರ ಕಾಗೆ, ಗಾಳಿಪಟ, ಶಯ್ಯಾ ವಿರಹಿ, ಕಿಟಕಿಯ ಕಂಬಿಗಳನ್ನು ಎಣಿಸುತ್ತಿರುವ ಮುದುಕ, ಕಿತ್ತಳೆ ಹಣ್ಣು ಕದಿಯುವ ಕೋತಿಗಳು, ಕಾಶಿಯ ಬಿಳಿಸೀರೆಯ ಪರಿತ್ಯಕ್ತ ವಿಧವೆಯರು ಮೊದಲಾದ ಚಿತ್ರ ಮಾಲೆಯನ್ನು ಗಮನಿಸಬಹುದು. ಯೇಸು ಕ್ರಿಸ್ತನ ಜೀವನ ಕುರಿತ ‘ಜೀಸಸ್’ ಚಿತ್ರ ಮಾಲಿಕೆ ಮತ್ತು ‘ಫೇಸಸ್ ಆಫ್ ಕ್ರಿಯೇಟಿವಿಟಿ’ ಅರಕ್ಕಳ್ ಅವರ ಕೊನೆಗಾಲದ ಚಿತ್ರಮಾಲಿಕೆಗಳು. ‘ಫೆಸಸ್ ಆಫ್ ಕ್ರಿಯೇಟಿವಿಟಿ’- ಅಮೃತಾ ಶೇರ್‌ಗಿಲ್‌ರಿಂದ ಹಿಡಿದು ಕ್ರಿಷೆನ್ ಖನ್ನಾವರೆಗೆ 135 ಮಂದಿ ಸುಪ್ರಸಿದ್ಧ ಭಾರತೀಯ ಚಿತ್ರ ಕಲಾವಿದರ ಬದುಕು-ಕೃತಿ-ಭಾವ ಚಿತ್ರಗಳ ಚಿತ್ರಮಾಲಾ ಸಂಪುಟ. ಇದು ಭಾರತೀಯ ಚಿತ್ರಕಲೆಯ ಮಹಾನ್ ಕಲಾವಿದರಿಗೆ ನನ್ನ ಗೌರವ ಕಾಣಿಕೆ. ಇದುವರೆಗೆ ಯಾರೂ ಮಾಡದಂಥ ಕೃತಜ್ಞತಾಪೂರ್ವಕ ಕಲಾ ಕಾಣಿಕೆಎಂದು ಅರಕ್ಕಳ್ ಭಾರತೀಯ ಕಲಾ ಪರಂಪರೆಯನ್ನು ನಮ್ರತೆಯಿಂದ ಸ್ಮರಿಸಿದ್ದಾರೆ. ‘ಜೀಸಸ್’ ಚಿತ್ರ ಮಾಲಿಕೆಯನ್ನು ವ್ಯಾಟಿಕನ್‌ನಲ್ಲಿ ಪ್ರದರ್ಶಿಸಬೇಕೆಂಬುದು ಅವರ ಕನಸಾಗಿತ್ತು. ಮುಂದೊಂದು ದಿನ ಅವರ ಈ ಕನಸು ನನಸಾದಿತೋ, ಕಾದು ನೋಡಬೇಕು.
ಭವಿಷ್ಯ ಯಾನ-ಯೂಸುಫ್ ಅರಕ್ಕಳ್ ಅವರ ಅಜ್ಞಾತವಾಗಿಯೇ ಉಳಿದಿರುವ ಇನ್ನೊಂದು ಕಲಾಕೃತಿ. ಭವಿಷ್ಯ ಯಾನ ಆಧುನಿಕ ವಿಮಾನದ ಕಲಾ ಸೃಷ್ಟಿ. ಅಲ್ಯುಮಿನಿಯಂ ಮತ್ತು ಇತರ ಲೋಹಗಳನ್ನು ಬಳಸಿ ಅರಕ್ಕಳ್ ಈ ಕಲಾಕೃತಿಯನ್ನು ಸೃಷ್ಟಿಸಿದ್ದಾರೆ. ಇದು ಬೆಂಗಳೂರು ಮಹಾನಗರದ ಮಿನ್ಸ್ ಚೌಕ-ಮಿನ್ಸ್ ಸ್ಕ್ವೇರ್‌ನಲ್ಲಿ ಪ್ರತಿಷ್ಠಾಪಿಸುವ ಉದ್ದೇಶದಿಂದ ರಚಿಸಲಾದ ಪ್ರಾಯೋಜಿತ ಕಲಾಕೃತಿ. ಅಧಿಕಾರಶಾಹಿಯ ಅಸೀಮ ಅಲಕ್ಷ್ಯ-ಅರಸಿಕತೆಗಳಿಂದಾಗಿ ಅರಕ್ಕಳ್ ಅವರ ಜೀವಿತ ಕಾಲದಲ್ಲಿ ಇದರ ಪ್ರತಿಷ್ಠಾಪನೆ ಆಗಲಿಲ್ಲ. ಸರಕಾರ ಇನ್ನಾದರೂ ಕಣ್ತೆರದು ಈ ಕಲಾಕೃತಿಗೆ ಮಿನ್ಸ್ ಚೌಕದಲ್ಲಿ ಒಂದಿಷ್ಟು ಜಾಗ ಮಾಡಿಕೊಟ್ಟಲ್ಲಿ ಅದು ಅರಕ್ಕಳ್ ಅವರಿಗೆ ನಾಡು ಸಲ್ಲಿಸಬಹುದಾದ ಮರಣೋತ್ತರ ಪ್ರಶಸ್ತಿಯಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News