ಸಚಿವ ಕಾಗೋಡು ತಿಮ್ಮಪ್ಪನವರ ನಡೆ ಖಂಡನೀಯ: ಉಮೇಶ್

Update: 2016-10-09 16:42 GMT

    ಸೊರಬ, ಅ.9: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ತಾಲೂಕಿನ ಬಗರ್ ಹುಕುಂ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಜೆಡಿಎಸ್ ಕಾರ್ಯಕರ್ತರನ್ನು ನೇಮಿಸಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಣಾಮ ಮಾಡಲು ಹೊರಟಿರುವ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರ ನಡೆ ಖಂಡನೀಯ ಎಂದು ಸೊರಬ ಬ್ಲಾಕ್ ಅಧ್ಯಕ್ಷ ಎಂ.ಡಿ ಉಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ರವಿವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಹಾಗೂ ಮುಖಂಡರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      

ತಾಲೂಕಿನಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಕುಮಾರ ಬಂಗಾರಪ್ಪನವರ ನಾಯಕತ್ವವನ್ನು ಸಹಿಸದ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರು ಜೆಡಿಎಸ್ ಶಾಸಕರ ಆಣತಿಯಂತೆ ವರ್ತಿಸುತ್ತಿರುವುದು ಅವರ ಹಿರಿತನ ಹಾಗೂ ಮುತ್ಸದ್ಧಿತನಕ್ಕೆ ಶೋಭೆತರುವಂತದಲ್ಲ ಎಂದು ಕಿಡಿಕಾರಿದರು.ಕಾಗೋಡು ಅವರು ರಾಜಕಾರಣಕ್ಕೆ ದೊಡ್ಡವರು ಇರಬಹುದು ಆದರೆ ಪಕ್ಷದ ನಿಯಾಮಾವಳಿಗಳಿಗೆ ಯಾರು ದೊಡ್ಡವರಲ್ಲ. ಸುದೀರ್ಘ ರಾಜಕಾರಣದ ಅನುಭವವಿರುವ ಕಾಗೋಡು ತಿಮ್ಮಪ್ಪಅವರಿಗೆ ಪಕ್ಷದ ಸಿದ್ಧಾಂತಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತಗೊಂಡಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಕಾರ್ಯಕರ್ತರು ಹಾಗೂ ಮುಖಂಡರು ಕುಮಾರ್ ಬಂಗಾರಪ್ಪಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಬಲಿ ಬಂಗಾರಪ್ಪ ಮಾತನಾಡಿ, ರಾಜಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಬದಲಾವಣೆ ಎನ್ನುವುದು ಅನಿವಾರ್ಯವಾಗಿದೆ. ತಾಲೂಕಿನಾದ್ಯಂತ ಕುಮಾರ ಬಂಗಾರಪ್ಪಅವರ ಬಗ್ಗೆ ಅಭಿಮಾನ ವ್ಯಕ್ತವಾಗುತ್ತಿದೆ. ಪಕ್ಷದ ಸಂಘಟನೆಗೆ ಕಾರ್ಯಕರ್ತರು ಉತ್ಸಾಹ ತೋರಿಸುತ್ತಿದ್ದಾರೆ. ಆದರೆ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಕಾಗೊಡು ತಿಮ್ಮಪ್ಪಅವರು, ಕುಮಾರ ಬಂಗಾರಪ್ಪ ಅವರ ಬೆಳವಣಿಗೆಯನ್ನು ಸಹಿಸಲಾರದೆ ಪರೋಕ್ಷವಾಗಿ ಪ್ರತೀ ಸಂದರ್ಭದಲ್ಲಿ ಜೆಡಿಎಸ್ ಶಾಸಕರ ಪರವಾಗಿ ಕೆಲಸ ಮಾಡುತ್ತಾ ತಾಲೂಕಿನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣರಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

 ಜಿಲ್ಲೆಯಾದ್ಯಂತ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿರುವುದು ಹೈಕಮಾಂಡ್‌ಗೆ ಸ್ಪಷ್ಟವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದೊರೆಯುವುದು ಸೊರಬದಲ್ಲಿ ಮಾತ್ರ ಎಂದ ಅವರು, ಜಿಲ್ಲೆಯ ಪಕ್ಷದ ಈ ಪರಿಸ್ಥಿತಿಗೆ ನೇರವಾಗಿ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಅವರೇ ಕಾರಣವಾಗಿದ್ದ್ದಾರೆ. ಕೂಡಲೇ ತಾಲೂಕಿನ ಬಗರ್ ಹುಕುಂ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಉಸ್ತುವಾರಿ ಮಂತ್ರಿಗಳು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ, ಯುವ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ್, ಮುಖಂಡರಾದ ವೈ.ಜಿ ಪುಟ್ಟಸ್ವಾಮಿ, ಯೂಸುಫ್ ಸಾಬ್, ಹೇಮಚಂದ್ರ ಅಂಡಿಗೆ, ಮಂಜಪ್ಪ, ಬಸವರಾಜ್, ಗಣಪತಿ, ಚಂದ್ರಣ್ಣ, ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News