ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ‘ಗಡಿ’ ದಾಟದಂತೆ ವಾಜಪೇಯಿ ತಡೆದರು : ಮಾಜಿ ಸೇನಾ ಮುಖ್ಯಸ್ಥ ಮಲಿಕ್

Update: 2016-10-11 07:41 GMT

ಅಹ್ಮದಾಬಾದ್, ಅ.11: ಕಾರ್ಗಿಲ್ ಯುದ್ಧದ ಸಂದರ್ಭ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ (ನಿವೃತ್ತ) ವಿ.ಪಿ. ಮಲಿಕ್ ಆಸಕ್ತಿದಾಯಕ ಮಾಹಿತಿಯೊಂದನ್ನು ಹೊರಗೆಡಹಿದ್ದಾರೆ. ಭಾರತೀಯ ಸೇನೆ ಇತ್ತೀಚೆಗೆ ಗಡಿಯಾಚೆಗೆ ಸೀಮಿತ ದಾಳಿ ನಡೆಸಿದ್ದನ್ನು ಸ್ವಾಗತಿಸಿದ ಅವರು ಇಂತಹುದೇ ದಾಳಿಯನ್ನು

1999 ರಲ್ಲಿ ಭಾರತೀಯ ಸೇನೆ ನಡೆಸಲು ಸನ್ನದ್ಧವಾಗಿದ್ದರೂ ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕಟ್ಟು ಬಿದ್ದುಸೇನೆ ಸೀಮಿತ ದಾಳಿ ನಡೆಸದಂತೆ ತಡೆದರು ಎಂದು ಹೇಳಿದ್ದಾರೆ.

ಅಹ್ಮದಾಬಾದ್ ನಲ್ಲಿ ಗ್ಲೋಬಲ್ ಎಕ್ಸ್ ಪೋ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಲಿಕ್ ಹೇಳಿದಂತೆ, 1999ರ ಜೂನ್ 2ರಂದು ಅಂದಿನ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಬೃಜೇಶ್ ಮಿಶ್ರಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾರತೀಯ ಸೇನೆಗೆ ಗಡಿ ದಾಟದಂತೆ ಸೂಚನೆ ನೀಡಲಾಗಿತ್ತು ಎಂದು ತಿಳಿಸಿದ್ದರು. ಇದರಿಂದ ಸೇನೆ ಅಸಮಾಧಾನಗೊಂಡಿತ್ತು, ಎಂದು ಅವರು ವಿವರಿಸಿದ್ದಾರೆ.

ಭಾರತ ಈಗ ಸೀಮಿತ ದಾಳಿ ನಡೆಸಿದ ನಂತರ ಅಂತಾರಾಷ್ಟ್ರೀಯ ಸಮುದಾಯದ ಎದುರು ಸಮರ್ಥನೆಗಾಗಿ ಭಿಕ್ಷೆ ಬೇಡುವ ಅಗತ್ಯವಿಲ್ಲ, ಎಂದು ಹೇಳಿದರು. ಪಾಕಿಸ್ತಾನ ತನ್ನ ಕೃತ್ಯಗಳನ್ನು ಮುಂದುವರಿಸಿಕೊಂಡು ಹೋಗಿದ್ದೇ ಆದಲ್ಲಿ ನಾವು ಯುದ್ಧ ಮಾಡುತ್ತೇವೆ, ಎಂದು ನಾವು ಅವರಿಗೆ ಹೇಳಬೇಕು ಎಂದ ಮಲಿಕ್ ‘‘ಕೇವಲ ಒಂದು ಸೀಮಿತ ದಾಳಿಯಿಂದ ಪಾಕಿಸ್ತಾನ ಬದಲಾಗದು’’ ಎಂದು ಹೇಳಿದ್ದಾರೆ.

ಸೀಮಿತ ದಾಳಿ ಸಂಬಂಧ ನಡೆಯುತ್ತಿರುವ ರಾಜಕೀಯದ ಬಗ್ಗೆ ಮಾತನಾಡಿದ ಅವರು ರಾಷ್ಟ್ರೀಯ ಸುರಕ್ಷೆಯ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರದ ರಾಜಕಾರಣಿಗಳು ಮಾತನಾಡುವ ಬದಲು ಮೌನದಿಂದಿರುವುದು ಲೇಸು ಎಂದೂ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News