ಉತ್ತರ ಭಾರತದಲ್ಲಿ 51 ವರ್ಷಗಳಲ್ಲೇ ಅತ್ಯಧಿಕ ಉಷ್ಣಾಂಶ ದಾಖಲು

Update: 2024-05-01 02:24 GMT

Photo: PTI

ಹೊಸದಿಲ್ಲಿ: ಇಡೀ ಭಾರತ ಸುಡು ಬಿಸಿಲಿನಿಂದ ಕಂಗೆಟ್ಟಿದ್ದು, ದಕ್ಷಿಣ ಭಾರತದಲ್ಲಿ ಏಪ್ರಿಲ್ ತಿಂಗಳ ಎರಡನೇ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಅಂತೆಯೇ ಪೂರ್ವ ಹಾಗೂ ಈಶಾನ್ಯ ಭಾರತ 51 ವರ್ಷಗಳಲ್ಲೇ ಅತಿಹೆಚ್ಚು ತಾಪಮಾನವನ್ನು ಕಂಡಿದೆ ಎಂದು ಐಎಂಡಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಕಳೆದ ಕೆಲ ವಾರಗಳಿಂದ ಎಲ್ಲ ಕಡೆಗಳಲ್ಲಿ ಬಿಸಿಲಿನ ಧಗೆ ವ್ಯಾಪಕವಾಗಿದೆ.

ಕಳೆದ ಕೆಲ ದಿನಗಳಿಂದ ಭಾರತದ ಅತಿ ದೊಡ್ಡ ನಗರಗಳಾದ ಬೆಂಗಳೂರು, ಕೊಲ್ಕತ್ತಾ ಮತ್ತು ಮುಂಬೈನಲ್ಲಿ ಉಷ್ಣಾಂಶ ಕುಸಿತ ಕಂಡಿದೆ. ಇಡೀ ದಕ್ಷಿಣ ಭಾರತದಲ್ಲಿ ಏಪ್ರಿಲ್ ತಿಂಗಳ ಸರಾಸರಿ ಉಷ್ಣಾಂಶ 37.2 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. 2016ರ ಏಪ್ರಿಲ್ ನಲ್ಲಿ ದಾಖಲಾದ 37.6 ಡಿಗ್ರಿ ಹೊರತುಪಡಿಸಿದರೆ, ಹವಾಮಾನ ದಾಖಲೆ ಆರಂಭವಾದ 1901ರ ಬಳಿಕ ದಾಖಲಾದ ಎರಡನೇ ಗರಿಷ್ಠ ತಾಪಮಾನ ಇದಾಗಿದೆ. ಬೆಂಗಳೂರು ನಗರದಲ್ಲಿ ಇತಿಹಾಸದಲ್ಲೇ ಗರಿಷ್ಠ ಉಷ್ಣಾಂಶ ಏಪ್ರಿಲ್ ನಲ್ಲಿ ಕಂಡುಬಂದಿದೆ. ಉದ್ಯಾನನಗರಿ ಎಂದು ಕರೆಸಿಕೊಂಡಿದ್ದ ಈ ಮಹಾನಗರದಲ್ಲಿ ಏಪ್ರಿಲ್ ನಲ್ಲಿ ಸತತ ಅರು ದಿನಗಳು ಸೇರಿದಂತೆ 13 ತೀವ್ರ ಉಷ್ಣ ದಿನಗಳು ದಾಖಲಾಗಿವೆ.

ಪೂರ್ವ ಭಾರತದಲ್ಲೂ ಸುಧೀರ್ಘ ಉಷ್ಣಹವೆ ಮುಂದುವರಿದಿದೆ. ಐಎಂಡಿ ಅಂಕಿ ಅಂಶಗಳ ಪ್ರಕಾರ ಈ ತಿಂಗಳಲ್ಲಿ ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ 1973ರ ಬಳಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಸರಾಸರಿ ರಾತ್ರಿ ತಾಪಮಾನ ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಿದೆ. ಬಂಗಾಳ, ಜಾರ್ಖಂಡ್ ಮತ್ತು ಬಿಹಾರದಲ್ಲಿ ತೀವ್ರ ಸುಡು ಬಿಸಿಲಿನ ವಾತಾವರಣ ಇದೆ.

ಕೊಲ್ಕತ್ತಾದ ಡಂಡಂನಲ್ಲಿ ಮಂಗಳವಾರ 43 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಇದು ಶತಮಾನದ ಹಿಂದೆ ದಾಖಲಾಗಿದ್ದ ಸರ್ವಕಾಲಿಕ ದಾಖಲೆಯಾದ 43.9ಕ್ಕಿಂತ ತುಸು ಕಡಿಮೆ. ಏಪ್ರಿಲ್ ತಿಂಗಳಲ್ಲಿ ಕೊಲ್ಕತ್ತಾದಲ್ಲಿ 43 ಡಿಗ್ರಿ ತಾಪಮಾನ ದಾಖಲಾಗಿರುವುದು ಇತಿಹಾಸದಲ್ಲೇ ಇದು ಎರಡನೇ ಬಾರಿ.

ಈ ಬೇಸಿಗೆಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಪಾದರಸ ಮಟ್ಟ 47 ಡಿಗ್ರಿ ಮೀರಿದ್ದು, ಬಂಗಾಳದ ಕಲೈಕುಂಡಾದಲ್ಲಿ 47.2 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಇದು ಸರಾಸರಿಗಿಂತ 10.4 ಡಿಗ್ರಿಯಷ್ಟು ಅಧಿಕ. ಜಾರ್ಖಂಡ್ ನ ಬಹರಗೋರಾದಲ್ಲಿ 47.1 ಡಿಗ್ರಿ ತಾಪಮಾಣ ದಾಖಲಾಗಿದ್ದು, ಈ ಪ್ರದೇಶದ ಕಲೈಕುಂಡಾ, ಪಣಾಗಢ ಮತ್ತು ಬಲಸೋರ್ ನಲ್ಲಿ ವಾಡಿಕೆಗಿಂತ 10 ಡಿಗ್ರಿಯಷ್ಟು ಅಧಿಕ ತಾಪಮಾನ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News