ಗುಜರಾತ್: ಸತ್ತ ದನ ವಿಲೇವಾರಿ ಮಾಡದ ದಲಿತ ಕುಟುಂಬಕ್ಕೆ ಬಹಿಷ್ಕಾರ

Update: 2016-10-12 03:46 GMT

ಅಹ್ಮದಾಬಾದ್, ಅ.12: ಪ್ರಬಲ ದರ್ಬಾರ್ ಜಾತಿಯ ಕುಟುಂಬಕ್ಕೆ ಸೇರಿದ ಸತ್ತ ದನವನ್ನು ವಿಲೇವಾರಿ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 12 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಪಠಾಣ್ ಜಿಲ್ಲೆ ಸಂತಾಲಪುರ ತಾಲೂಕು ಪಾರ್ ಎಂಬ ಗ್ರಾಮದಲ್ಲಿ ನಡೆದಿದೆ.
ಉನಾ ಘಟನೆ ಬಳಿಕ ಸಾಮೂಹಿಕ ನಿರ್ಧಾರ ಕೈಗೊಂಡ ದಲಿತರು ಸತ್ತ ದನಗಳನ್ನು ವಿಲೇವಾರಿ ಮಾಡದಿರಲು ನಿರ್ಧರಿಸಿದ್ದರು. ಇದರಿಂದ ಕೋಪಗೊಂಡ ದರ್ಬಾರ್ ಸಮುದಾಯದವರು, ದಲಿತ ವರ್ಗಕ್ಕೆ ಸೇರಿದವರಿಗೆ ಅಗತ್ಯ ವಸ್ತುಗಳನ್ನು ನೀಡದಿರಲು ಮತ್ತು ವಾಹನಗಳನ್ನು ಕೂಡಾ ಬಳಸದಂತೆ ತಡೆದಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಧೀರಜ್ ಪರ್ಮಾರ್, ಜೀವನ್ ಪರ್ಮಾರ್ ಹಾಗೂ ಚನ್ನಾಬಾಯಿ ಬೊರೇಸಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಹಿಷ್ಕಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಗ್ರಾಮದ ಸರಪಂಚನ ವಿರುದ್ಧ ದೂರು ದಾಖಲಾಗಿದೆ.
"ಭಮ್ಮಾರ್‌ಸಿಂಗ್ ಜಡೇಜಾ ನೇತೃತ್ವದಲ್ಲಿ ಕೆಲ ಮಂದಿ ದರ್ಬಾರ್ ಸಮುದಾಯದ ವ್ಯಕ್ತಿಗಳು ಅಕ್ಟೋಬರ್ 6ರಂದು ತಮ್ಮ ಸತ್ತ ದನವನ್ನು ವಿಲೇವಾರಿ ಮಾಡುವಂತೆ ನಮ್ಮಲ್ಲಿ ಮನವಿ ಮಾಡಿದರು. ಉನಾ ಘಟನೆ ಹಿನ್ನೆಲೆಯಲ್ಲಿ ಕೈಗೊಂಡ ಪ್ರತಿಜ್ಞೆಯಂತೆ ನಾವು ಅದಕ್ಕೆ ನಿರಾಕರಿಸಿದೆವು. ಇದರಿಂದ ಉದ್ರಿಕ್ತರಾದ ಇಡೀ ಸಮುದಾಯದವರು ರಾತ್ರಿಯೇ ಸಭೆ ಕರೆದು ದಲಿತರಿಗೆ ಬಹಿಷ್ಕಾರ ಹಾಕಿದರು. ಇದನ್ನು ಸರಪಂಚ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ್ದಾರೆ" ಎಂದು ಧೀರಜ್ ವಿವರಿಸಿದ್ದಾರೆ.
ಗ್ರಾಮದ ಅಂಗಡಿಗಳಲ್ಲಿ ನಮಗೆ ಹಾಲು, ದಿನಸಿಯಂಥ ಅಗತ್ಯ ವಸ್ತುಗಳನ್ನೂ ನೀಡುತ್ತಿಲ್ಲ. ನಮ್ಮ ಟಿವಿಗಳ ಕೇಬಲ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News