ಸ್ವಚ್ಛ ಭಾರತಕ್ಕಿರುವ ಆದ್ಯತೆ ಅಸ್ಪಶ್ಯತೆ ನಿವಾರಣೆಗೇಕಿಲ್ಲ: ಡಾ.ಬರಗೂರು ರಾಮಚಂದ್ರಪ್ಪ ಪ್ರಶ್ನೆ

Update: 2016-10-16 13:50 GMT

ಬೆಂಗಳೂರು, ಅ.16: ಸ್ವಚ್ಛ ಭಾರತದ ಹೆಸರಿನಲ್ಲಿ ಬೀದಿ ಭಾರತದ ಸ್ವಚ್ಛತೆಗೆ ನೀಡಿರುವ ಆದ್ಯತೆಯನ್ನು ಅಸ್ಪಶ್ಯತೆ, ಜಾತೀಯತೆ, ವರ್ಣವ್ಯವಸ್ಥೆಯನ್ನು ತೊಡೆದು ಹಾಕುವ ಸಾಮಾಜಿಕ ಭಾರತಕ್ಕೆ ನೀಡದಿರುವುದು ದುರಂತವೇ ಸರಿ ಎಂದು ಹಿರಿಯ ಸಾಹಿತಿ, 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರವಿವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮಜಯಂತಿ ವರ್ಷಾಚರಣೆಯ ಭಾಗವಾಗಿ ಹಮ್ಮಿಕೊಂಡಿದ್ದ ‘ಸ್ವಾತಂತ್ರ-70, ದಲಿತರ ಸ್ಥಿತಿಗತಿ ಮತ್ತು ನಾವು-ನೀವು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಅಂತರಂಗದೊಳಗೆ ನೆಲೆಸಿರುವ ಜಾತೀಯತೆಯ ವಿಷ ಬೀಜವನ್ನು ಕಿತ್ತೊಗೆದರೆ ಮಾತ್ರ ಸಾಮಾಜಿಕ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ. ಬೀದಿ ಬದಿಯ ಭಾರತವನ್ನು ಎಷ್ಟೇ ಸ್ವಚ್ಛ ಮಾಡಿದರೂ ಅದರಿಂದ ಪ್ರಯೋಜನವಾಗದು ಎಂದು ಹೇಳಿದರು. ಸಾಮಾಜಿಕ ಭಾರತ ನಿರ್ಮಾಣ ಮಾಡುವ ಸಂಕಲ್ಪದ ಅಭಾವವಿರುವುದರಿಂದಲೇ ದೇಶದಲ್ಲಿ 1ಕೋಟಿ 78 ಲಕ್ಷದ 296 ಮಂದಿ ಇನ್ನೂ ತಾವೂ ಊಟ ಮಾಡುವ ಕೈಯಲ್ಲಿ ಮಲ ಎತ್ತುತ್ತಿದ್ದಾರೆ. ಇದರ ಜೊತೆಗೆ 8 ಕೋಟಿ 88 ಲಕ್ಷ ಜನರು ಬೇರೆ-ಬೇರೆ ಪರಿಕರಗಳಿಂದ ಮಲ ಎತ್ತುತ್ತಿದ್ದಾರೆ. ದೇಶದಲ್ಲಿ 10 ಕೋಟಿಗೂ ಅಧಿಕ ಮಂದಿ ಇಂತಹ ಅನಿಷ್ಠ ಪದ್ಧತಿಯಲ್ಲಿ ತೊಡಗಿದ್ದಾರೆಂದು ಕಿಡಿಕಾರಿದರು. ಸ್ವಚ್ಛತೆಯ ಬಗ್ಗೆ ಮಾತನಾಡುವ ಮಂದಿ ಸಾಮಾಜಿಕ ಸ್ವಚ್ಛತೆಯ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ ಅವರು, ದಲಿತರಿಗೆ ರಾಜಕೀಯ ಸಂವಿಧಾನ ಹಕ್ಕುಗಳನ್ನು ನೀಡಿದೆ. ಆದರೆ, ಸಾಮಾಜಿಕ ಸಂವಿಧಾನ ಅವುಗಳನ್ನು ಕಸಿದುಕೊಳ್ಳುತ್ತಿದೆ. ಜಾತಿ, ವರ್ಣ, ಅಸ್ಪಶ್ಯತೆ ಇನ್ನೂ ನಾಶವಾಗದಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು. 

ರಾಜಕೀಯ, ಸಾಮಾಜಿಕ ಸಂವಿಧಾನ ಏಕ ಸಂವಿಧಾನವಾಗಬೇಕು. ಈ ನಿಟ್ಟಿನಲ್ಲಿ ಹೋರಾಟಗಳು ನಡೆಯುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಹೇಳಿದರು. ಸಂವಿಧಾನ ನೀಡಿರುವ ರಾಜಕೀಯ ಪ್ರಾತಿನಿಧ್ಯವನ್ನು ಸಾಮಾಜಿಕ ಸಂವಿಧಾನ ಪ್ರತ್ಯೇಕಗೊಳಿಸುತ್ತಿದೆ. ಇಂತಹ ವೈರುದ್ಯ ದೂರವಾಗಬೇಕು. ಹಾಗೂ ಅಸ್ಪಶ್ಯರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಪರವಾದ ಏಕಮುಖ ಹೋರಾಟ ಅಗತ್ಯವಾಗಿದೆ ಎಂದು ಹೇಳಿದರು.

ಹೈಕೋರ್ಟ್‌ನ ನಿವತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಜಾತಿಗೆ ಸೀಮಿತವಾಗಿದ್ದ ಅಂಬೇಡ್ಕರ್ 125ನೆ ವರ್ಷಾಚರಣೆ ಸಂದರ್ಭದಲ್ಲಿ ವಿಶ್ವನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ಪರಂಪರೆ ಮುಂದೆಯೂ ಉಳಿಯಲಿ. ದಲಿತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲರ ಪರವಾದ ಹೋರಾಟ ಮಾಡಿದ ನಾಯಕ ಅಂಬೇಡ್ಕರ್‌ಎಂದು ಗುಣಗಾನ ಮಾಡಿದರು.

ವಿಚಾರ ಸಂಕಿರಣದಲ್ಲಿ ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ನ್ಯಾಷನಲ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಪ್ರೊ.ಎನ್.ಎಸ್.ನಾಗರಾಜ ರೆಡ್ಡಿ, ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣಕುಮಾರ್, ಡಿವೈಎಫ್‌ಐನ ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರಮೂರ್ತಿ , ದಲಿತ ಸಮಿತಿಯ ಸಹ ಸಂಚಾಲಕ ಪಿ. ನಾಗರಾಜ್, ಸಮುದಾಯ ಕರ್ನಾಟಕದ ಪಿ. ಸುರೇಂದ್ರರಾವ್ ಮತ್ತಿತರರು ಉಪಸ್ಥಿತರಿದ್ದರು.

‘ಶೋಷಣಾಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಡೆಗೆ ಎಲ್ಲರೂ ಆದ್ಯತೆ ವಹಿಸಬೇಕು. ಈ ನಿಟ್ಟಿನಲ್ಲಿ ದಲಿತ ಹೋರಾಟಗಳಿರಬೇಕು. ದಲಿತರಿಗೆ ಮಠ, ದೇವಸ್ಥಾನಗಳು ಬೇಡ ಬದಲಾಗಿ ಶಿಕ್ಷಣ, ಉದ್ಯೋಗ, ಭೂಮಿ ಬೇಕಾಗಿದೆ. ಇದಕ್ಕಾಗಿ ಹೋರಾಟಗಳು ನಡೆಯಬೇಕಾಗಿದೆ’

-ಡಾ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

 ‘ಒಂದೊಂದು ಧರ್ಮಗಳಿಗೂ ಒಂದೊಂದು ಮಹಾಗ್ರಂಥಗಳಿವೆ. ಆದರೆ, ಇಡೀ ಭಾರತೀಯರಿಗೆ ಮಹಾ ಸಂವಿಧಾನವೆಂಬ ಮಹಾಗ್ರಂಥವನ್ನು ನೀಡಿದವರು ಡಾ.ಬಾಬಾ ಸಾಬೇಬ್ ಅಂಬೇಡ್ಕರ್. ಸಂವಿಧಾನದ ಆಶಯಗಳಿಂದಾಗಿಯೇ ಇಂದು ದಲಿತರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ’

-ನ್ಯಾ.ಎಚ್.ಎನ್.ನಾಗಮೋಹನ್ ದಾಸ್ , ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News