ರಾಜ್ಯದ ಜನತೆಗೆ ಪವರ್ ಕಟ್ ಭಾಗ್ಯ

Update: 2016-10-20 18:24 GMT

<ಬಿ. ರೇಣುಕೇಶ್

ಶಿವಮೊಗ್ಗ, ಅ. 20: ಮುಂಗಾರು ಮಳೆಯ ಕೊರತೆಯಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ರಮುಖ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದಿರುವುದು ಹಾಗೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲ ಬೇಗೆಯ ನೇರ ಪರಿಣಾಮ ರಾಜ್ಯದ ವಿದ್ಯುತ್ ಪೂರೈಕೆಯ ಮೇಲೆ ಬೀರಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯವು ‘ಪವರ್‌ಕಟ್’ಗೆ ತುತ್ತಾಗುವಂತಾಗಿದ್ದು, ಜನತೆ ಕತ್ತಲಲ್ಲಿ ಮುಳುಗುವಂತಾಗಿದೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ರಾಜ್ಯದ ನಗರ-ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಜಾರಿಗೊಳಿಸಲಾಗಿದೆ. ಗುರುವಾರ ಬೆಳಗ್ಗಿನಿಂದಲೇ ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರ-ಪಟ್ಟಣ ಪ್ರದೇಶಗಳಲ್ಲಿಯೂ ಅತ್ಯಧಿಕ ಸಮಯ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದು ನಾಗರಿಕರನ್ನು ಕಂಗೆಡಿಸುವಂತೆ ಮಾಡಿದೆ. ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ ಮಳೆ ಇಳಿಮುಖವಾಗಿದೆ. ಉಷ್ಣಾಂಶದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬರುತ್ತಿದೆ. ಇದರಿಂದ ವಿದ್ಯುತ್ ಬೇಡಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಇದರಿಂದ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಮಾಡುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಕಡಿತದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು ಅನಿವಾರ್ಯವೂ ಆಗಿದೆ. ಏನು ಮಾಡಲಾಗದಂತಹ ಪರಿಸ್ಥಿತಿಯಿದೆ. ವಿದ್ಯುತ್ ಖರೀದಿ ಪ್ರಕ್ರಿಯೆ ನಡೆದರೆ ಪರಿಸ್ಥಿತಿ ಸುಧಾರಣೆಯಾಗಬಹುದು ಅಥವಾ ಜಲಮೂಲಗಳಿಂದ ಇಲ್ಲವೇ ಶಾಖೋತ್ಪನ್ನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಬೇಕು ಎಂದು ಇಂಧನ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.

ಹೆಚ್ಚಳ: ಲಭ್ಯ ಮಾಹಿತಿಗಳ ಪ್ರಕಾರ, ನಗರಗಳಲ್ಲಿ ಬೆಳಗ್ಗೆ ಹಾಗೂ ಸಂಜೆಯ ವೇಳೆ ತಲಾ 1 ಗಂಟೆ ವಿದ್ಯುತ್ ಕಡಿತ ಮಾಡಲು ಇಂಧನ ಇಲಾಖೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ, ನಗರ ಪ್ರದೇಶಗಳಲ್ಲಿ ಬೆಳಗ್ಗೆ, ಸಂಜೆ ಮಾತ್ರವಲ್ಲದೆ ಮಧ್ಯಾಹ್ನದ ಅವಧಿಯಲ್ಲಿಯೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಸ್ಥಗಿತ ಮಾಡುತ್ತಿರುವ ಮಾಹಿತಿಗಳು ನಾಗರಿಕ ವಲಯದಿಂದ ಕೇಳಿಬರುತ್ತಿದೆ. ಬೇಕಾಬಿಟ್ಟಿ ವಿದ್ಯುತ್ ಕಡಿತದಿಂದ ಕೈಗಾರಿಕೆ ಸೇರಿದಂತೆ ಇತರ ಉದ್ದಿಮೆ ವ್ಯಾಪಾರ-ವಹಿವಾಟಿನ ಮೇಲೆ ಪರಿಣಾಮ ಬೀರುವಂತಾಗಿದೆ. ಉಳಿದಂತೆ ನಗರ-ಪಟ್ಟಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತದ ಪ್ರಮಾಣ ತೀವ್ರ ಸ್ವರೂಪದಲ್ಲಿದೆ. ಕೆಲ ಗ್ರಾಮೀಣ ಭಾಗಗಳಲ್ಲಿ ಸುಮಾರು 10ಕ್ಕೂ ಅಧಿಕ ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸುತ್ತಿರುವ ಮಾಹಿತಿಯಿದ್ದು, ಸಂಜೆಯ ವೇಳೆ ಗ್ರಾಮಗಳು ಅಕ್ಷರಶಃ ಕತ್ತಲಲ್ಲಿ ಮುಳುಗುವಂತಾಗಿದೆ. ಮತ್ತೊಂದೆಡೆ ರೈತರು ಪಂಪ್‌ಸೆಟ್ ಮೂಲಕ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್‌ಗಾಗಿ ರಾತ್ರಿಯಿಡಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ತೀವ್ರ: ಸರ್ವೇ ಸಾಮಾನ್ಯವಾಗಿ ಬೇಸಿಗೆಯ ಅವಧಿಯಲ್ಲಿ ವಿದ್ಯುತ್ ಕಡಿತ ತೀವ್ರ ಸ್ವರೂಪದಲ್ಲಿರುವುದು ಕಂಡುಬರುತ್ತದೆ. ಆದರೆ, ಈ ಬಾರಿ ಚಳಿಗಾಲದ ಆರಂಭದಲ್ಲಿಯೇ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಜಾರಿಗೊಳಿಸಲಾಗಿದೆ. ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದಿಸುವ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದಲ್ಲಾಗಿರುವ ಕೊರತೆ, ಉಷ್ಣಾಂಶದಲ್ಲಾಗಿರುವ ದಿಢೀರ್ ಹೆಚ್ಚಳ ಹಾಗೂ ವಿದ್ಯುತ್ ಬಳಕೆಯ ಪ್ರಮಾಣ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಚಳಿಗಾಲದ ಆರಂಭದಲ್ಲಿಯೇ ಅನಿಯಮಿತ ಲೋಡ್‌ಶೆಡ್ಡಿಂಗ್ ಜಾರಿಗೊಳಿಸಲಾಗಿದೆ ಎಂದು ಸ್ಥಳೀಯ ಮೆಸ್ಕಾಂ ಮೂಲಗಳು ಹೇಳುತ್ತವೆ. ರಾಜ್ಯದ ಮುಕ್ಕಾಲು ಭಾಗ ವಿದ್ಯುತ್ ಬೇಡಿಕೆ ಈಡೇರಿಸುವ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಬೇಸಿಗೆಯ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಗೆ ನೀರು ಮೀಸಲಿಡುವ ಉದ್ದೇಶದಿಂದ ಪ್ರಸ್ತುತ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣ ಕಡಿಮೆಗೊಳಿಸಲಾಗಿದೆ. ಶಾಖೋತ್ಪನ್ನ ಕೇಂದ್ರಗಳು, ಪವನ ವಿದ್ಯುತ್ ಮತ್ತಿತರ ಮೂಲಗಳಿಂದ ಹೆಚ್ಚಿನ ವಿದ್ಯುತ್ ನಿರೀಕ್ಷೆ ಮಾಡಲಾಗುತ್ತಿದೆ. ಜಲಮೂಲಗಳಿಂದ ಲಭ್ಯವಾಗುತ್ತಿರುವ ವಿದ್ಯುತ್ ಪ್ರಮಾಣ ಕಡಿಮೆಯಾಗಿರುವುದರಿಂದ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುವಂತಾಗಿದೆ. ಅಲ್ಲದೆ, ನಾನಾ ತಾಂತ್ರಿಕ ಕಾರಣಗಳಿಂದ ಶಾಖೋತ್ಪನ್ನ ಮತ್ತು ಇತರ ಮೂಲಗಳಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಇದರಿಂದ ವಿದ್ಯುತ್ ಅಭಾವ ಉಂಟಾಗಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ರೈತರ ಪರಿಸ್ಥಿತಿ ಕಷ್ಟಕಷ್ಟ...!

ಮಳೆ ಕೊರತೆ, ಕೆರೆಕಟ್ಟೆ, ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ರಾಜ್ಯಾದ್ಯಂತ ಬರಗಾಲದ ಕರಿಛಾಯೆ ಆವರಿಸಿದೆ. ರೈತರು ಬೆಳೆ ನಷ್ಟ ಅನುಭವಿಸುವಂತಾಗಿದೆ. ಕಷ್ಟಪಟ್ಟು ಬೆಳೆದ ಅಲ್ಪಸ್ವಲ್ಪಬೆಳೆ ಹಾಗೂ ತೋಟಗಳಿಗೆ ಬಾವಿ, ಬೋರ್‌ವೆಲ್, ಕೆರೆ, ನಾಲೆಗಳಿಂದ ಪಂಪ್‌ಸೆಟ್ ನೆರವಿನಿಂದ ನೀರು ಹಾಯಿಸಿ ರಕ್ಷಣೆ ಮಾಡಲು ಹರಸಾಹಸ ನಡೆಸುತ್ತಿದ್ದಾರೆ. ಈ ನಡುವೆ ಗ್ರಾಮೀಣ ಭಾಗಗಳಲ್ಲಿ ಹಗಲು-ರಾತ್ರಿಗಳೆನ್ನದೆ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಆರಂಭಿಸಿರುವುದರಿಂದ ರೈತರ ಪರಿಸ್ಥಿತಿ ಹೇಳ ತೀರದಾಗಿದೆ. ಬೆಳೆಗಳಿಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿರುವ ರೈತರು, ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವೇಳಾಪಟ್ಟಿ ಪ್ರಕಟಿಸಲು ಕೈಗಾರಿಕೋದ್ಯಮಿಗಳ ಆಗ್ರಹ

ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಆರಂಭಿಸಿ ಮನಸೋಇಚ್ಛೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಕೈಗಾರಿಕೆ, ಉದ್ದಿಮೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಏಕಾಏಕಿ ವಿದ್ಯುತ್ ಕಡಿತ ಗೊಳಿಸುವುದರಿಂದ ಉತ್ಪಾದನೆ ಸ್ಥಗಿತಗೊಳ್ಳುವ ಜೊತೆಗೆ ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

ತಕ್ಷಣವೇ ರಾಜ್ಯ ಸರಕಾರ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ರದ್ದುಗೊಳಿಸಬೇಕು. ವಿದ್ಯುತ್ ಕಡಿತದ ವೇಳಾಪಟ್ಟಿಯನ್ನು ಪ್ರಕಟಿಸಿ, ಅದರಂತೆ ವಿದ್ಯುತ್ ಕಡಿತ ಮಾಡಬೇಕು. ಇದರಿಂದ ಕೈಗಾರಿಕೆ ಹಾಗೂ ಇತರ ಉದ್ದಿಮೆಗಳು ಸಮಯ ಹೊಂದಾಣಿಕೆ ಮಾಡಿಕೊಂಡು ಉತ್ಪಾದನಾ ಕಾರ್ಯ ನಡೆಸಲು ಸಹಾಯಕವಾಗುತ್ತದೆ. ಜೊತೆಗೆ ನಷ್ಟ ತಗ್ಗಿಸಿಕೊಳ್ಳಲು ನೆರವಾಗುತ್ತದೆ ಎಂದು ಕೈಗಾರಿಕೋದ್ಯಮಿಗಳು ಸರಕಾರಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News