ಪೊಲೀಸರ ಆತ್ಮಹತ್ಯೆ; ಪ್ರತಿ ಜಿಲ್ಲೆಯಲ್ಲಿ ಸಮಾಲೋಚಕರ ನೇಮಕ: ಸಿದ್ದರಾಮಯ್ಯ

Update: 2016-10-21 06:06 GMT

ಬೆಂಗಳೂರು, ಅ.21: ಅಲ್ಲಲ್ಲಿ ಪೊಲೀಸರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮಾಲೋಚಕರನ್ನು ನೇಮಿಸಬೇಕೆಂಬ ಪ್ರಸ್ತಾವನೆ ಬಂದಿದೆ. ಒತ್ತಡದಲ್ಲಿ ಕೆಲಸ ಮಾಡುವವ ಪೊಲೀಸ್ ಸಿಬ್ಬಂದಿಯನ್ನು ಕೌನ್ಸೆಲಿಂಗ್‌ಗೆ ಒಳಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮಾಲೋಚಕರ ನೇಮಕ ಕುರಿತು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿಂದು ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಬಳಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ಕೆಲವು ಪೊಲೀಸರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದು ಹೇಡಿತನ ಎಂದು ನ್ಯಾಯಾಲಯವೇ ಹೇಳಿದೆ. ಆತ್ಮಹತ್ಯೆಗೆ ಮುನ್ನ ಕುಟುಂಬದ ಬಗ್ಗೆ ಯೋಚನೆ ಮಾಡಬೇಕು. ಮಾಡಿದರೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಲು ಸಾಧ್ಯವಿಲ್ಲ ಎಂದ ಮುಖ್ಯಮಂತ್ರಿ, ಪೊಲೀಸರು ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕು. ಪೊಲೀಸರು, ರೈತರು ಯಾರೇ ಅಗಲಿ, ಆತ್ಮಹತ್ಯೆಗೆ ಶರಣಾಗಬಾರದು. ಇದು ನನ್ನ ಕಳಕಳಿಯ ಮನವಿ ಎಂದರು.
ಕಳೆದ ವರ್ಷ ದೇಶದಲ್ಲಿ 473 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇವಾನಿರತರಾಗಿದ್ದಾಗ ಪ್ರಾಣಾರ್ಪಣೆ ಮಾಡಿದ್ದಾರೆ. ರಾಜ್ಯದಲ್ಲಿ 22 ಮಂದಿ ಪ್ರಾಣ ತೆತ್ತಿದ್ದಾರೆ. ಈ ಎಲ್ಲ ಹುತಾತ್ಮರಿಗೆ ಸರಕಾರ ಮತ್ತು ನಾಡಿನ ಜನತೆ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ ಎಂದರು.
ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪೊಲೀಸರ ಮಕ್ಕಳಿಗಾಗಿ ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆಗಳನ್ನು ತೆರೆಯಲಾಗುತ್ತಿದೆ. ಪೊಲೀಸರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಯನಿಮಿತ್ತ ಬೆಂಗಳೂರಿಗೆ ಬರುವ ಸಿಬ್ಬಂದಿಗಾಗಿ 15 ಕೋ.ರೂ. ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಪ್ರತಿ ಪೊಲೀಸ್ ಯೂನಿಟ್‌ನಲ್ಲಿ ಕ್ಯಾಂಟೀನ್‌ಗಳನ್ನು ತೆರೆಯಲಾಗುತ್ತಿದೆ. ಸೇವೆಯಲ್ಲಿದ್ದಾಗ ಪ್ರಾಣತೆತ್ತ ಮತ್ತು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿಯ ಕುಂಟುಂಬಕ್ಕೆ ಸರ್ಕಾರ ನೆರವಾಗಿದೆ ಎಂದರು.
ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಹಣಕಾಸು ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News