1.60 ಲಕ್ಷ ನಕಲಿ ಪಡಿತರ ಕೂಪನ್ ಪತ್ತೆ : 953 ಅಂಗಡಿಗಳ ವಿರುದ್ಧ ಕ್ರಮ: ಯು.ಟಿ.ಖಾದರ್

Update: 2016-10-21 13:52 GMT

ಬೆಂಗಳೂರು, ಅ.21: ಬಯೋಮೆಟ್ರಿಕ್ ಮೂಲಕ ವಿತರಿಸಲಾಗುತ್ತಿರುವ ಪಡಿತರ ಕೂಪನ್‌ಗಳಲ್ಲಿ 1.60 ಲಕ್ಷ ನಕಲಿ ಕೂಪನ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 953 ಪಡಿತರ ವಿತರಣೆ ಮಾಡುವ ಅಂಗಡಿಗಳಲ್ಲಿ 50ಕ್ಕೂ ಹೆಚ್ಚು ನಕಲಿ ಕೂಪನ್‌ಗಳ ಮೂಲಕ ಪಡಿತರ ವಿತರಣೆಯಾಗಿದೆ. ಈ ಸಂಬಂಧ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

953 ಪಡಿತರ ವಿತರಣೆ ಅಂಗಡಿಗಳ ಪೈಕಿ 400ಕ್ಕೂ ಹೆಚ್ಚು ಅಂಗಡಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಪಡಿತರ ಅಂಗಡಿಗಳ ಅದನ್ನು ವಿಫಲಗೊಳಿಸಲು ಪ್ರಯತ್ನ ಪಡುತ್ತಿವೆ. ಆದುದರಿಂದ, ಪಡಿತರ ವಿತರಣೆಗಾಗಿ ಖಾಸಗಿಯವರಿಗೆ ನೀಡಿರುವ ಪರವಾನಿಗೆಗಳನ್ನು ರದ್ದುಗೊಳಿಸಿ, ಸರಕಾರದಿಂದಲೆ ನಡೆಸಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಶೇ.60ರಷ್ಟು ಹೆಚ್ಚು ಅಂಗಡಿಗಳನ್ನು ಖಾಸಗಿಯವರೆ ನಡೆಸುತ್ತಿದ್ದಾರೆ. ಸಹಕಾರ ಸಂಘಗಳು, ಗ್ರಾಮಪಂಚಾಯಿತಿ ಸೇರಿದಂತೆ ಇನ್ನಿತರ ಮೂಲಕ ಪಡಿತರ ವಿತರಣಾ ಅಂಗಡಿಗಳನ್ನು ನಡೆಸಲು ಆಲೋಚನೆ ಮಾಡಲಾಗುತ್ತಿದೆ. ಈಗಾಗಲೆ ಛತ್ತೀಸ್‌ಗಡದಲ್ಲಿ ಪಡಿತರ ವಿತರಣೆಯನ್ನು ಖಾಸಗಿಯವರಿಂದ ಹಿಂಪಡೆದು, ಸರಕಾರದ ಮೂಲಕವೆ ಮಾಡಲಾಗುತ್ತಿದೆ ಎಂದು ಖಾದರ್ ತಿಳಿಸಿದರು.

ನಕಲಿ ಪಡಿತರ ಕೂಪನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಜಿಲ್ಲಾವಾರು ಇಲಾಖೆಗೆ ಸಿಕ್ಕಿರುವ ಮಾಹಿತಿಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.

ಅಂಗಡಿ ನಡೆಸಲು ಪರವಾನಗಿ ಪಡೆದಿರುವವರು, ಬಯೋಮೆಟ್ರಿಕ್ ಪಡೆದು ಕೂಪನ್ ವಿತರಣೆ ಮಾಡಲು ಫ್ರಾಂಚೈಸಿ ಪಡೆದವರು ಹಾಗೂ ನಕಲಿ ಪಡಿತರ ಕಾರ್ಡುಗಳ ತಯಾರಿಕೆಗೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧವು ಕಾನೂನು ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಖಾದರ್ ತಿಳಿಸಿದರು.

ಬಯೋಮೆಟ್ರಿಕ್ ಮೂಲಕ ನೀಡಲಾಗುವ ಕೂಪನ್ ಅನ್ನು ಫಲಾನುಭವಿಗಳು ಯಾವುದೆ ಅಂಗಡಿಗೆ ನೀಡಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಅಂಗಡಿಗಳು ಒಂದು ಜಾಲವನ್ನು ಮಾಡಿಕೊಂಡು, ಬಲವಂತವಾಗಿ ಫಲಾನುಭವಿಗಳಿಗೆ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈಗಾಗಲೆ ಸುಮಾರು 12 ಸಾವಿರ ಖಾಸಗಿ ಅಂಗಡಿಗಳಿವೆ. ಇನ್ನು ಮುಂದೆ ಖಾಸಗಿಯವರಿಗೆ ಹೊಸ ಅಂಗಡಿಗಳ ಪರವಾನಗಿ ನೀಡದಿರಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದರು.

ಪಡಿತರ ಸಾಗಾಟಕ್ಕೆ ನೆರವು, ಅಂಗಡಿ ಮಾಲಕರಿಗೆ ನೀಡುತ್ತಿದ್ದ ಕಮಿಷನ್ ದರ ಹೆಚ್ಚಳ ಮಾಡಿದ್ದೇವೆ. ಆದರೂ, ಸರಕಾರಕ್ಕೆ ನಿರೀಕ್ಷಿತ ಸಹಕಾರವನ್ನು ನೀಡುತ್ತಿಲ್ಲ. ಪ್ರತಿ ಮೂರು ವರ್ಷಕ್ಕೊಮ್ಮೆ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಕೆಲವು ಕಡೆ ಒಂದೇ ಕುಟುಂಬದವರು 30-50 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಉಜ್ವಲ ಯೋಜನೆಯಡಿ 14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರಕಾರವು ಒರ್ವ ಫಲಾನುಭವಿಗೆ 1600 ರೂ.ಗಳನ್ನು ನಿಗದಿಪಡಿಸಿದೆ. ರಾಜ್ಯ ಸರಕಾರವು 1 ಸಾವಿರ ರೂ.ಸಹಾಯಧನ ನೀಡಿ ಹೆಚ್ಚುವರಿಯಾಗಿ 5 ಕೆಜಿ ಸಿಲಿಂಡರ್ ನೀಡಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು. ಫಲಾನುಭವಿಗಳು 5 ಕೆಜಿ ಬದಲು 14.2 ಕೆಜಿ ಸಿಲಿಂಡರ್ ಬಯಸಿದ್ದರೆ ಅದಕ್ಕೆ 1450 ರೂ. ಖರ್ಚಾಗುತ್ತದೆ. ಸರಕಾರ 1 ಸಾವಿರ ರೂ.ಹಾಗೂ ಫಲಾನುಭವಿ 450 ರೂ.ಗಳನ್ನು ಪಾವತಿಸಬೇಕಾಗಿದೆ. ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 5 ಕೆಜಿ ಹೆಚ್ಚುವರಿ ಸಿಲಿಂಡರ್, ಸೋಲಾರ್ ಲೈಟು ಹಾಗೂ ಗ್ಯಾಸ್‌ಸ್ಟೌವ್ ಮೂರು ಆಯ್ಕೆಗಳನ್ನು ಇಡಲಾಗಿದೆ. ಇದರಲ್ಲಿ ಯಾವುದು ಬೇಕಾದರೂ ಅವರು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಖಾದರ್ ಹೇಳಿದರು.

ಸಿಲಿಂಡರ್‌ಗಳನ್ನು ನಗರ ಪ್ರದೇಶಗಳಲ್ಲಿ ಹೆಚ್ಚು ವಿತರಿಸಿ ಪಡಿತರ ಸೀಮೆ ಎಣ್ಣೆ ಮುಕ್ತ ನಗರ ಪ್ರದೇಶಗಳನ್ನು ಮಾಡುವುದು ನಮ್ಮ ಉದ್ದೇಶವಾಗಿದೆ. 2011ರಲ್ಲಿ ನಡೆದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಬಿಟ್ಟುಹೋಗಿರುವ ಕುಟುಂಬಗಳನ್ನು ಈ ಯೋಜನೆ ವ್ಯಾಪ್ತಿಯಲ್ಲಿ ತರುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News