ಏರ್ ಇಂಡಿಯಾದಿಂದ ವಿಶ್ವದಾಖಲೆ

Update: 2016-10-23 03:11 GMT

ಹೊಸದಿಲ್ಲಿ, ಅ.23: ದಿಲ್ಲಿಯಿಂದ ಸ್ಯಾನ್ ಫ್ರಾಸಿಸ್ಕೊಗೆ ಅಟ್ಲಾಂಟಿಕ್ ಸಾಗರದ ಬದಲಾಗಿ ಪೆಸಿಫಿಕ್ ಸಾಗರದ ಮೂಲಕ ಹಾರಾಟ ಮಾಡಿದ ಏರ್ ಇಂಡಿಯಾ ವಿಮಾನ ಇದೀಗ ಧೀರ್ಘ ದೂರದ, ನಿಲುಗಡೆ ರಹಿತ ವಿಮಾನಯಾನದ ವಿಶ್ವದಾಖಲೆಗೆ ಪಾತ್ರವಾಗಿದೆ.

ಕಳೆದ ವಾರದವರೆಗೂ ಏರ್ ಇಂಡಿಯಾ ವಿಮಾನಗಳು ಅಟ್ಲಾಂಟಿಕ್ ಸಾಗರದ ಮೇಲೆ ಹಾರುತ್ತಿದ್ದವು. ಪೆಸಿಫಿಕ್ ಸಾಗರ ಮಾರ್ಗವು ಅಟ್ಲಾಂಟಿಕ್ ಸಾಗರ ಮಾರ್ಗಕ್ಕಿಂತ ಸುಮಾರು 1,400 ಕಿಲೋಮೀಟರ್ ದೀರ್ಘವಾಗಿದ್ದು, ಈ ವಿಮಾನವು 14.5 ಗಂಟೆಗಳಲ್ಲಿ 15,300 ಕಿಲೋಮೀಟರ್ ದೂರವನ್ನು ಕ್ರಮಿಸಿತು. ಈ ಮಾರ್ಗ ದೀರ್ಘದೂರದ್ದಾದರೂ, ಈ ಮಾರ್ಗದಲ್ಲಿ ಮಾಮೂಲಿ ಪ್ರಯಾಣ ವೇಳೆಗಿಂತ ಸುಮಾರು ಎರಡು ಗಂಟೆ ಕಡಿಮೆ ತೆಗೆದುಕೊಂಡಿತು. ಗಾಳಿ ಬೀಸುವಿಕೆ ವಿಮಾನ ಹೋಗುವ ದಿಕ್ಕಿನಲ್ಲೇ ಇರುವ ಕಾರಣ, ವಿಮಾನ ಹೆಚ್ಚು ವೇಗವಾಗಿ ಯಾನ ಮಾಡುವುದು ಸಾಧ್ಯವಾಯಿತು.

ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುವ ಹಿನ್ನೆಲೆಯಲ್ಲಿ ಗಾಳಿ ಕೂಡಾ ಅದೇ ದಿಕ್ಕಿನಲ್ಲಿ ಚಲಿಸುತ್ತದೆ. ಪಶ್ಚಿಮದ ದಿಕ್ಕಿಗೆ ಯಾನ ಮಾಡುವುದೆಂದರೆ ವಿಮಾನಕ್ಕೆ ವಿರುದ್ಧಾಭಿಮುಖವಾಗಿ ಗಾಳಿ ಬೀಸುತ್ತದೆ. ಆದರೆ ಫೆಸಿಫಿಕ್ ಮಾರ್ಗದಲ್ಲಿ ವಿಮಾನ ಹೋಗುವ ದಿಕ್ಕಿನಲ್ಲೇ ಚಲಿಸುತ್ತದೆ ಎಂದು ಹಿರಿಯ ಏರ್ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಟ್ಲಾಂಟಿಕ್ ಸಾಗರ ಮಾರ್ಗದಲ್ಲಿ ಚಲಿಸುವಾಗ 24 ಕಿಲೋಮೀಟರ್ ವೇಗದಲ್ಲಿ ವಿರುದ್ಧ ದಿಕ್ಕಿನ ಗಾಳಿ ಬೀಸುವ ಕಾರಣದಿಂದ 800 ಕಿಲೋಮೀಟರ್ ವೇಗದಲ್ಲಿ ವಿಮಾನ ಚಲಿಸಿದರೂ, ವಾಸ್ತವ ವೇಗ 776 ಕಿಲೋಮೀಟರ್ ಆಗುತ್ತದೆ. ಆದರೆ ಪೂರ್ವ ಫೆಸಿಫಿಕ್ ಮಾರ್ಗದ ಮೂಲಕ ಚಲಿಸುವುದರಿಂದ 138 ಕಿಲೋಮೀಟರ್ ವೇಗದ ಗಾಳಿ ವಿಮಾನ ಚಲಿಸುವ ದಿಕ್ಕಿನಲ್ಲೇ ಬೀಸುತ್ತದೆ. ಇದರಿಂದ ವಾಸ್ತವ ವೇಗ ಗಂಟೆಗೆ 938 ಕಿಲೋಮೀಟರ್ ಆಗುತ್ತದೆ ಎಂದು ವಿವರಿಸಿದ್ದಾರೆ.

ಇದುವರೆಗೂ ದುಬೈನಿಂದ ಆಕ್ಲೆಂಡ್‌ಗೆ ಪ್ರಯಾಣಿಸುವ 14,120 ಕಿಲೋಮೀಟರ್ ಉದ್ದದ ವಾಯುಮಾರ್ಗ ಅತಿ ಉದ್ದದ ವಾಯುಮಾರ್ಗ ಎನಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News