ಡಯಾಬಿಟೀಸ್ ಗೆ ‘ಗಿಡಮೂಲಿಕೆ ಔಷಧಿ’ ಸೇವಿಸಿದ ಸಿದ್ಧ ವೈದ್ಯ, ಮೂವರು ರೋಗಿಗಳು ಬಲಿ

Update: 2016-10-24 06:37 GMT

ಚೆನ್ನೈ, ಅ.24: ತಮಿಳುನಾಡಿನ ತೆಂಕಸಿ ಎಂಬಲ್ಲಿ ಡಯಾಬಿಟೀಸ್ ರೋಗ ಗುಣಪಡಿಸುವುದೆಂದು ನಂಬಲಾದ ‘ಗಿಡಮೂಲಿಕೆ ಔಷಧಿ’ ಸೇವಿಸಿದ ಮೂವರು ವ್ಯಕ್ತಿಗಳು ಹಾಗೂ ಸಿದ್ಧ ವೈದ್ಯನೊಬ್ಬ ಪ್ರಾಣ ಕಳೆದುಕೊಂಡ ಘಟನೆ ವರದಿಯಾಗಿದೆ.

ಸಿದ್ಧ ವೈದ್ಯನೆಂದು ಖ್ಯಾತಿ ಪಡೆದಿದ್ದ ಮುತ್ತುಪಾಂಡಿ (54) ಎಂಬವರು ತೆಂಕನಸಿ ಎಂಬಲ್ಲಿ ನಡೆಸುತ್ತಿದ್ದ ಕ್ಲಿನಿಕ್ ಗೆ ಹಲವಾರು ರೋಗಿಗಳು ಬಂದು ಅವರು ನೀಡಿದ ಔಷಧಿ ಪಡೆದುಕೊಳ್ಳುತ್ತಿದ್ದರಲ್ಲದೆ ಇದರಿಂದ ತಮ್ಮ ರೋಗ ಗುಣವಾಗುವುದೆಂಬ ನಂಬಿಕೆ ಕೂಡ ಅವರಲ್ಲಿತ್ತು.

ಇತ್ತೀಚೆಗೆ ಅಳಗಪುರಿ ಗ್ರಾಮದ ಇರುಳಂಡಿ (40), ಬಾಲಸುಬ್ರಹ್ಮಣ್ಯಂ (30)ಮತ್ತು ಸೌಂದರಪಾಂಡ್ಯನ್ (40) ಎಂಬವರು ಮುತ್ತುಪಾಂಡಿ ಕ್ಲಿನಿಕ್ ಗೆ ಆಗಮಿಸಿ ಡಯಾಬಿಟೀಸ್‌ ಮತ್ತಿತರ ಸಮಸ್ಯೆಗೆ ಚಿಕಿತ್ಸೆ ನೀಡುವಂತೆ ಕೋರಿದ್ದರು.

ಮುತ್ತುಪಾಂಡಿ ಅವರಿಗೆ ಗಿಡಮೂಲಿಕೆಗಳ ಟಾನಿಕ್ ಒಂದನ್ನು ನೀಡಿ ಅದನ್ನು ಸೇವಿಸುವಂತೆ ಹೇಳಿದ್ದರು. ಆದರೆ ಅದನ್ನು ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮೂವರೂ ವಾಂತಿ ಮಾಡಲಾರಂಭಿಸಿದರಲ್ಲದೆ ಸ್ಮೃತಿ ಕಳೆದುಕೊಂಡು ಬಿದ್ದು ಬಿಟ್ಟರು. ಆದರೂ ಈ ಔಷಧಿಯಲ್ಲಿ ಹಾನಿಕರವಾದುದು ಏನೂ ಇಲ್ಲವೆಂದು ವಾದಿಸಿದ ತನ್ನ ಮಾತನ್ನು ಸಮರ್ಥಿಸಲು ಆತ ತಾನೂ ಆ ಟಾನಿಕ್ ನ್ನು ಸೇವಿಸಿ ಆತನೂ ಸ್ಮತಿ ತಪ್ಪಿ ಬಿದ್ದುಬಿಟ್ಟರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ನಾಲ್ಕು ಮಂದಿಯೂ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು.

ಈ ಗಿಡಮೂಲಿಕೆಗಳ ಟಾನಿಕ್ ನಲ್ಲಿ ಹೃದಯ ಸ್ಥಂಭನಗೊಳಿಸುವ ಏನಾದರೂ ಅಂಶವಿರಬೇಕೆಂದು ವೈದ್ಯರು ಸಂಶಯಿಸಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಮಾನ್ಯತೆ ಹಾಗೂ ಅರ್ಹತೆಯಿಲ್ಲದ ಸಾಂಪ್ರದಾಯಿಕ ವೈದ್ಯರಿಂದ ಚಿಕಿತ್ಸೆ ಪಡೆದ ಹಲವರು ಸಾವಿಗೀಡಾದ ಘಟನೆಗಳು ಈ ಹಿಂದೆ ಕೂಡ ನಡೆದಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News