ಹರಿಹರದಲ್ಲಿ ಪ್ರಯಾಣಿಕರಿದ್ದ ರೈಲು ಮುಟ್ಟುಗೋಲು!

Update: 2016-10-25 03:07 GMT

ದಾವಣಗೆರೆ, ಅ.25: ತಾವು ಪ್ರಯಾಣಿಸುತ್ತಿದ್ದ ರೈಲನ್ನು ದಿಢೀರನೇ ಮುಟ್ಟುಗೋಲು ಹಾಕಿಕೊಂಡ ಹಿನ್ನೆಲೆಯಲ್ಲಿ ಸಿದ್ಧಗಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೈಸೂರಿಗೆ ಹೊರಟಿದ್ದ ನೂರಾರು ಪ್ರಯಾಣಿಕರು ದಿಗ್ಭ್ರಮೆಗೆ ಒಳಗಾದರು. ಈ ಅಪರೂಪದ ಪ್ರಕರಣದಲ್ಲಿ ರೈಲು ಹರಿಹರ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಮುಟ್ಟುಗೋಲು ಹಾಕಿಕೊಂಡ ಹಿನ್ನೆಲೆಯಲ್ಲಿ ಸುಮಾರು 100 ನಿಮಿಷಗಳ ಕಾಲ ರೈಲು ನಿಲ್ಲಬೇಕಾಯಿತು.

ರೈಲ್ವೆ ಯೋಜನೆಗಾಗಿ 2006ರಲ್ಲಿ ಜಮೀನು ಕಳೆದುಕೊಂಡಿದ್ದ ಎ.ಜಿ.ಶಿವಕುಮಾರ್ (62) ಎಂಬ ರೈತನಿಗೆ ಪರಿಹಾರ ನೀಡಲು ವಿಳಂಬವಾದದ್ದೇ ಈ ಪ್ರಕರಣಕ್ಕೆ ನಾಂದಿ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು, ಪರಿಹಾರ ಮೊತ್ತ ನೀಡಲು ಸಮಯಾವಕಾಶ ಕೇಳಿದರು. ಆದರೆ ಸಂತ್ರಸ್ತ ರೈತನ ಪರವಾಗಿ ನ್ಯಾಯಾಲಯ ಸಿಬ್ಬಂದಿ, ಈ ಭರವಸೆಯನ್ನು ಲಿಖಿತವಾಗಿ ನೀಡುವಂತೆ ಪಟ್ಟು ಹಿಡಿದರು. ವಾರದೊಳಗೆ ಪರಿಹಾರ ಮೊತ್ತ ಪಾವತಿಸುವುದಾಗಿ ಲಿಖಿತ ಭರವಸೆ ನೀಡಿದ ಬಳಿಕ ರೈಲು ಬಿಡುಗಡೆ ಮಾಡಲಾಯಿತು.

ಇದಕ್ಕೂ ಮುನ್ನ ಹರಿಹರದ ಹಿರಿಯ ವಿಭಾಗೀಯ ಮ್ಯಾಜಿಸ್ಟ್ರೇಟ್, ಸುಭಾಶ್ ಬಂಡು ಹೊಸಕಾಳೆ ಅವರು, ಶಿವಕುಮಾರ್‌ಗೆ 38 ಲಕ್ಷ ರೂಪಾಯಿ ಪರಿಹಾರ ಮೊತ್ತ ಪಾವತಿಸಲು ವಿಫಲವಾದ ರೈಲ್ವೆ ಇಲಾಖೆಯ ರೈಲನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿದ್ದರು. ಚಿತ್ರದುರ್ಗ ಹಾಗೂ ರಾಯದುರ್ಗ ನಡುವಿನ ಹಳಿ ಕಾಮಗಾರಿಗಾಗಿ ರೈಲ್ವೆ 100 ಕಿಲೋಮೀಟರ್ ಪ್ರದೇಶದಲ್ಲಿ 1991ರಲ್ಲಿ ಭೂಮಿ ಸ್ವಾಧೀನ ಮಾಡಿಕೊಂಡಿತ್ತು. ಈ ಪೈಕಿ 100 ಮಂದಿ ಇನ್ನೂ ಪರಿಹಾರ ಮೊತ್ತ ಪಡೆದಿಲ್ಲ.

ಈ ಮುಟ್ಟುಗೋಲು ಪ್ರಕರಣ ನೂನಾರು ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಯಿತು. ಹಲವರು ತಮ್ಮ ಲಗೇಜ್‌ಗಳೊಂದಿಗೆ ರೈಲು ನಿಲ್ದಾಣದಿಂದ ಹೊರಹೋಗಿ ಬಸ್ಸುಗಳಲ್ಲಿ ಬೆಂಗಳೂರಿಗೆ ಪ್ರಯಾಣಿಸಿದರು. ಇವರಲ್ಲಿ ಟಿವಿ ಕಲಾವಿದರಾದ ಸಿಹಿಕಹಿ ಚಂದ್ರು, ಗೀತಾ ಕೂಡಾ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News