ಮೋಟಮ್ಮ ದಲಿತ ಮಹಿಳೆ ಎನ್ನುವುದು ಅನುಮಾನ: ರಾಜ್‌ಕುಮಾರ್

Update: 2016-10-25 16:55 GMT

ಚಿಕ್ಕಮಗಳೂರು, ಅ.25: ಕಾಂಗ್ರೆಸ್‌ನ ಎಂಎಲ್‌ಸಿ ಮೋಟಮ್ಮ ಇತ್ತೀಚೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿ ಬಿಜೆಪಿ ಪಕ್ಷದ ಮುಖಂಡರು ಬೂಟಾಟಿಕೆಯ ಸಾಮೂಹಿಕ ಸಹ ಭೋಜನ ಮಾಡುತ್ತಿದ್ದಾರೆ. ಶಾಸಕರು ತಮ್ಮ ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದರೆ ಸಾಲದು. ದಲಿತರ ಊರುಕೇರಿಗೆ ಹೋಗಿ ಭೋಜನ ಮಾಡಬೇಕು ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ನಗರ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ರಾಜ್‌ಕುಮಾರ್ ತಿಳಿಸಿದ್ದಾರೆ.

ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದು, ಪ್ರತಿಯೊಂದು ವೇದಿಕೆಯಲ್ಲೂ ದಲಿತರು, ದಲಿತರ ಊರು, ದಲಿತರ ಕೇರಿ, ದಲಿತರ ಕಾಲನಿ, ದಲಿತರ ಮನೆ ಎಂದೇ ಭಾಷಣ ಮಾಡುವುದನ್ನು ನೋಡಿದರೆ ಮೋಟಮ್ಮನವರೇ ದಲಿತ ಮಹಿಳೆ ಎನ್ನುವುದು ಅನುಮಾನವಾಗಿದೆ. ಏಕೆಂದರೆ ನಾವು 21ನೆ ಶತಮಾನಕ್ಕೆ ಕಾಲಿಟ್ಟಿದ್ದೇವೆ. ಈಗ ನಾವು ಮೊದಲಿನಂತೆ ಇಲ್ಲ. ಎಲ್ಲ ರಂಗದಲ್ಲೂ ನಾವಿದ್ದೇವೆ ಎನ್ನುವುದನ್ನು ಮರೆತಿರುವಂತಿದೆ ಎಂದಿದ್ದಾರೆ.

ಅನ್ಯಜಾತಿಯವರು ಯಾವುದೇ ಸಭೆ ಸಮಾರಂಭಗಳಲ್ಲಿ ಅವರವರ ಜಾತಿ ಧರ್ಮಗಳ ಬಗ್ಗೆ ಪುನರುಚ್ಚಾರ ಮಾಡುವುದಿಲ್ಲ. ಆದರೆ ಮೋಟಮ್ಮನವರು ಎಲ್ಲಾ ವೇದಿಕೆಯಲ್ಲೂ ದಲಿತರನ್ನೇ ಶೋಷಿಸುತ್ತಾ ಇನ್ನೂ ಕೀಳರಿಮೆ ಮಾಡುವುದರ ಮೂಲಕ ಮಾನವೀಯ ವೌಲ್ಯಗಳನ್ನು ಹಾಳುಮಾಡುತ್ತಿದ್ದಾರೆ. ಅನ್ಯ ಜಾತಿಯವರು ದಲಿತರ ಮನೆಗಳಲ್ಲೇ ಏಕೆ ಊಟ ಮಾಡಬೇಕು, ನಾವು ಏನಾಗಿದ್ದೇವೆ, ನಮ್ಮ ಕಾಲನಿಗಳು, ನಮ್ಮ ಕೇರಿಗಳು ಏನು ಕೊಳೆತು ನಾರುತ್ತಿವೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ 125 ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿರುವುದು ಕಾಂಗ್ರೆಸ್‌ನವರಿಗೆ ನುಂಗಲಾರದ ತುತ್ತಾಗಿರುವುದರಿಂದ ಬಿಜೆಪಿಯವರು ನಾಟಕವಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್‌ರವರು ಎಷ್ಟು ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಮಾಡಿಸಿದ್ದಾರೆ ಎಂದು ಬಹಿರಂಗವಾಗಿ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News