ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ: ಪ್ರಧಾನಿ ಮಧ್ಯಪ್ರವೇಶಕ್ಕೆ ಮುಖ್ಯಮಂತ್ರಿ ಪಟ್ಟು

Update: 2016-11-01 14:55 GMT

ಬೆಂಗಳೂರು, ನ. 1: ನಮಗೆಲ್ಲಾ ಕನ್ನಡವೇ ಸಾರ್ವಭಾಮವಾಗಿದ್ದು, ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾದ ಕಾರಣ ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಸಂವಿಧಾನ ತಿದ್ದುಪಡಿಗೆ ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

  ಮಂಗಳವಾರ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ, ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ-2016 ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

   ಭಾಷಾವಾರು ಪ್ರಾಂತ್ಯ ವಿಂಗಡಣೆಗೊಂಡ ನಂತರ ಅಲ್ಲಿನ ಭಾಷೆಯನ್ನು ಸಂವಿಧಾನ ಒಪ್ಪಿಕೊಂಡಿದೆ.ಅಲ್ಲದೆ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದ ಅವರು, 1994ರಲ್ಲಿ ಮಾಧ್ಯಮ ನೀತಿ ಘೋಷಣೆ ಮಾಡಿದ್ದೇವೆ. ಇದನ್ನು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ನ್ಯಾಯಾಲಯದಲ್ಲಿ ನಮಗೆ ಹಿನ್ನಡೆಯಾಗಿದೆ. ಸವೋಚ್ಚ ನ್ಯಾಯಾಲಯ 2014 ಮೇನಲ್ಲಿ ಶಿಕ್ಷಣ ಮಾಧ್ಯಮ ’ಆಯ್ಕೆ’ಯನ್ನು ಪೋಷಕರಿಗೆ ಬಿಡಬೇಕು, ಸರಕಾರ ಕಡ್ಡಾಯಗೊಳಿಸಬಾರದು ಎನ್ನುವ ತೀರ್ಪು ನೀಡಿದೆ. ಇದರ ವಿರುದ್ದ ಮೇಲ್ಮನವಿ ಸಲ್ಲಿಸಿದರೂ, ಜಯ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

   ಇದಾದ ಮೇಲೆ ಎಲ್ಲಾ ಪ್ರಯತ್ನಗಳನ್ನು ರಾಜ್ಯ ಸರಕಾರ ಮಾಡಿದೆ. ಸುಪ್ರೀಂಕೋರ್ಟ್ ತೀರ್ಪು ಅಂತಿಮವಾಗಿರುವುದರಿಂದ, ನಾವು ಬೇರೆ ಯಾವ ನ್ಯಾಯಾಲಯದಲ್ಲೂ ಇದನ್ನು ಪ್ರಶ್ನಿಸಲು ಆಗುವುದಿಲ್ಲ. ಇದಕ್ಕಾಗಿಯೇ ಪ್ರಧಾನಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದಿದ್ದು, ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಸಹ ಪತ್ರ ಬರೆದು ಸುಪ್ರೀಂಕೋರ್ಟಿನ ತೀರ್ಪಿನಿಂದ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಕುತ್ತು ಬರಲಿದೆ ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನವನ್ನು ತಾವು ಮಾಡಿದ್ದು, ಈ ನಿಟ್ಟಿನಲ್ಲಿ ಖುದ್ದಾಗಿ ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಒತ್ತಡ ಹಾಕಿರುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭ ನೆನಪು ಮಾಡಿಕೊಂಡರು.

  ಎಲ್ಲ ಭಾಷಾ, ಶಿಕ್ಷಣ ತಜ್ಞರು ಕೂಡ ಮಾತೃಭಾಷೆಯೇ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಮಾಧ್ಯಮವಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಎಲ್ಲ ಕನ್ನಡಿಗರ ಒಕ್ಕೊರಲಿನ ಅಭಿಪ್ರಾಯ ಕೂಡ ಆಗಿದೆ ಎಂದ ಅವರು, ಪ್ರಧಾನಮಂತ್ರಿಗಳು ಸಂವಿಧಾನಕ್ಕೆ ತಿದ್ದುಪಡಿ ತರುವ ಪ್ರಯತ್ನ ಮಾಡುವ ಮೂಲಕ ಆಯಾಯ ಪ್ರಾಂತ್ಯದ ರಾಜ್ಯಭಾಷೆ ಶಿಕ್ಷಣ ಮಾಧ್ಯಮ ಎಂಬುದನ್ನು ಘೋಷಿಸಬೇಕಿದೆ ಎಂದು ಒತ್ತಾಯಿಸಿದರು.

   ಕನ್ನಡ ಉಳಿಸಲು, ಬೆಳೆಸಲು ಸರಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಸರಕಾರ ನೀರನ್ನು ಉಳಿಸಿಕೊಳ್ಳಲು ಎಷ್ಟೆಲ್ಲಾ ಪ್ರಯತ್ನ ಮಾಡಿತು ಎಂಬುದನ್ನು ರಾಜ್ಯದ ಜನತೆ ಕಂಡಿದ್ದಾರೆ. ಸರಕಾರದ ಜೊತೆ ವಿರೋಧಪಕ್ಷಗಳು ಮತ್ತು ರಾಜ್ಯದ ಜನತೆ ದ್ವನಿ ಎತ್ತಿದ್ದು ಇದಕ್ಕಾಗಿ ತಾವು ಈ ಸಂದರ್ಭ ಧನ್ಯವಾದ ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಕನ್ನಡ ನಮ್ಮ ಮಾತೃಭಾಷೆ ಎಂಬುದನ್ನು ಅರಿತು, ಕನ್ನಡ ನೆಲ, ಜಲ ಭಾಷೆ ಇವುಗಳ ಪರವಾಗಿ ನಾನು ಸದಾ ಹೋರಾಟ ಮಾಡುತ್ತೇನೆ. ನಾನು ಸದಾ ಕನ್ನಡ ರಕ್ಷಣೆಗೆ ಬದ್ಧನಾಗಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News