ಬಾಲಕಿ ಗುಂಡು ಹಾರಿಸಿ ಆತ್ಮಹತ್ಯೆ : ಕ್ಯಾನ್ಸರ್ ಜಯಿಸಿದಳು, ಸಹಪಾಠಿಗಳ ಕಿರುಕುಳಕ್ಕೆ ಸೋತಳು

Update: 2016-11-01 15:06 GMT

ವಾಶಿಂಗ್ಟನ್, ನ. 1: ಕ್ಯಾನ್ಸರ್‌ನಿಂದ ಬದುಕುಳಿದ 11 ವರ್ಷದ ಬಾಲಕಿಯೊಬ್ಬಳು ಸಹಪಾಠಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಓಹಿಯೊ ರಾಜ್ಯದಿಂದ ವರದಿಯಾಗಿದೆ.
 ಬೆತನಿ ಥಾಮ್ಸನ್ ಮೂರು ವರ್ಷದ ಮಗುವಾಗಿದ್ದಾಗ ಮೆದುಳಿನ ಗಡ್ಡೆ ಕಾಣಿಸಿಕೊಂಡಿತ್ತು. ಹಾಗಾಗಿ, ವಿಕಿರಣ ಚಿಕಿತ್ಸೆಗೆ ಗುರಿಯಾಗಿದ್ದಳು. 2008ರ ಬಳಿಕ ಅವರು ಕ್ಯಾನ್ಸರ್‌ಮುಕ್ತಗೊಂಡರೂ, ಚಿಕಿತ್ಸೆಯು ಆಕೆಯ ನರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಬೆತನಿಯ ನಗುವಿನ ಶೈಲಿ ಬದಲಾಗಿತ್ತು. ಜೊತೆಗೆ ಆಕೆ ಗುಂಗುರು ಕೂದಲು ಹೊಂದಿದ್ದಳು. ಹಾಗಾಗಿ ಆಕೆಯನ್ನು ಸಹಪಾಠಿಗಳು ಶಾಲೆಯಲ್ಲಿ ಪೀಡಿಸುತ್ತಿದ್ದರು ಎಂದು ಆಕೆಯ ತಾಯಿ ವೆಂಡಿ ಫಾಕ್ಟ್ ಹೇಳುತ್ತಾರೆ.
ಅಕ್ಟೋಬರ್ 19ರಂದು ಆಕೆಯ ಸಹನೆಯ ಕಟ್ಟೆಯೊಡೆಯಿತು. ಇನ್ನು ತನಗೆ ಸಹಿಸಲು ಸಾಧ್ಯವಿಲ್ಲ; ತಾನು ಸಾಯುತ್ತೇನೆ ಎಂಬುದಾಗಿ ಬೆತನಿ ತನ್ನ ಆತ್ಮೀಯ ಗೆಳತಿಯೊಂದಿಗೆ ಹೇಳಿದಳು.
ಬೆತನಿಯ ಗೆಳತಿಯ ತಂದೆ ಬೆತನಿಯ ತಾಯಿಗೆ ಕರೆ ಮಾಡಿದರು. ಆದರೆ, ಅದು ವಿಳಂಬವಾಗಿತ್ತು. ಅಂದು ಮಧ್ಯಾಹ್ನ ಶಾಲೆಯಿಂದ ಮನೆ ತಲುಪಿದದ ಬೆತನಿ ಮನೆಯಲ್ಲಿದ್ದ ಪಿಸ್ತೂಲ್‌ನಿಂದ ತನಗೆ ತಾನೇ ಗುಂಡು ಹಾರಿಸಿಕೊಂಡಳು.
ತನ್ನ ಮಗಳಿಗೆ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿರುವ ವಿಷಯ ಶಾಲೆಯ ಅಧಿಕಾರಿಗಳಿಗೆ ತಿಳಿದಿತ್ತು ಎಂದು ತಾಯಿ ಫಾಕ್ಟ್ ಹೇಳುತ್ತಾರೆ. ಅದೂ ಅಲ್ಲದೆ, ಸೋಮವಾರವಷ್ಟೇ ಈ ವಿಷಯದ ಬಗ್ಗೆ ಪ್ರಾಂಶುಪಾಲರಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದ್ದೆ ಹಾಗೂ ಅವರು ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದರು ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News