ಪ್ರವಾಸಿ ತಾಣವಾದ ಎನ್‌ಕೌಂಟರ್ ನಡೆದ ಸ್ಥಳ!

Update: 2016-11-02 03:43 GMT

ಭೋಪಾಲ್, ನ..2: ಎಂಟು ಮಂದಿ ಸಿಮಿ ಕಾರ್ಯಕರ್ತರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಕೇಂದ್ರೀಯ ಕಾರಾಗೃಹ ಇರುವ ಮನಿಖೇಡಿ ಪಹಾಡಿ ಪ್ರದೇಶಕ್ಕೆ ಕುತೂಹಲದಿಂದ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಈ ಪ್ರದೇಶಕ್ಕೆ ಪೊಲೀಸರು ಯಾವುದೇ ಬ್ಯಾರಿಕೇಡ್ ಅಥವಾ ತಡೆ ಹಾಕದಿರುವುದರಿಂದ ಜನರು ಈ ಬೆಟ್ಟ ಪ್ರದೇಶಕ್ಕೆ ಸಾಗರದೋಪಾದಿಯಲ್ಲಿ ಬರುತ್ತಿದ್ದಾರೆ. ಕೈದಿಗಳು ಜೈಲಿನಿಂದ ಪರಾರಿಯಾದ ತಕ್ಷಣ ತಮ್ಮ ಬಟ್ಟೆ ಬದಲಿಸಿಕೊಂಡಿದ್ದು, ಜೈಲಿನ ಸಮವಸ್ತ್ರ ಚಲ್ಲಾಪಿಲ್ಲಿಯಾಗಿ ಬಿದ್ದಿದೆ. ಕೆಲ ಪ್ರೇಕ್ಷಕರಂತೂ ಘಟನೆ ವೇಳೆ ಹುಲ್ಲು ಹಾಗೂ ಕಲ್ಲುಗಳ ಮೇಲೆ ಚಿಮ್ಮಿದ ರಕ್ತದ ಕಲೆಗಳ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದರು. ಹಲವರು ತಮ್ಮ ಮಕ್ಕಳನ್ನೂ ಸ್ಥಳಕ್ಕೆ ಕರೆ ತಂದಿದ್ದರು.

"ನಾನು ನಿನ್ನೆ ಆಗಮಿಸಿದ್ದೆ. ಆದರೆ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ" ಎಂದು ಗ್ರಾಮಸ್ಥ ಸುರೇಶ್ ಹೇಳಿದರು. ಎನ್‌ಕೌಂಟರ್ ನಡೆದ ಜಾಗದ ದೃಶ್ಯಾವಳಿಯನ್ನು ಏಕೆ ಸಂರಕ್ಷಿಸಿಲ್ಲ ಎಂದು ಹೆಚ್ಚುವರಿ ಎಸ್ಪಿ ಧರ್ಮವೀರ್ ಸಿಂಗ್ ಅವರನ್ನು ಕೇಳಿದಾಗ, "ಸ್ಥಳದಿಂದ ಭೌತಿಕ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಇಡೀ ಪ್ರದೇಶವನ್ನು ಹುಡುಕಲಾಗಿದ್ದು, ಕೇವಲ ರಕ್ತದ ಕಲೆಗಳಷ್ಟೇ ಉಳಿದಿವೆ" ಎಂದು ಉತ್ತರಿಸಿದರು.

ಆಗಮಿಸಿದ್ದ ಹಲವರು ತಾವು ಉಗ್ರರನ್ನು ಪೊಲೀಸರಿಗಿಂತ ಮುನ್ನವೇ ನೋಡಿದ್ದಾಗಿ ಹೇಳಿಕೊಂಡರು. ಸಂತೋಷ್ ಎಂಬ ಗ್ರಾಮಸ್ಥರ ಪ್ರಕಾರ, ಪೊಲೀಸರು ಆಗಮಿಸುವ ಮುನ್ನವೇ ಗ್ರಾಮಸ್ಥರು ತಪ್ಪಿಸಿಕೊಂಡ ಕಾರ್ಯಕರ್ತರನ್ನು ಸುತ್ತುವರಿದಿದ್ದರು. "ನಾವು ಏನು ಮಾಡಬೇಕಿತ್ತೋ ಅದನ್ನು ಮಡಿದ್ದೇವೆ. ಈಗ ನಾವು ಸತ್ತರೂ ಬೇಸರವಿಲ್ಲ" ಎಂದು ಒಬ್ಬ ಕಾರ್ಯಕರ್ತ ಹೇಳಿದ್ದಾಗಿ ಸಂತೋಷ್ ವಿವರಿಸಿದರು.

ಕೇಂದ್ರೀಯ ಕಾರಾಗೃಹದಿಂದ 13 ಕಿಲೋಮೀಟರ್ ದೂರದ ಮಣಿಖೇಡಿ ಮಹಾಡಿಯಲ್ಲಿ ಸಿಮಿ ಸದಸ್ಯರನ್ನು ನೋಡಿದ್ದ ಪ್ರತ್ಯಕ್ಷದರ್ಶಿ ಮೈನಿಸಿಂಗ್ ಪ್ರಕಾರ, "ಸಾಮಾನ್ಯರಂತೆ ಕಾಣುತ್ತಿದ್ದ ಅವರು, ಕೈಗಳಲ್ಲಿ ಬಡಿಗೆ ಹಿಡಿದಿದ್ದರು. ಬಳಿಕ ಅವರು ಉಗ್ರರು ಎಂದು ತಿಳಿಯಿತು"

"ಈ ಪ್ರದೇಶದ ಸುಂದರ ಪರಿಸರ ಸಿಮಿ ಕಾರ್ಯಕರ್ತರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿತು. ಒಂದು ಬದಿಯಲ್ಲಿ ನೂರಾರು ಅಡಿಯ ಪ್ರಪಾತ ಇದ್ದರೆ, ಉಳಿದ ಮೂರು ಕಡೆಗಳಲ್ಲಿ ಸಶಸ್ತ್ರ ಪೊಲೀಸರು ಸುತ್ತುವರಿದಿದ್ದರು. ಅವರನ್ನು ಅಟ್ಟಿಸಿಕೊಂಡು ಬಂದ ಪೊಲೀಸರು ಅವರಲ್ಲಿ ಮಾತನಾಡಲು ಮುಂದಾದರು. ಆದರೆ ಎರಡು ಪೊಲೀಸ್ ತಂಡಗಳು ಅವರನ್ನು ಸುತ್ತುವರಿದು ಹತ್ಯೆ ಮಾಡಿತು. ಸುಮಾರು 15 ನಿಮಿಷದಲ್ಲಿ 45 ಗುಂಡು ಹಾರಿಸಿದ್ದು ನಮಗೆ ಕೇಳಿಬಂತು"

ತಪ್ಪಿಸಿಕೊಂಡ ಸಿಮಿ ಕಾರ್ಯಕರ್ತರು ಈ ಪ್ರದೇಶದಲ್ಲಿದ್ದ ಗುಹೆಯಲ್ಲಿ ಅಡಗಿಕೊಳ್ಳಲು ಯೋಚನೆ ಮಾಡಿದ್ದಿರಬೇಕು. ಆದರೆ ಅವರಿಗೆ ಗುಹೆ ಕಾಣಿಸಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. "ನೂರಾರು ಮಂದಿ ಬೆಟ್ಟದ ಬಳಿಗೆ ಓಡುವುದು ಕಂಡುಬಂತು. ಬಳಿಕ ಗುಂಡಿನ ಶಬ್ದ ಕೇಳಿಸಿತು. ಕೆಲವರು ಇದರ ವೀಡಿಯೊ ಚಿತ್ರೀಕರಣಕ್ಕೂ ಮುಂದಾದರು. ಈ ಪೈಕಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಕೆಲವನ್ನು ಪೊಲೀಸರು ಸ್ಥಳದಲ್ಲೇ ನಾಶಪಡಿಸಿದರು" ಎಂದು ಗ್ರಾಮಸ್ಥರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News