ರಾಷ್ಟ್ರೀಯ ಈಜುಪಟು. ಪರೋಪಕಾರಿ ಕಾಶಿಮಠ ಈಶ್ವರ ಭಟ್

Update: 2016-11-28 09:25 GMT

ಅಚ್ಚುಮೆಚ್ಚಿನ ಪರಮ ಮಿತ್ರ ಕಾಶಿಮಠ ಈಶ್ವರ ಭಟ್ ಅವರ ಬಗ್ಗೆ ನನಗೆ ತುಂಬಾ ಅಭಿಮಾನ. ಅವರು ನನ್ನ ಸ್ನೇಹಿತ ಅನ್ನೋ ಬಿಗುಮಾನ ಬೇರೆ. ಈಶ್ವರ ಭಟ್ ಅಂತಿಂಥವರಲ್ಲ. ಹತ್ತು ಹಲವು ರಾಷ್ಟ್ರೀಯ ದಾಖಲೆಗಳ ವೀರ. ಧರ್ಮಸ್ಥಳದ ಚಪ್ಪರ ಸೂರ. ನಿಸ್ವಾರ್ಥ ಸೇವೆಯಲ್ಲಿ ದೇವರನ್ನು ಕಾಣುವ ಶೂರ. ನಮಗೊಬ್ಬ ಮಾದರೀಯೋಗ್ಯ ಧೀರ.

ಈಶ್ವರ ಭಟ್ ಅಂದಾಗ ತಕ್ಷಣಕ್ಕೆ ನೆನಪಿಗೆ ಬರುವುದು ಈಜು. ತಂದೆಯಿಂದ ಬಳುವಳಿಯಾಗಿ ಬಂದ ಈಜು ಸ್ಪರ್ಧೆಯಲ್ಲಿ ಹಲವು ರಾಷ್ಟ್ರೀಯ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದು ದಾಖಲೆ ಮಾಡಿದ ಅನುಭವ ಈಶ್ವರಣ್ಣನದು. ಈ ಹಿಂದೆ ಬೆಳ್ತಂಗಡಿಯಲ್ಲಿ ಹಾಗೂ ಈಗ ವಿಟ್ಲದ ಕೋಟಿಕೆರೆಯಲ್ಲಿ ಆಸಕ್ತರಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಈಜು ಕಲಿಸುತ್ತಾ ನೂರಾರು ಈಜುಪಟುಗಳನ್ನು ಸೃಷ್ಟಿಸಿದ ಕ್ರೆಡಿಟ್ ಈಶ್ವರಣ್ಣನಿಗೆ ಸಲ್ಲುತ್ತದೆ. ಅವರು ಈ ಕ್ಷೇತ್ರದಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಈ ಹಿಂದೆ ಧರ್ಮಸ್ಥಳದ ಮಹಾನಡಾವಳಿ ಬಳಿಕ ನಡೆದ ಚಪ್ಪರ ಸೂರೆ ಕಾರ್ಯಕ್ರಮ ನಿಮಗೆ ಗೊತ್ತಿರಬಹುದು. ಧರ್ಮಸ್ಥಳ ಖಾವಂದರ ಮನೆಯವರು ಬಳಸಿದ ಪ್ರಮುಖ ವಸ್ತುಗಳನ್ನು ಒಂದು ಚಪ್ಪರದಲ್ಲಿ ಜೋಡಿಸಿಡಲಾಗಿತ್ತು. ಅದನ್ನು ನಿರ್ದಿಷ್ಟ ಸಮಯದಲ್ಲಿ ಅಲ್ಲಿ ಸೇರಿರುವ ಸಹಸ್ರಾರು ಮಂದಿ ಒಮ್ಮೆಲೇ ತೆರಳಿ ಸೂರೆ ಮಾಡಬೇಕು. ಯಾರಿಗೆ ಏನು ಸಿಗುತ್ತೋ ಅದು ಅವರಿಗೆ. ಸೂರೆಯ ಪ್ರಮುಖ ಆಕರ್ಷಣೆ ಖಾವಂದರ ಪೇಟ. ಅದನ್ನು ಸೂರೆ ಮಾಡಿದ ಧೀರ ಬೇರಾರೂ ಅಲ್ಲ. ನಮ್ಮ ಈಶ್ವರ ಭಟ್! ಪೇಟವಲ್ಲದೆ ಮೂರ್ನಾಲ್ಕು ಪ್ರಮುಖ ವಸ್ತುಗಳನ್ನು ತನ್ನದಾಗಿಸಿ ಸೂರೆಯಲ್ಲಿ ಮೊದಲಿಗರಾದರು.

ಈಶ್ವರ ಭಟ್ ಆಪತ್ಭಾಂದವ. 2010 ರಲ್ಲಿ ನಾನು ವಿಟ್ಲ ಜೇಸಿಐ ಇದರ ಅಧ್ಯಕ್ಷನಾಗಿದ್ದ ಸಂದರ್ಭ. ಒಂದು ಆರೋಗ್ಯ ಶಿಬಿರ ವ್ಯವಸ್ಥೆ ಮಾಡಲಾಗಿತ್ತು. ಶಿಬಿರ ನಡೆಯುವ ಸ್ಥಳದಲ್ಲಿ ಮೊದಲಿನ ದಿನ ಎಲ್ಲಾ ಪೂರ್ವ ಸಿದ್ಧತೆ ಮಾಡಿಡುತ್ತೇವೆ ಎಂದು ಭರವಸೆ ನೀಡಿದವರು ಏನೂ ಕೆಲಸ ಮಾಡದೆ ಕೈಕೊಟ್ಟದ್ದು ಗೊತ್ತಾದದ್ದೇ ಕ್ಯಾಂಪ್ ಗೆ ಒಂದು ಗಂಟೆ ಮೊದಲು. ಅದಾಗಲೇ ರೋಗಿಗಳು ಬಂದಿದ್ದರು. ದಿಕ್ಕು ತೋಚದಂತಾಗಿ ತಕ್ಷಣ ವಿಟ್ಲ ಜೇಸಿಐ ಪೂರ್ವಾಧ್ಯಕ್ಷರೂ ಆಗಿರುವ ಈಶ್ವರಣ್ಣನಿಗೆ ಕಾಲ್ ಮಾಡಿದೆ. ನನ್ನ ವೇದನೆಯ ಕರೆಗೆ ವಿಟ್ಲದಿಂದ 20 ಕಿ.ಮೀ. ದೂರ ಕರ್ತವ್ಯಕ್ಕೆ ತೆರಳಿದ್ದ ಈಶ್ವರಣ್ಣ ಕೇವಲ 15 ನಿಮಿಷದೊಳಗೆ ಶಿಬಿರ ಸ್ಥಳಕ್ಕೆ ಬಂದು ಏನೂ ಮರು ಮಾತಾಡದೆ ಅರ್ಧಗಂಟೆಯಲ್ಲಿ ಸದಸ್ಯರ ಜೊತೆ ಸೇರಿ ಎಲ್ಲವನ್ನೂ ಜೋಡಿಸಿಟ್ಟು ಮೆಡಿಕಲ್ ಶಿಬಿರ ಸುಸೂತ್ರವಾಗಿ ನೆರವೇರಲು ಸಹಕರಿಸಿದರು. ತುಂಬಾ ನೊಂದಿದ್ದ ನನಗೆ ಈಶ್ವರಣ್ಣ ಅಂದು ಜೀವಸೆಲೆಯಾಗಿದ್ದರು. ಇದೊಂದು ಸ್ಯಾಂಪಲ್ ಅಷ್ಟೆ. ಇಂತಹ ಸಹಸ್ರಾರು ಸೇವೆ ಈಶ್ವರ ಭಟ್ ರಿಂದ ನಿರಂತರವಾಗಿ ನಡೆಯುತ್ತಿದೆ.

ಸ್ನೇಹಿತರ, ಕುಟುಂಬಿಕರ ಮದುವೆ ಅಥವಾ ಇನ್ನಿತರ ಕಾರ್ಯಕ್ರಮಗಳಿದ್ದರೆ ಅಲ್ಲೇ ಠಿಕಾಣಿ ಹೂಡುವ ಈಶ್ವರಣ್ಣ ಸ್ವಂತ ಮನೆಯವರಿಗಿಂತ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಾರೆ. ಊಟ ಬಡಿಸುವ ಸಂಪೂರ್ಣ ಜವಾಬ್ದಾರಿ ಇವರದ್ದೇ. ಆ ಸೆಕ್ಷನ್ ನಾವು ತಿರುಗಿ ನೋಡಬೇಕಾಗಿಲ್ಲ. ನಾನು ಜೇಸಿಐ ಅಧ್ಯಕ್ಷನಾಗಿದ್ದಾಗ ಆ ಒಂದು ವರ್ಷ ಬೇರೆಬೇರೆ ಕಾರ್ಯಕ್ರಮಗಳ ಊಟದ ವ್ಯವಸ್ಥೆಯಲ್ಲಿ ನಾನು ತಲೆಕೆಡಿಸಿಲ್ಲ. ಎಲ್ಲಾ ಈಶ್ವರಣ್ಣ ಹಾಗೂ ಗೆಳೆಯ ಶ್ರೀಮಂದಾರ ಜೈನ್ ಅವರಿಗೆ ಬಿಟ್ಟಿದ್ದೆ.

ಈಶ್ವರ ಭಟ್ ಸರಕಾರಿ ಉದ್ಯೋಗಿ. ಪಶುವೈದ್ಯಕೀಯ ಇಲಾಖೆಯಲ್ಲಿ ಹಿರಿಯ ಪಶುವೈದ್ಯ ಪರಿವೀಕ್ಷಕ. ತನ್ನ ಸರಕಾರಿ ಸೇವೆಗೆ ಸಮಯದ ಪರಿಮಿತಿ ಇಲ್ಲ. ಹಗಲಿರುಳು ದುಡಿದು ಸೇವೆಗೆ ನ್ಯಾಯ ನೀಡುತ್ತಾರೆ. ತನ್ನ ಹೀರೋಹೋಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ಊರೂರು, ಹಳ್ಳಿ-ಗಲ್ಲಿ ಸುತ್ತುತ್ತಾರೆ. ಅವರ ಬೈಕ್ ಚಕ್ರದ ಅಚ್ಚು ಬೀಳದ ರಸ್ತೆ-ಓಣಿಗಳಿಲ್ಲ. ಪಶು ಚಿಕಿತ್ಸೆಗೆ ಯಾರೇ ಯಾವುದೇ ಸಮಯದಲ್ಲಿ ಕರೆಯಲಿ ಈಶ್ವರಣ್ಣ ಪಶು ಆರೈಕೆಗೆ ತಕ್ಷಣ ಹಾಜರಾಗುತ್ತಾರೆ.
ಅವರೊಬ್ಬ ಅಜಾತಶತ್ರು. ಪರೋಪಕಾರಿ. ಮಡಿವಂತಿಕೆ ಅನ್ನೋದು ಅವರಲ್ಲಿಲ್ಲ. ಯಾರದೇ ಮನೆಗೆ ಹೋದರೂ ಪಾನೀಯವನ್ನು ಕೇಳಿ ಕುಡಿಯುತ್ತಾರೆ. ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಾರೆ. ಮಾತಿನಲ್ಲೇ ಮೋಡಿ ಮಾಡುತ್ತಾರೆ. ತನ್ನ ಜೀವನವನ್ನು ಈಜು ಹಾಗೂ ಪರೋಪಕಾರಕ್ಕೆ ಮುಡಿಪಾಗಿಟ್ಟಿದ್ದಾರೆ. ವಿಟ್ಲದ ಹೆಮ್ಮೆ ಕಾಶಿಮಠ ಈಶ್ವರ ಭಟ್ (+91 9449038302) ಅವರನ್ನು ಹಾಗೂ ಅವರ ಕುಟುಂಬಿಕರನ್ನು ಸೃಷ್ಟಿಕರ್ತನು ಆಯುರಾರೋಗ್ಯ ನೀಡಿ ಕರುಣಿಸಲಿ.
 

Writer - -ರಶೀದ್ ವಿಟ್ಲ.

contributor

Editor - -ರಶೀದ್ ವಿಟ್ಲ.

contributor

Similar News