‘ಜಾತಿನಿಂದಕ ಸೂಲಿಬೆಲೆಗೆ ಸಾಗರ ಪ್ರವೇಶ ನಿರ್ಬಂಧಿಸಿ': ಡಿಎಸ್‌ಎಸ್‌ನಿಂದ ಪೊಲೀಸರಿಗೆ ಮನವಿ

Update: 2016-11-24 15:38 GMT

ಸಾಗರ, ನ.24: ಜಾತಿ ನಿಂದನೆ ಮಾಡಿರುವ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ದಲಿತ ಸಂಘರ್ಷ ಸಮಿತಿ ದೂಗೂರು ನಗರ ಠಾಣೆಗೆ ಮನವಿ ಸಲ್ಲಿಸಿದೆ.

ಅವರು ಶುಕ್ರವಾರ ಇಲ್ಲಿನ ಯುವ ಬ್ರಗೇಡ್ ನಗರಸಭಾ ರಂಗಮಂದಿರದಲ್ಲಿ ಆಯೋಜಿಸಿರುವ ‘ಬ್ಲಾಕ್ ಆ್ಯಂಡ್ ವೈಟ್ ಬಚ್ಚಿಟ್ಟದ್ದು ಬಯಲಿಗೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಲಿಬೆಲೆ ಅವರಿಗೆ ಸಾಗರ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದು ಡಿಎಸ್‌ಎಸ್ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಚಕ್ರವರ್ತಿ ಸೂಲಿಬೆಲೆ ದಲಿತರ ಚಲೋ ಉಡುಪಿ ಕಾರ್ಯಕ್ರಮದ ವಿರುದ್ಧ ತಮ್ಮ ಫೇಸ್‌ಬುಕ್‌ನಲ್ಲಿ ‘ಸುಂದರ ಉಡುಪಿ ಸದ್ಯದಲ್ಲೇ ಕೊಳಕಾಗುವ ಲಕ್ಷಣಗಳು ದಟ್ಟವಾಗಿದೆ. ಆದಷ್ಟು ಬೇಗ ಸ್ವಚ್ಚ ಉಡುಪಿ ಮಾಡಬೇಕಾದ ಆವಶ್ಯಕತೆ ಇದೆ. ಜೊತೆಯಾಗುವಿರಾ?’ ಎಂದು ಅಕ್ಟೋಬರ್ 7ರಂದು ಟ್ವೀಟ್ ಮಾಡಿದ್ದಾರೆ. ಇದರಿಂದ ದಲಿತನಾದ ನನಗೆ ಹಾಗೂ ನನ್ನಂತಹ ನೂರಾರು ಮಂದಿ ದಲಿತರಿಗೆ ತುಂಬಾ ನೋವಾಗಿದೆ. ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತರಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಾವಿರಾರು ಸಂಖ್ಯೆಯ ದಲಿತರು ಉಡುಪಿಗೆ ಬಂದು ಸಮಾವೇಶ ಮಾಡಿದರೆ ಉಡುಪಿ ಕೊಳಕಾಗುವುದು ಎಂದರೆ ಮನುವಾದಿಗಳ ಜಾತಿ ಪದ್ಧತಿಯನ್ನು ಈ ಸ್ವತಂತ್ರ ಭಾರತದಲ್ಲಿ ಇನ್ನು ಮುಂದುವರಿಸಿಕೊಂಡು ಹೋಗುವಂತೆ ಚಕ್ರವರ್ತಿ ಸೂಲಿಬೆಲೆ ಜನರನ್ನು ಪ್ರಚೋದಿಸಿ, ಸಮಾಜದಲ್ಲಿ ಒಡಕು ಉಂಟು ಮಾಡುವ ಜೊತೆಗೆ ಜಾತಿ ವಿಷಬೀಜ ಬಿತ್ತುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾತಿನಿಂದನೆ ಮಾಡಿರುವ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಂಜುನಾಥ ಚಿಪ್ಪಳಿ, ನಟರಾಜ ಗೇರುಬೀಸು, ಮಂಡ್ಯ ಸುರೇಶ್, ಕೆ.ಸಿ.ರಾಮಚಂದ್ರ, ಅಣ್ಣಪ್ಪಬಾಳೆಗುಂಡಿ ಇನ್ನಿತರರಿದ್ದರು.

ಸೂಲಿಬೆಲೆ ವಿರುದ್ಧ ಸ್ವಯಂ ಪ್ರೇರಿತ ಕೇಸ್

ಚಲೋ ಉಡುಪಿ ವಿರುದ್ಧ ಜಾತಿ ನಿಂದನೆ ಮಾಡಿದ್ದ ಚಕ್ರವರ್ತಿಯವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಸಾಗರ ಡಿಎಸ್‌ಎಸ್‌ನ ಮನವಿ ಯನ್ನು ಸ್ವೀಕರಿದ ಪೊಲೀಸ್ ಇಲಾಖೆ ಸೂಲಿಬೆಲೆಯವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಚಕ್ರವರ್ತಿ ಸೂಲಿಬೆಲೆಯವರಿಗೆ ಶುಕ್ರವಾರ ಸಾಗರದಲ್ಲಿ ಯುವ ಬ್ರಿಗೇಡ್ ನಡೆಸುವ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದರೆ ಜಾತಿನಿಂದನೆ ಮತ್ತು ಜಾತಿ ವಿಷ ಬೀಜ ಬಿತ್ತುವ ಮಾತುಗಳನ್ನಾಡಲಿರುವರು. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿ ಮನವಿ ಸಲ್ಲಿಸಲಾಗಿದೆ. ಪೊಲೀಸ್ ಇಲಾಖೆ ನಮ್ಮ ಮನವಿಯನ್ನು ಕಡೆಗಣಿಸಿ ಅವರಿಗೆ ಅವಕಾಶ ಕಲ್ಪಿಸಿದರೆ ಉಗ್ರಹೋರಾಟ ಸಂಘಟಿಸಲಾಗುವುದು ಎಂದು ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News