ನೀಲಿ ಬಣ್ಣಕ್ಕೆ ತಿರುಗುವ ಉಪ್ಪು !

Update: 2016-11-24 16:08 GMT

ಸಾಗರ, ನ.24: ಇಲ್ಲಿನ ಶಾಂತಿನಗರದಲ್ಲಿ ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಯಿಂದ ತಂದ ಉಪ್ಪಿನಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿದ್ದು, ಸಾರ್ವಜನಿಕರು ಇದನ್ನು ಸೇವಿಸಿದಾಗ ಗಂಟಲು ಕೆರೆತ, ಕೈ ತುರಿಕೆ ಇನ್ನಿತರ ಸಮಸ್ಯೆಗಳು ಕಂಡು ಬಂದಿದೆ. ಇದರಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ.

ಶಾಂತಿನಗರದ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಉಸ್ಮಾನ್ ಸಾಬ್ ಎಂಬವರು ಪಡಿತರ ವ್ಯವಸ್ಥೆಯಡಿ ಅಕ್ಕಿಯ ಜೊತೆ ಸಕ್ಕರೆ, ಉಪ್ಪನ್ನು ಮನೆಗೆ ತಂದಿದ್ದಾರೆ. ಗುರುವಾರ ಬೆಳಗ್ಗೆ ಉಪ್ಪನ್ನು ದೋಸೆಹಿಟ್ಟಿಗೆ ಮಿಶ್ರಣ ಮಾಡಿದ್ದಾರೆ. ತಕ್ಷಣ ದೋಸೆಹಿಟ್ಟು ನೀಲಿಬಣ್ಣಕ್ಕೆ ತಿರುಗಿದೆ. ದೋಸೆ ತಿಂದ ಮೇಲೆ ಮನೆಯವರಿಗೆ ಗಂಟಲು ಕೆರೆತ ಪ್ರಾರಂಭವಾಗಿದೆ. ಮಧ್ಯಾಹ್ನ ಅನ್ನಕ್ಕೆ ಉಪ್ಪನ್ನು ಮಿಶ್ರಣ ಮಾಡಿದಾಗಲೂ ಅನ್ನ ನೀಲಿಬಣ್ಣಕ್ಕೆ ತಿರುಗಿದೆ.

ಇದರಿಂದ ಉಸ್ಮಾನ್ ಸಾಬ್  ಗಾಬರಿಗೊಂಡು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಅಕ್ಕಪಕ್ಕದವರು ತಮಗೂ ಇದೇ ರೀತಿಯ ಅನುಭವವಾಗಿದೆ ಎಂದು ತಿಳಿಸಿದ್ದಾರೆ. ತಕ್ಷಣ ಶಾಂತಿನಗರ ಭಾಗದ ಜನರೆಲ್ಲಾ ಒಂದು ಕಡೆ ಸೇರಿ ಅನ್ನಭಾಗ್ಯ ಯೋಜನೆಯಡಿ ತಂದ ಉಪ್ಪನ್ನು ಅನ್ನ, ನೀರು ಇನ್ನಿತರ ವಸ್ತುಗಳಿಗೆ ಮಿಶ್ರಣ ಮಾಡಿದ್ದಾರೆ. ಆಗ ಉಪ್ಪುಮಿಶ್ರಣ ಮಾಡಿದ ಎಲ್ಲ ವಸ್ತುಗಳು ನೀಲಿಬಣ್ಣಕ್ಕೆ ತಿರುಗಿದೆ. ಉಪ್ಪಿಗೆ ರಾಸಾಯನಿಕ ಮಿಶ್ರಣ ಮಾಡಿರುವುದರಿಂದಲೇ ಇಂತಹ ಘಟನೆ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ನ್ಯಾಯಬೆಲೆ ಅಂಗಡಿಗೆ ಬಂದ ಉಪ್ಪಿನ ಗುಣಮಟ್ಟ ಮಾತ್ರ ಹೀಗೋ, ಅಥವಾ ಎಲ್ಲ ಕಡೆಯೂ ಇಂತಹದ್ದೇ ಘಟನೆ ನಡೆದಿದೆಯೋ ಎನ್ನುವುದು ಆಹಾರ ಇಲಾಖೆಯ ಅಧಿಕಾರಿಗಳ ತಪಾಸಣೆಯ ಬಳಿಕವಷ್ಟೇ ತಿಳಿದು ಬರಬೇಕಾಗಿದೆ.

ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ನಿಸಾರ್, ಜನರು ನ್ಯಾಯಬೆಲೆ ಅಮಗಡಿಗಳ ಮೇಲೆ ವಿಶ್ವಾಸವಿರಿಸಿ ಪಡಿತರ ಒಯ್ಯುತ್ತಾರೆ. ಉಸ್ಮಾನ್ ಸಾಬ್ ಅವರ ಮನೆಯಲ್ಲಿ ಇಂತಹ ಘಟನೆ ನಡೆದಿದೆ ಎಂದು ಗೊತ್ತಾದ ತಕ್ಷಣ ನಮ್ಮ ಮನೆಗೆ ತಂದಿರುವ ಉಪ್ಪನ್ನು ಪರಿಶೀಲನೆ ಮಾಡಿ ನೋಡಿದಾಗ ನಮಗೂ ಇಂತಹದ್ದೇ ಅನುಭವವಾಗಿದೆ. ಜನರು ಉಪ್ಪನ್ನು ಉಪಯೋಗಿಸುವಾಗ ಹೆಚ್ಚು ಜಾಗೃತೆಯಿಂದ ಇರಬೇಕು ಎಂದು ತಿಳಿಸಿದರು.

ಮಹಿಳೆಯೋರ್ವರು ಮಾತನಾಡಿ, ಪಡಿತರ ಅಂಗಡಿಯಿಂದ ಉಪ್ಪನ್ನು ಒಯ್ದವರು ಉಪಯೋಗಿಸುವ ಮೊದಲು ಅದನ್ನು ನೀರಿಗೆ ಮಿಶ್ರಣ ಮಾಡಿ, ನೀಲಿಬಣ್ಣ ಬಾರದೆ ಹೋದರೆ ಮಾತ್ರ ಉಪಯೋಗಿಸಿ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಉಪ್ಪಿನಲ್ಲಿ ವಿಷಕಾರಿ ಅಂಶವೇನೂ ಇಲ್ಲ. ಕಬ್ಬಿಣಾಂಶ ಸೇರಿರುವುದರಿಂದ ಉಪ್ಪಿನ ಬಣ್ಣ ಕಂದು ಅಥವಾ ನೀಲಿ ಬಣ್ಣಕ್ಕೆ ತಿರುಗುತ್ತದೆ. ಬಣ್ಣಯುಕ್ತ ಉಪ್ಪು ಉಪಯೋಗದಿಂದ ಆರೋಗ್ಯದ ಮೇಲೆ ಏನೂ ಅಡ್ಡ ಪರಿಣಾಮ ಬೀರುವುದಿಲ್ಲ. ಉಪ್ಪುಸೇವಿಸಿದರಿಂದ ಯಾರಿಗಾದರೂ ಸಮಸ್ಯೆಗಳಾಗಿದ್ದಲ್ಲಿ ಆಹಾರ ಇಲಾಖೆಗೆ ದೂರು ನೀಡಬಹುದು. ಆ ದೂರಿನ ಅನುಸಾರ ವಿತರಿಸಿದ ಉಪ್ಪನ್ನು ಹಿಂದಕ್ಕೆ ಪಡೆದು ಮೈಸೂರಿನ ಆಹಾರ ಪರೀಕ್ಷಾ ಲ್ಯಾಬ್‌ಗೆ ಕಳುಹಿಸಿ ತಪಾಸಣೆ ನಡೆಸಲಾಗುವುದು. ವಿಷ ಪದಾರ್ಥಗಳು ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು.

- ದೇವರಾಜು, ತಾಲೂಕು ಆಹಾರ ನಿರೀಕ್ಷಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News