ಪ್ರತಿರೋಧ ತಡೆಯಲು ನೋಟು ಗೊಂದಲದ ನಡುವೆ ಐಆರ್‌ಎಫ್ ನಿಷೇಧ: ಝಾಕಿರ್ ನಾಯ್ಕ್

Update: 2016-11-26 14:05 GMT

ಮುಂಬೈ, ನ.26: ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಮೇಲೆ ವಿಧಿಸಿರುವ 5 ವರ್ಷಗಳ ನಿಷೇಧವು ‘ಮುಸ್ಲಿಮರು, ಶಾಂತಿ, ಪ್ರಜಾಪ್ರಭುತ್ವ ಹಾಗೂ ನ್ಯಾಯದ ಮೇಲೆ ನಡೆಸಿರುವ ದಾಳಿಯಾಗಿದೆ. ಪ್ರತಿರೋಧವನ್ನು ತಡೆಯಲು ಹಾಗೂ ಮಾಧ್ಯಮಗಳ ಗಮನವನ್ನು ಬೇರೆಡೆಗೆ ಸೆಳೆಯಲು ‘ನೋಟು ರದ್ದತಿ ಗೊಂದಲದ’ ನಡುವೆಯೇ ನಿಷೇಧ ಹೇರಲಾಗಿದೆಯೆಂದು ವಿವಾದಿತ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್ ಇಂದು ಆರೋಪಿಸಿದ್ದಾರೆ.

ಕೇಂದ್ರ ಸರಕಾರವು ಇತ್ತೀಚೆಗೆ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ವಯ(ಯುಎಪಿಎ) ಐಆರ್‌ಎಫ್‌ನ ಮೇಲೆ ನಿಷೇಧ ವಿಧಿಸಿ, ಅದನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದೆ.

ನಿಷೇಧ ತೆರವಿಗಾಗಿ ತಾನು ಎಲ್ಲ ಕಾನೂನಿನ ದಾರಿಗಳನ್ನು ಮುಂದುವರಿಸುತ್ತೇನೆ. ನ್ಯಾಯಾಂಗವು ನರೇಂದ್ರ ಮೋದಿ ಸರಕಾರದ ‘ಯೋಜನೆಯನ್ನು’ ವಿಫಲಗೊಳಿಸಲಿವೆಯೆಂದು ವಿದೇಶದಲ್ಲಿರುವ 51ರ ಹರೆಯದ ನಾಯ್ಕಾ ಬಹಿರಂಗ ಪತ್ರವೊಂದರಲ್ಲಿ ಹೇಳಿದ್ದಾರೆ.

ಐಆರ್‌ಎಫ್‌ನ ಅಧಿಕಾರಿಗಳು ಸಹಿತ ನಾಯ್ಕ ವಿರುದ್ಧ ಐಪಿಸಿಯ ಸೆ.153 ಎ ಹಾಗೂ ಯುಎಪಿಎಯ ವಿವಿಧ ಪರಿಚ್ಛೇದಗಳನ್ವಯ ಮೊಕದ್ದಮೆ ದಾಖಲಿಸಲಾಗಿದೆ.

ತನಿಖೆ ನಡೆಯುವ ಮೊದಲೇ, ವರದಿಗಳೂ ಸಲ್ಲಿಕೆಯಾಗದೆಯೇ ಆಗಲೇ ನಿಷೇಧಕ್ಕೆ ನಿರ್ಧರಿಸಲಾಗಿತ್ತು. ಐಆರ್‌ಎಫ್ ನಿಷೇಧಿಸಬೇಕು. ಅದು ತನ್ನ ಮತದ ಕಾರಣದಿಂದಲೋ ಅಥವಾ ಇತರ ಕಾರಣಗಳಿಂದಲೋ ಎಂಬುದು ಮುಖ್ಯವಲ್ಲ. ತನ್ನ 25 ವರ್ಷಗಳ ಸಂಪೂರ್ಣ ಕಾನೂನು ಬದ್ಧ ಕೆಲಸವನ್ನು ನಿಷೇಧಿಸಲಾಗಿದೆಯೆಂಬುದೇ ಈಗಿರುವ ವಿಷಯವಾಗಿದೆ. ಅದು ಈ ದೇಶದ ಅತ್ಯಂತ ನತದೃಷ್ಟ ವಿಷಯವಾಗಿದೆಯೆಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಸರಕಾರದ ದೃಷ್ಟಿಯಿಂದ ಅದರ ಸಮಯವೂ ಉತ್ತಮವಾದುದಲ್ಲ. ದೇಶವು, ಸ್ವಯಂ ಹೇರಿಕೆ ಮಾಡಿರುವ ನಗದು ಬಿಕ್ಕಟ್ಟಿಗೆ ಕಾರಣವಾದ ನೋಟು ರದ್ದತಿ ಗೊಂದಲದ ನಡುವೆಯೇ ಐಆರ್‌ಎಫ್ ನಿಷೇಧದ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಂದ ಮಾಧ್ಯಮದ ಗಮನವನ್ನು ಬೇರೆಡೆಗೆ ಸೆಳೆಯಲು ಈ ನಿಷೇಧವಾಗಿದ್ದರೂ ತನಗೆ ಆಶ್ಚರ್ಯವಿಲ್ಲ. ನಗದು, ವ್ಯಾಪಾರ ಹಾಗೂ ಮೂಲಭೂತ ಅಗತ್ಯಗಳಿಗಾಗಿ ಹಸಿದಿರುವ ಸಾರ್ವಜನಿಕರಿಂದ ಯಾರೂ ಹೆಚ್ಚಿನ ಪ್ರತಿರೋಧ ನಿರೀಕ್ಷಿಸಲಾರರೆಂದು ನಾಯ್ಕಿ ಹೇಳಿದ್ದಾರೆ.

ಯುಎಪಿಎಯು, ಕೇವಲ ರಾಜಕೀಯ ಲಾಭಕ್ಕಾಗಿ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವ ಉದ್ವಿಗ್ನಕಾರಿ ಭಾಷಣಗಳನ್ನು ಮುಂದುವರಿಸಿರುವ ರಾಜೇಶ್ವರ್ ಸಿಂಗ್, ಯೋಗಿ ಆದಿತ್ಯನಾಥ ಹಾಗೂ ಸಾಧ್ವಿ ಪ್ರಾಚಿಯವರಂತಹವರಿಗೆ ಅನ್ವಯಿಸುವುದಿಲ್ಲವೆಂದು ಕಾಣಿಸುತ್ತದೆಯೆಂದು ಅವರು ಟೀಕಿಸಿದ್ದಾರೆ.

ಕಾನೂನುಕ್ರಮ ಹೋಗಲಿ, ಸರಕಾರವು ಅವರ ಕೃತ್ಯಗಳನ್ನು ಖಂಡಿಸಲೂ ಇಲ್ಲ ಅಥವಾ ಅವರಿಗೆ ವಾಗ್ದಂಡನೆ ವಿಧಿಸಿಲ್ಲ. ಈ ಪೈಶಾಚಿಕ ಕಾಯ್ದೆ ಕೇವಲ ಮುಸ್ಲಿಮರಿಗಾಗಿಯೇ ಇರುವಂತಹದೇ? ಈಗ ಅದು ಮುಖ್ಯವಾಗಿ ಅಲ್ಪಸಂಖ್ಯಾತರ ಗುಂಪುಗಳನ್ನು ಬಾಯ್ಮುಚ್ಚಿಸಲು ಇರುವಂತಹದೇ? ಎಂದು ನಾಯ್ಕಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News