ಮತ್ತೆ ಬಂದಿದೆ ಕಸಾಪ ಸಮ್ಮೇಳನ

Update: 2016-11-30 18:34 GMT

ಮತ್ತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮರಳಿ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿಷ್ಠೆಯಾಗಿರುವ ಸಮಾರಂಭ ಇದು. ನಾಡಿನ ಬೇರೆ ಬೇರೆ ಕಡೆ ಇದೇ ಮಾದರಿಯ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಇಂತಹ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತವೆ. ಅವು ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಗಳ ಪುಟ್ಟ ಮಾದರಿಯಂತೆಯೋ ಅಣಕದಂತೆಯೋ ಇರುತ್ತವೆ. ಇನ್ನು ಹೋಬಳಿ ಮಟ್ಟದ ಸಮ್ಮೇಳನಗಳೂ ಆರಂಭವಾಗಿವೆ. ಪ್ರಾಯಶ ಕೆಲವೇ ವರ್ಷಗಳಲ್ಲಿ ಗ್ರಾಮ ಮಟ್ಟದ ಸಮ್ಮೇಳನಗಳು ನಡೆಯಬಹುದು.

ದೇಶದಲ್ಲಿ, ರಾಜ್ಯದಲ್ಲಿ ಎಲ್ಲೆಂದರಲ್ಲಿ ಎಲ್ಲವೂ ಉರುಳುರುಳಿ ಮರಳಿ ಬರುತ್ತಿರುವಾಗ ಇದನ್ನೂ ಒಂದು ಅಂತಹದೇ ಘಟನೆಯೆಂದು ಜನರು ತಿಳಿಯುತ್ತಾರೆ. ಅದಕ್ಕಿಂತ ಹೆಚ್ಚಿನ ಕುತೂಹಲ, ಉತ್ಸಾಹ ಕಾಣುವುದಿಲ್ಲ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಟಿಆರ್‌ಪಿ ದರವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಾಂದರ್ಭಿಕವಾಗಿ ಸಾಹಿತ್ಯದ ಕುರಿತು ಒಂದು ರೀತಿಯ ಅಮಲನ್ನು ಸೃಷ್ಟಿಸಲು ಪ್ರಯತ್ನಿಸುತ್ತವೆಯಾದರೂ ಶ್ರೀಸಾಮಾನ್ಯ ಅದನ್ನು ಅರ್ಥ ಮಾಡಿಕೊಂಡವರಂತೆ ಸುಮ್ಮನಿರುತ್ತಾನೆ. ಎಷ್ಟೇ ಕೃತಕ ಉತ್ಸಾಹವನ್ನು ಸೃಷ್ಟಿಸಿದರೂ ಇಂತಹದೊಂದು ಸಮಾರಂಭವು ಕೊನೆಗೂ ಪರಿಷತ್ತಿನ ವೆಚ್ಚದಲ್ಲಿ ಭಾಗವಹಿಸಿದವರಿಗೆ ಮಾತ್ರ ‘ಅರ್ಥ’ ಪೂರ್ಣವೆನಿಸುತ್ತದೆ.

ಮೊದಲೆಲ್ಲ ಎಲ್ಲೇ ಸಮ್ಮೇಳನಗಳು ನಡೆಯಲಿ, ದೂರದೂರುಗಳಿಂದ ಕನ್ನಡಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು ತಮ್ಮದೇ ವೆಚ್ಚದಲ್ಲಿ ಭಾಗವಹಿಸಿ ಧನ್ಯತೆಯನ್ನು ಪಡೆಯುತ್ತಿದ್ದರು. ಅದಕ್ಕೆ ಹಲವಾರು ಕಾರಣಗಳಿದ್ದವು. ಕನ್ನಡದ ಒಂದು ಪ್ರದೇಶವನ್ನು ಒಮ್ಮೆಯಾದರೂ ಕಾಣುವ ಹಂಬಲ; ಸಾಹಿತ್ಯ ಸಮ್ಮೇಳನಗಳಲ್ಲಿ ಹಿರಿಯ ಸಾಹಿತಿಗಳನ್ನು ಕಾಣುವ, ಕೇಳುವ, ಅವಕಾಶ; ಪುಸ್ತಕ ಪ್ರದರ್ಶನ-ಮಾರಾಟದಂತಹ ವ್ಯವಸ್ಥೆಗಳಲ್ಲಿ ಸ್ವಲ್ಪ ಮಟ್ಟಿನ ರಿಯಾಯಿತಿಯೊಂದಿಗೆ ಬೇಕಾದಷ್ಟು ಪುಸ್ತಕಗಳನ್ನು ಕೊಳ್ಳಬಹುದಾದ ಅನುಕೂಲ; ಅನೇಕ ಸ್ನೇಹಿತರನ್ನು ಸಂಧಿಸುವ, ಮತ್ತು ಹೊಸ ಸ್ನೇಹಿತರನ್ನು ಪಡೆಯುವ ಸಂದರ್ಭ; ಹೀಗೆ ಅದೊಂದು ರೀತಿಯ ವಿಶಿಷ್ಟ ಜನಮನದ ವೇದಿಕೆಯಾಗುತ್ತಿತ್ತು. ನವೋದಯದ ತಲೆಮಾರಿನಲ್ಲಿ ಬರಹದ ಕುರಿತು ಶ್ರೀಸಾಮಾನ್ಯರಲ್ಲೂ ಅಪೂರ್ವವಾದ ಅರಿವಿದ್ದುದರಿಂದ, ಸಾಹಿತಿಗಳ ಕುರಿತು ಪೂಜ್ಯತೆ, ಅಕಲಂಕಿತ ಗೌರವ ಇದ್ದುದರಿಂದ ಮತ್ತು ಸಾಹಿತಿಗಳು ತಮ್ಮ ಬರಹದ ಮೂಲಕವೇ ಪ್ರಸಿದ್ಧರಾಗುತ್ತಿದ್ದುದರಿಂದ ಹಾಗೂ -ಇಂದು ತಿರುಗಿ ನೋಡುವಾಗ ಗಮನಿಸಬಹುದಾದ ಇನ್ನೊಂದು ಅಂಶವಾದ-ಆ ಕಾಲದಲ್ಲಿ ಬರಹಕ್ಕಿಂತ ಭಿನ್ನವಾದ ಅಂದರೆ ಇಂದು ನಾವು ಕಾಣುವ ಮಾಹಿತಿ ತಂತ್ರಜ್ಞಾನದ ಕಿಟಕಿಗಳು ಇಲ್ಲದಿದ್ದುದರಿಂದ, ಬದುಕು ಸರಳವಾಗಿದ್ದು ಇಂದಿನಷ್ಟು ಸಂಕೀರ್ಣವಾಗಿಲ್ಲದಿದ್ದುದರಿಂದ, ಬರಹದ ಪ್ರಪಂಚವು ಒಂದು ಪವಾಡದಂತಹ ವಿದ್ಯಮಾನವಾಗಿ ಅದರ ವೈಭವೀಕರಣವೂ ಒಂದು ಮಹತ್ವದ ಆಚರಣೆಯೆನಿಸುತ್ತಿತ್ತು.

ಸಮ್ಮೇಳನದ ಅಧ್ಯಕ್ಷ ಸ್ಥಾನವು ಇಂದ್ರ ಪದವಿಯಂತೆ ಒಂದು ಶ್ರೇಷ್ಠ ಸಾಧನೆಯ ಹೆಗ್ಗುರುತಾಗಿತ್ತು. ಅಲ್ಲಿನ ಗೋಷ್ಠಿಗಳಲ್ಲಿ ಭಾಗವಹಿಸುವುದೆಂದರೆ ಪರಿಚಯದ, ಪ್ರಭಾವದ ಕಣವಾಗಿ ರಲಿಲ್ಲ; ಬದಲಾಗಿ ಸಾಹಿತ್ಯದಲ್ಲಿನ ದುಡಿಮೆಯ, ಪ್ರತಿಭೆಯ, ಪಾಂಡಿತ್ಯದ ಏರುಮೆಟ್ಟಿಸಲಿನ ಹೆಜ್ಜೆಗಳಾಗಿದ್ದವು. ಅವುಗಳಿಗೆ ಯಾವುದೇ ಪ್ರಾದೇಶಿಕ, ಜಾತೀಯ, ಧಾರ್ಮಿಕ ಮಾನದಂಡಗಳು, ಮೌಲ್ಯಮಾಪನಗಳು ಇರಲಿಲ್ಲ. ಈ ಕಾರಣಕ್ಕಾಗಿ ಪ್ರತೀ ಸಮ್ಮೇಳನವೂ ಒಂದು ಐತಿಹಾಸಿಕ ಘಟನೆಯಾಗಿತ್ತು. ಅಖಿಲ ಭಾರತವೆಂದರೂ ಸಮ್ಮೇಳನಗಳಲ್ಲಿ ಆಯಾಯ ಊರುಗಳ ಜನರಷ್ಟೇ ಭಾಗವಹಿಸುತ್ತಿದ್ದಾರೆಂಬ ಅಂಶವನ್ನು ಗಮನಿಸಬಹುದು. ಶಿಕ್ಷಕರು ತಮಗೆ ದಕ್ಕುವ ರಿಯಾಯಿತಿ (ಮತ್ತು ಕೆಲವರಾದರೂ ಪಾಠ ತಪ್ಪಿಸಿಕೊಳ್ಳುವ ಶೈಕ್ಷಣಿಕ ಮಹಾನ್ ಉದ್ದೇಶದಿಂದ) ಭಾಗವಹಿಸುತ್ತಾರೆ. ಈಚೀಚಿಗೆ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳ ಸಮೂಹವೇ ವಿಜೃಂಭಿಸುವುದನ್ನು ಕಾಣಬಹುದು.

ಸರಕಾರವು ಭಾರೀ ಧನಸಹಾಯವನ್ನು ನೀಡುವುದರಿಂದ ಅವರನ್ನು ಬೇಡವೆನ್ನಲೂ ಸಾಧ್ಯವಿಲ್ಲ; ಅಧ್ಯಕ್ಷರಿಗೂ ಸಂಬಂಧಿಸಿದ ಆಯೋಜಕರಿಗೂ ಅಧಿಕಾರವ್ಯೆಹದ ಋಣವಿರುವುದರಿಂದ ಇದನ್ನು ಸಂದಾಯಿಸಲು ಸಮ್ಮೇಳನದ ವೇದಿಕೆಯು ಬಳಕೆಯಾಗುತ್ತಿದೆ. ಇದರಿಂದಾಗಿ ಉದ್ಘಾಟನಾ ಸಮಾರಂಭದಲ್ಲಿ ಮಂತ್ರಿಮಾಗಧರ ಗುಂಪು ವೇದಿಕೆಯಲ್ಲಿ ವಿಜೃಂಭಿಸಿ ಸಮ್ಮೇಳನಾಧ್ಯಕ್ಷರು ‘ಹೊಂದದ ಪದ’ದಂತೆ ಕಾಣಿಸುತ್ತಾರೆ! ಹೋಗಲಿ, ಈ ಮಹಾ ಮಂದಿ ಸಾಂಕೇತಿಕವಾಗಿ ಹಾಜರಿದ್ದು ತಮ್ಮ ಪಾಡಿಗೆ ತಾವಿದ್ದರೆ ಸಾಕಲ್ಲ; ಆದರೆ ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಕನ್ನಡ-ಸಾಹಿತ್ಯ (ಅ)ಜ್ಞಾನವನ್ನು ತೋಡಿಕೊಂಡೇ ತೆರಳುತ್ತಾರೆ. ಸಮ್ಮೇಳನಾಧ್ಯಕ್ಷರ ಭಾಷಣದ ಹೊತ್ತಿಗೆ ಜನರ ತಾಳ್ಮೆ ಮತ್ತು ಹೊಟ್ಟೆ ಕೆಟ್ಟುಹೋಗಿರುತ್ತದೆ. ಮಾಧ್ಯಮಗಳೂ ಅಷ್ಟೇ: ಮಂತ್ರಿಗಳು ದೀಪಹಚ್ಚುವ, ಇಲ್ಲವೇ ಇತರ ಮಾಧ್ಯಮಗಳ ಮೂಲಕ ಉದ್ಘಾಟಿಸುವ ಭಾವಚಿತ್ರಗಳನ್ನು ಹಾಕಿ ಸಮ್ಮೇಳನಾಧ್ಯಕ್ಷರು ನೀಡಿದ ಕರೆಯನ್ನು (ಅದು ವಿಶ್ವಕ್ಕೆ ಶಾಂತಿಯ, ಭ್ರಾತೃತ್ವದ, ಸಮಾನತೆಯ ಕುರಿತೇ ಇದ್ದು ಸಾಹಿತ್ಯದ ಅಂಶ ಕಡಿಮೆಯಿರುತ್ತದೆ!) ಪ್ರಕಟಿಸಿತೆಂಬಲ್ಲಿಗೆ ಮಾಧ್ಯಮದ ಕೆಲಸ ಸುಗಮಾಂತ್ಯ ಕಾಣುತ್ತದೆ. ರಾಜಕಾರಣಿಗಳು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಬೇಕು. ಏಕೆಂದರೆ ಕೊನೆಗೂ ಭಾಷೆ-ಸಾಹಿತ್ಯ-ಸಂಸ್ಕೃತಿ ಇವುಗಳ ಶಾಸನಾತ್ಮಕ ನಿಲುವುಗಳಿಗೆ, ಅನುಷ್ಠಾನಗಳಿಗೆ ಅವರೇ ಮಾರ್ಗದರ್ಶಕರು.

ರಾಜಕಾರಣಿಗಳು ಸಾಹಿತ್ಯಕ ಉದ್ದೇಶ ಮತ್ತು ಕಾರಣದಿಂದ ಭಾಗವಹಿಸುವುದು ಸರಿ. ಆದರೆ ಅವರು ವೇದಿಕೆಯಲ್ಲೇ ಇರಬೇಕೆಂಬ ಲೌಕಿಕ ನ್ಯಾಯವನ್ನು ಪರಿಷತ್ತು ನಿರ್ಮಿಸಿರುವುದರಿಂದ ರಾಜಕಾರಣಿಗಳಿಗೆ ಅನುಕೂಲವಾಗಿದೆ. ಅವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಸಮ್ಮೇಳನದ ಆನಂತರ ತೊಂದರೆಯಾಗಬಹುದೆಂಬ ಎಚ್ಚರ ಪರಿಷತ್ತಿಗೆ ಇರುತ್ತದೆ. ನಾಟಕದಲ್ಲಿ ಕಾವಲುಗಾರನ ಪಾತ್ರವನ್ನು ಕಂಪೆನಿಯ ಮಾಲಕ ವಹಿಸಿ ಅವನೆದುರು ರಾಜನ ಪಾತ್ರವನ್ನು ಅವನ ನೌಕರನೊಬ್ಬ ವಹಿಸಿದರೆ ಹೇಗಿರುತ್ತದೆಯೋ ಹಾಗೆ ಅಂತಹ ಮುಜುಗರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅನುಭವಿಸುತ್ತಿದೆ!

ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳು ಭಾಗವಹಿಸುತ್ತಾರೆ- ಪ್ರೇಕ್ಷಕ/ವೀಕ್ಷಕರಾಗಿ. ಅದೇ ರೀತಿಯ ಗೌರವವನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ-ಸಾಹಿತ್ಯ ಪಡೆಯುತ್ತಿಲ್ಲ. ಮದುವೆಯಲ್ಲಿ ಮದುಮಕ್ಕಳೇ ಕೇಂದ್ರಬಿಂದುವಾಗಬೇಕಲ್ಲದೆ ಅನ್ಯರಲ್ಲ. ಎಲ್ಲ ಸಮ್ಮೇಳನಗಳಲ್ಲಿ ಕಂಡು ಬರುವ ಒಂದು ಮುಖ್ಯ ಅಂಶವೆಂದರೆ ಗೋಷ್ಠಿಗಳಿಗೆ ಪ್ರೇಕ್ಷಕರ ಅಭಾವ. ಸಮ್ಮೇಳನಗಳ ಉದ್ದೇಶವು ಭಾಷೆಯ-ಸಾಹಿತ್ಯದ ಜಾಗೃತಿಯೆನ್ನುತ್ತಾರೆ. ಆದರೆ ಬಹುಪಾಲು ಜನರು ಗೋಷ್ಠಿಗಳ ವೀರಾವೇಶದ ಭಾಷಣಗಳ ಹೊತ್ತಿನಲ್ಲಿ ಹೊರಗೆ (ಮತ್ತು ಸಮ್ಮೇಳನದ ಊರು ಪ್ರವಾಸಿ ತಾಣವಾಗಿದ್ದರೆ ಕೆಲವು ಬಾರಿ ಊರು) ಸುತ್ತುತ್ತಿರುತ್ತಾರೆ. ಪರಿಚಿತರನ್ನು-ಸ್ನೇಹಿತರನ್ನು ಕಾಣುವುದು ಅನುಷಂಗಿಕವಾಗಿರಬೇಕೇ ಹೊರತು ಮುಖ್ಯ ಅಜೆಂಡಾ ಆಗಬಾರದು.

ಗೋಷ್ಠಿಗಳಲ್ಲಿ ಅತಿಥಿಯಾಗಿ ಬರುವ ಮಂದಿಗಳು ತಮ್ಮ ಭಾಷಣವನ್ನು ಲಿಖಿತ ರೂಪದಲ್ಲಿ ಪರಿಷತ್ತಿಗೆ ಮುಂಗಡವಾಗಿ ನೀಡುವ ನಿಯಮವನ್ನು ರೂಪಿಸುವುದು ಒಳ್ಳೆಯದು. ಏಕೆೆಂದರೆ ಯಾವುದೂ ಸಮಯಕ್ಕೆ ಸರಿಯಾಗಿ ನಡೆಯದ ಈ ಸಮ್ಮೇಳನಗಳಲ್ಲಿ ಅರಿವಿನ ಅತಿಥಿಗಳು ಬಹುಪಾಲು ತಯಾರಿಯಿಲ್ಲದೇ ಬಂದು ತಮಗೆ ವಹಿಸಿದ ಹೊಣೆಯನ್ನು ತಾವು ಒಪ್ಪಿಕೊಂಡ ಸಂದರ್ಭ ಇತ್ಯಾದಿಗಳೊಂದಿಗೆ ಪೀಠಿಕೆಯನ್ನು ತಮಗೆ ಮೀಸಲಿಟ್ಟ ಅವಧಿಯಲ್ಲಿ ವಿವರಿಸಿ ಆನಂತರ ತಮಗೆ ನೀಡಿದ ಅವಧಿಯನ್ನು ಮೀರುವುದೇ ನಿಯಮವೆಂದು ತಿಳಿದು ವಿಷಯ ಪ್ರವೇಶ ಮಾಡಿ ಅಥವಾ ಮಾಡದೆಯೇ ಹಿಂಬಾಗಿಲ ಮೂಲಕ ತೆರಳುವವರಂತೆ ಕೊನೆಗೂ ತಮ್ಮ ‘ಎರಡು ಮಾತು’ಗಳನ್ನು ಮುಗಿಸುತ್ತಾರೆ. ನಿರೂಪಣೆ, ಸ್ವಾಗತ, ವಂದನಾರ್ಪಣೆ ಇಂತಹ ಔಪಚಾರಿಕತೆಗಳೊಂದಿಗೆ ಯಾವುದೇ ಗೋಷ್ಠಿಯನ್ನು ಎಷ್ಟು ನೀರಸಗೊಳಿಸಬಹುದೋ ಅಷ್ಟೂ ನೀರಸಗೊಳಿಸುತ್ತಾರೆ!

ಈಚೀಚೆಗೆ ಹೆಚ್ಚು ಮಂದಿಗೆ ಅವಕಾಶ ನೀಡುವ ಉದ್ದೇಶದೊದಿಗೆ ವಿಂಬಲ್ಡನ್ ಪಂದ್ಯಾವಳಿಯಂತೆ ಒಂದಕ್ಕಿಂತ ಹೆಚ್ಚು ವೇದಿಕೆಗಳನ್ನು ಸೃಷ್ಟಿಸಲಾಗುತ್ತಿದೆ. ಮುಖ್ಯ ವೇದಿಕೆಯೊಂದು; ಸಮಾನಾಂತರ ವೇದಿಕೆಯಿನ್ನೊಂದು. ಇದರಿಂದಾಗಿ ಎರಡು ಉದ್ದೇಶಗಳು ಸಾರ್ಥಕಗೊಳ್ಳುತ್ತವೆ: ಒಂದು, ಎಲ್ಲ ನೀಲಿಗಣ್ಣಿನ ಮಂದಿಗೆ ಅವಕಾಶ ನೀಡುವುದು; ಮತ್ತು ಕೆಲವಾದರೂ ಸಾಹಿತಿಗಳೊಂದಿಗೆ ‘ಸಮಾನಾಂತರ’ವನ್ನು ಕಾಪಾಡಿಕೊಳ್ಳುವುದು! ಕವಿಗೋಷ್ಠಿಯೂ ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ನಡೆಯುವುದರ ಉದ್ದೇಶ ಮಾತ್ರ ಅರ್ಥವಾಗುತ್ತಿಲ್ಲ. ಕವಿಗಳಿಗೂ ಶಿಕ್ಷಣ ಸಂಸ್ಥೆಗಳಿಗೆ ‘ನ್ಯಾಕ್’ ಅರ್ಹತಾ ಪರೀಕ್ಷೆಯಿರುವ ಹಾಗೆ ಮಾಪನವಿದೆಯೇನೋ ಎಂಬ ಭ್ರಮೆಯನ್ನು ತರುತ್ತಿದೆ. ಇದೊಂದು ತರಹ ಮೊದಲ ದರ್ಜೆ, ದ್ವಿತೀಯ ದರ್ಜೆಗಳನ್ನು ಸೃಷ್ಟಿಸುತ್ತಿದೆ. ಇದನ್ನು ಕವಿಗಳೇ ವಿರೋಧಿಸಿಲ್ಲವೆಂಬುದು ಗಮನಾರ್ಹ! (ನಮ್ಮ ಸಾಹಿತಿಗಳು ಅಲ್ಪತೃಪ್ತರು; ಎಲ್ಲಾದರೂ ಸರಿಯೆ; ಎಂತಾದರು ಸರಿಯೆ; ಎಂದೆಂದಿಗೂ ನೀ ಸಮ್ಮೇಳನದಲ್ಲಿರು ಎಂಬಂತೆ ಸಮಾಧಾನಪಟ್ಟುಕೊಳ್ಳುತ್ತಾರೆ.)

ಪುಸ್ತಕ ಮಾರಾಟ ತಕ್ಕಮಟ್ಟಿಗೆ ನಡೆಯುತ್ತಿದೆ. ದುಃಖದ ವಿಚಾರವೆಂದರೆ ಇವುಗಳಲ್ಲಿ 50ಕ್ಕೂ ಹೆಚ್ಚು ಶೇಕಡಾ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿರುವುದು ನಮ್ಮ ವಿಶ್ವವಿದ್ಯಾನಿಲಯಗಳ ಪ್ರಕಟನೆಗಳು. ಈ ಪ್ರಕಟನೆಗಳಲ್ಲಿ ಬಹುಪಾಲು ಸ್ವಕೀಯ ಪರಾಗಸ್ಪರ್ಶದ ಶಿಶುಗಳಾಗಿರುವುದರಿಂದ ಅವಕ್ಕೆ ಶೇ. 50 ಅಲ್ಲ, ಶೇ. 100 ರಿಯಾಯಿತಿ ನೀಡುವವರೆಗೆ ಅವು ಪರಹಸ್ತಗತವಾಗುವುದು ಸಂಶಯ.

ಸಮಾಜದ ಇತರ ಶಿಥಿಲೀಕರಣದಂತೆ ಭಾಷೆ-ಸಾಹಿತ್ಯವೂ ಬದಲಾವಣೆಯನ್ನು ಕಾಣುತ್ತದೆ. ಅದು ಕಾಲನಿಯಮ. ಸಾಹಿತ್ಯ ಇದಕ್ಕೆ ಹೊರತಾಗಲು ಸಾಧ್ಯವಿಲ್ಲ. ಮನುಷ್ಯನು ತನ್ನ ಬಗ್ಗೆಯೇ ಹೆಚ್ಚು ಗಮನ ಹರಿಸಲು, ಮತ್ತು ಸಿದ್ಧಿಗಿಂತ ಪ್ರಸಿದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಲು ಆರಂಭಿಸಿದಲ್ಲಿಂದ ಸಾಹಿತ್ಯದ ಪ್ರಪಂಚವೂ ಬದಲಾಯಿತು. ನವ್ಯಸಾಹಿತ್ಯವು ಈ ದೃಷ್ಟಿಯಿಂದ ಅಪಾರ ಕೊಡುಗೆಯನ್ನು ನೀಡಿದೆ. ಕಳೆದ ಸುಮಾರು ಅರ್ಧಶತಮಾನದ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರೀಕ್ಷಿತ ಬೆಳವಣಿಗೆಯನ್ನು ಸಾಧಿಸಲು ಮತ್ತು ಪರಿಣಾಮವನ್ನು ಬೀರಲು ಯಶಸ್ವಿಯಾಗಲಿಲ್ಲ. ರಾಜ್ಯದ ಮತ್ತು ದೇಶದ ಕನ್ನಡಿಗರ ಸಂಖ್ಯೆಯು ಬಹುಪಟ್ಟು ಹೆಚ್ಚಾದರೂ ಪರಿಷತ್ತಿನ ಸದಸ್ಯರ ಸಂಖ್ಯೆಯು ಅದೇ ಪ್ರಮಾಣದಲ್ಲಿ ಹೆಚ್ಚಾಗಲಿಲ್ಲ. ಇದರ ಫಲಿತಾಂಶವೆಂದರೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಾತ್ರ ಆಮಂತ್ರಿತರಾಗಿ (ಅಂದರೆ ಪರಿಷತ್ತಿನ ವೆಚ್ಚದಲ್ಲಿ!) ಭಾಗವಹಿಸುವ ಸಾಹಿತಿಗಳ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಸಮ್ಮೇಳನದ ಆನಂತರ ಅವರು ಪರಿಷತ್ತಿನ ಕಡೆಗೆ ತಿರುಗಿಯೂ ನೋಡುವುದಿಲ್ಲ. ಯಾವುದೇ ಸಮ್ಮೇಳನದಲ್ಲೂ ಭಾಗವಹಿಸಿದ ಅತಿಥಿಗಳ ಅಂಕಿ-ಅಂಶಗಳನ್ನು ದಾಖಲಿಸಿದರೆ ಈ ತಾರತಮ್ಯ ಗೊತ್ತಾಗುತ್ತದೆ. ಪರಿಷತ್ತಿನ ಸದಸ್ಯರೇ ಸಾಹಿತಿಗಳು ಅಥವಾ ಅವರೇ ಭಾಗವಹಿಸಬೇಕು ಎಂಬುದಕ್ಕೆ ಸಮರ್ಥನೆಯಿಲ್ಲ. ಸಮ್ಮೇಳನವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸರ್ವ ಸದಸ್ಯರ ಸಭೆ ಅಲ್ಲವಲ್ಲ! ಆದರೆ ಕೊನೇ ಪಕ್ಷ ಸಮ್ಮೇಳನಗಳಲ್ಲಿ ಭಾಗವಹಿಸಿದ ಸದಸ್ಯೇತರ ಅತಿಥಿಗಳಿಗೆ ಕೊಡುವ ಸಂಭಾವನೆಯಲ್ಲಿ ಆಜೀವ ಸದಸ್ಯತ್ವದ ಮೊತ್ತವನ್ನಾದರೂ (ಅವರ ಮನವೊಲಿಸಿ) ಹೊಂದಿಸಿ, ಅವರನ್ನು ಸದಸ್ಯರನ್ನಾಗಿಸಿ, ಅವರ, ತಮ್ಮ ಮತ್ತು ಸಮ್ಮೇಳನದ ಗೌರವವನ್ನು ಹೆಚ್ಚಿಸಬಹುದು. ಕನ್ನಡ ಸಾಹಿತ್ಯ ಸಮ್ಮೇಳನವು ಅಗತ್ಯವೇ ಎಂದರೆ ಅಗತ್ಯ; ಇಲ್ಲವೆಂದರೆ ಇಲ್ಲ. ಸಮ್ಮೇಳನದ ತಯಾರಿಗೆ ಸಾಕಷ್ಟು ಪ್ರಾಜ್ಞರು ಸೇರಿ ಸಮಿತಿಗಳನ್ನು ರಚಿಸಿ ಸಲಹೆ-ಸೂಚನೆ ನೀಡಿ ನಿರ್ಧಾರ ಕೈಗೊಂಡಿದ್ದಾರೆಂದು ಬಲ್ಲವರ ಅಂಬೋಣ. ಆದರೂ ಇಷ್ಟೇ ಎಂದರೆ ಎಲ್ಲೋ ಇವ್ಯಾವುದೋ ಕೆಲಸ ಮಾಡಿಲ್ಲವೆಂದೇ ಅರ್ಥ; ಮತ್ತು ಅವರ ಅರ್ಹತೆ ಮತ್ತು ಪ್ರಾಮಾಣಿಕತೆ ಪ್ರಶ್ನಾರ್ಹ. ಸಾಹಿತ್ಯಕ್ಕೆ ಪೂರಕವಾಗಿ ಖಾಸಗಿ ಸಂಸ್ಥೆಗಳು- ಆಳ್ವರ ನುಡಿಸಿರಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನ, ಧಾರವಾಡ ಸಾಹಿತ್ಯ ಸಂಭ್ರಮ ಇತ್ಯಾದಿಗಳು (ಅವುಗಳ ಸ್ವಪ್ರತಿಷ್ಠೆಯ ನಡೆ-ನುಡಿ ಮತ್ತು ಸೈದ್ಧಾಂತಿಕ ವಿರೋಧಾಭಾಸಗಳ ಹೊರತಾಗಿಯೂ) ನಡೆಸುವ ಸಮ್ಮೇಳನಗಳು ಕನ್ನಡ ಸಾಹಿತ್ಯ ಸಮ್ಮೇಳನಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತವೆ. ಈ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಇನ್ನಷ್ಟು ಗಮನ ಹರಿಸುತ್ತದೆಯೆಂದು ಅಶಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News