ರಾಜ್ಯದಲ್ಲಿ ಹೆಚ್ಚಿನ ಮಹಿಳೆಯರಿಗೆ ಎಚ್‌ಐವಿ: ಡಾ.ಮಲ್ಲಿಕಾರ್ಜುನ್

Update: 2016-12-01 17:18 GMT

ಚಿಕ್ಕಮಗಳೂರು, ಡಿ.1: ವಿಶ್ವ ಏಡ್ಸ್ ದಿನಾಚರಣೆ ಕೇವಲ ಒಂದೇ ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿ ದಿನವು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಮಲ್ಲಿಕಾರ್ಜುನ್ ತಿಳಿಸಿದರು. ಅವರು ಗುರುವಾರ ನಗರದ ಸರಕಾರಿ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯ ರಾಬರ್ಟ್ ಕಾರ್ಕ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಪಂ, ಜಿಲ್ಲಾ ಕುಟುಂಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.


ಯಾವುದೇ ರೋಗ ಬಂದು ಚಿಕಿತ್ಸೆ ಪಡೆಯುವ ಬದಲಾಗಿ ರೋಗವು ಬರದೇ ಇರುವ ಹಾಗೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಒಳಿತು ಆಕಸ್ಮಿಕವಾಗಿ ಕಾಯಿಲೆ ಬಂದು ಉಲ್ಬಣವಾಗುವುದಕ್ಕಿಂತ ಮುಂಚೆ ಚಿಕಿತ್ಸೆ ಪಡೆಯಬೇಕು ಎಂಬ ಮನೋಭಾವನೆ ಇತ್ತೀಚಿನ ದಿನಗಳಲ್ಲಿ ಒಂದು ರೀತಿಯ ಅಸಡ್ಡೆ ಭಾವನೆ ಇದೆ, ಇದರಿಂದ ರೋಗವನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.


 ಏಡ್ಸ್ ರೋಗದ ಬಗ್ಗೆ ಅನೇಕರಲ್ಲಿ ತಪ್ಪು ತಿಳುವಳಿಕೆಗಳಿವೆ. ಅವರನ್ನು ಮುಟ್ಟುವುದರಿಂದ, ಅವರ ಜೊತೆ ಊಟ ಮಾಡುವುದರಿಂದ, ಏಡ್ಸ್ ರೋಗ ಹರಡುವುದಿಲ್ಲ. ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆಗೆ ಒಳಪಡಿಸದ ರಕ್ತ ಪಡೆದುಕೊಳ್ಳವುದು. ಬಳಸಿದ ಸಿರಿಂಜ್‌ಗಳನ್ನು ಬಳಸುವುದರಿಂದ ಇಂತಹ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಯಿರುತ್ತದೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಏಡ್ಸ್ ಪೀಡಿತರ ಸಂಖ್ಯೆಯಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಜಿಲ್ಲಾ ಸರ್ಜನ್ ಕುಮಾರನಾಯ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಯೂ ಈ ಮಾರಕ ರೋಗಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.

ಅದರಲ್ಲಿಯೂ 14 ರಿಂದ 15 ವರ್ಷದ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಏಡ್ಸ್ ರೋಗದ ಬಗ್ಗೆ ತಿಳುವಳಿಕೆ ನೀಡುವ ಅವಶ್ಯಕತೆಯಿದೆ ಎಂದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಾ. ಟಿ.ಪಿ. ಬಾಲಕೃಷ್ಣ ಏಡ್ಸ್ ರೋಗ ಹರಡುವಿಕೆಯ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಜಾದುಗಾರ ನಾಗಭೂಷಣ್ ರವರಿಂದ ಏಡ್ಸ್ ಕುರಿತ ಜಾಗೃತಿ ಮೂಡಿಸುವುದರೊಂದಿಗೆ ಜಾದು ಪ್ರದರ್ಶನ ನಡೆಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವೀಕ್ಷಣಾಧಿಕಾರಿ ಡಾ. ಕಲ್ಪನಾ,ಆರ್.ಸಿ.ಎಚ್.ಓಡಾ.ಕಿರಣ್, ಸೇರಿದಂತೆ ಆಶಾಕಾರ್ಯಕರ್ತೆರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರದಲ್ಲಿ ಶೋಭಾ ಪ್ರಾರ್ಥಿಸಿದರು. ತ್ರಿವೇಣಿ ಸ್ವಾಗತಿಸಿದರೆ, ಜಲಜಾಕ್ಷಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News