ಜಪಾನ್ ನಲ್ಲಿ ಭಾರತೀಯರಿಗೆ ಒಂದು ಲಕ್ಷ ಉದ್ಯೋಗಾವಕಾಶ !

Update: 2016-12-02 06:21 GMT

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿನ್ಝೋ ಅಬೆ ನಡುವೆ ಉತ್ತಮ ಸಂಬಂಧಕ್ಕೆ ಮತ್ತೊಂದು ಮಗ್ಗುಲಾಗಿ ಸಾವಿರಾರು ಪರಿಣಿತ ಮತ್ತು ನಿರುದ್ಯೋಗಿ ಭಾರತೀಯರು ಜಪಾನಿಗೆ ತೆರೆಳುವ ಸಾಧ್ಯತೆಯಿದೆ. ಹಿರಿಯ ಸರ್ಕಾರಿ ವಲಯದ ಸುದ್ದಿಗಳ ಪ್ರಕಾರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸಚಿವಾಲಯವು ಒಂದು ಲಕ್ಷ ಭಾರತೀಯ ಯುವಜನರಿಗೆ ಟೋಕಿಯೋ ದಾರಿ ತೋರಿಸಲಿದೆ. 2020 ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಕೌಶಲ್ಯವಿರುವ ಸಿಬ್ಬಂದಿಯ ಕೊರತೆಯನ್ನು ಜಪಾನ್ ಎದುರಿಸುತ್ತಿದೆ. ಮೆಗಾ ಕ್ರೀಡಾವಳಿಗೆ ಸಿದ್ಧತೆ ಮಾಡುತ್ತಿರುವಾಗ ಜಪಾನ್‌ನಲ್ಲಿ ಕಟ್ಟಡ ಕಾರ್ಮಿಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಆರಂಭದಲ್ಲಿ ಭಾರತದಿಂದ ಟೋಕಿಯೋಗೆ 10,000 ಯುವ ಕಾರ್ಮಿಕರನ್ನು ಕೌಶಲ್ಯ ಅಭಿವೃದ್ಧಿ ಸಚಿವಾಲಯವು ಜಪಾನಿನ ಇಂಟರ್ನಾಷನಲ್ ಟ್ರೈನಿಂಗ್ ಕಾರ್ಪೊರೇಶನ್ ಆರ್ಗನೈಸೇಶನ್ (ಜಿಟ್ಕೋ)ದ ಜೊತೆಗೂಡಿ ಒಡಂಬಡಿಕೆ ಮಾಡಿಕೊಂಡಿರುವ ತಾಂತ್ರಿಕ ತರಬೇತಿ ಕಾರ್ಯಕ್ರಮದ (ಟಿಐಟಿಪಿ) ಅಂಗವಾಗಿ ಟೋಕಿಯೋ ತಲುಪಲಿದ್ದಾರೆ. ನಂತರ ಇನ್ನಷ್ಟು ತಂಡಗಳನ್ನು ಬೇಡಿಕೆಗೆ ಅನುಗುಣವಾಗಿ ಜಪಾನ್ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಿಸಲಾಗುವುದು.

ಭಾರತೀಯರಿಗೆ ಏನು ಲಾಭ?

ಒಲಿಂಪಿಕ್ಸ್ ಹೊರತಾಗಿ ಬಹುತೇಕ ಭಾರತೀಯ ಯುವಕರು ಬುಲೆಟ್ ಟ್ರೈನ್ ಕಾರ್ಖಾನೆಗಳು ಮತ್ತು ಕಟ್ಟಡ ನಿರ್ಮಾಣ ನಿವೇಶನಗಳಲ್ಲಿ ಮತ್ತು ಹೈಸ್ಪೀಡ್ ಕಾರಿಡಾರ್‌ಗಳ ಮ್ಯಾನೇಜ್ಮೆಂಟ್‌ನಲ್ಲೂ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ. ಈ ಕಾರ್ಮಿಕರು ಮರಳಿ ಭಾರತಕ್ಕೆ ಬಂದಾಗ ಪ್ರಮುಖ ಜಪಾನ್ ಯೋಜನೆಗಳಲ್ಲಿ ಅವರನ್ನು ನೇಮಿಸಲಾಗುವುದು. ಹಾಗೆ ಸ್ಥಿರ ಉದ್ಯೋಗ ಮತ್ತು ಆದಾಯವನ್ನೂ ಕೌಶಲ್ಯ ಮತ್ತು ಅನುಭವ ಎರಡರ ಜೊತೆಗೆ ಪಡೆಯಬಹುದು. ಜಪಾನಿನಲ್ಲಿ ವಯಸ್ಸಾದ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಈ ದೊಡ್ಡ ಪ್ರಮಾಣದ ನೇಮಕವು ಒಲಿಂಪಿಕ್ಸ್ ಸಂದರ್ಭದಲ್ಲಿ ಪ್ರಮುಖ ಕ್ಷೇತ್ರದಲ್ಲಿ ನೆರವಾಗಲಿದೆ.

ದುರಂತಗಳಿಗೆ ಬಲಿಯಾದ ಜನರು

ಜಪಾನ್‌ನ ಕಾರ್ಮಿಕ ಸಮಸ್ಯೆಗೆ ಮುಖ್ಯ ಕಾರಣ 2010ರಿಂದ 2015ರ ನಡುವೆ ಒಂದು ಲಕ್ಷದಷ್ಟು ಕಾರ್ಮಿಕರು ಹಲವು ಪ್ರಾಕೃತಿಕ ದುರಂತಗಳಿಗೆ ಬಲಿಯಾಗಿದ್ದಾರೆ. ಈಗ ಜಪಾನ್ ಜನಸಂಖ್ಯೆ 127 ಮಿಲಿಯ ಮಂದಿ. ಚೀನಾ ಮೂರು ವರ್ಷಗಳ ಕಾಲ ತಮ್ಮ ಯುವಜನರಿಗೆ ಇಂಗ್ಲಿಷ್ ಕಲಿಸಿ 2008 ಬೀಜಿಂಗ್ ಗೇಮ್ಸ್‌ನಲ್ಲಿ ಪ್ರವಾಸಿಗರನ್ನು ನಿಭಾಯಿಸಲು ತರಬೇತು ಮಾಡಿದೆ. ಜಪಾನ್ ಕೂಡ ಉತ್ತಮ ಕೌಶಲ್ಯ ಹೊಂದಿದ ಪರಿಣತರನ್ನು ಸಕಾಲದಲ್ಲಿ ಪಡೆಯಲು ಬಯಸಿದೆ. ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಸಚಿವರಾದ ರಾಜೀವ್ ಪ್ರತಾಪ್ ರೂಡಿ ಪ್ರಕಾರ ಈ ಜಂಟಿ ಯೋಜನೆ ದೊಡ್ಡ ಪರಿವರ್ತನೆಯಾಗಲಿದೆ. “ಜಾಗತಿಕ ಗುಣಮಟ್ಟದಲ್ಲಿ ಭಾರತೀಯ ಕಾರ್ಮಿಕರನ್ನು ಪರಿಣತಗೊಳಿಸುವ ಪ್ರಧಾನಿಯ ಕನಸಿಗೆ ಇದು ರೆಕ್ಕೆ ಕೊಡಲಿದೆ. ಯುವಜನರು ಜಪಾನ್‌ನಂತಹ ದೇಶಗಳಲ್ಲಿ ವಿದೇಶಿ ತರಬೇತಿ ಪಡೆದು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ” ಎಂದಿದ್ದಾರೆ ರೂಡಿ.

ಪರಿಪೂರ್ಣ ಕಾರ್ಯ ಸಂಸ್ಕೃತಿ

 ಯುವಜನತೆ ತಮ್ಮ ಕೌಶಲ್ಯ ವೃದ್ಧಿಸಿಕೊಂಡು ಉನ್ನತ ತಂತ್ರಜ್ಞಾನ ಆಧರಿತ ಪರಿಸರದಲ್ಲಿ ಎರಡು ದೇಶಗಳ ನಿಗಾದಲ್ಲಿ ಕೆಲಸ ಮಾಡುವುದು ಸುವರ್ಣಾವಕಾಶ. ಕಾರ್ಯಕ್ರಮದ ಯಶಸ್ಸಿಗಾಗಿ ಭಾರತೀಯ ಉದ್ಯಮ ಸಂಘಟನೆಯೂ ಸಚಿವಾಲಯದ ಜೊತೆಗೆ ಕೆಲಸ ಮಾಡುತ್ತಿದೆ. ಯೋಜನೆ ಈಗಷ್ಟೇ ಆರಂಭವಾಗಿದ್ದು, ಭಾರತ-ಜಪಾನ್ ಆರ್ಥಿಕ ಸಹಕಾರ ಕಾರ್ಯಕ್ರಮ ಸುಸ್ಥಿರವಾಗಿ ನಡೆಯಲು ಇನ್ನೂ ಕೆಲ ತಿಂಗಳುಗಳೇ ಹಿಡಿಯಬಹುದು. ಸಾರ್ಕ್ ದೇಶಗಳು ಮತ್ತು ಆಗ್ನೇಯ ದೇಶಗಳಿಂದ ಸಿಗುತ್ತಿರುವ ಕಾರ್ಮಿಕರಿಂದ ಜಪಾನ್ ತೃಪ್ತವಾಗಿಲ್ಲ ಎನ್ನಲಾಗಿದೆ.

ಕೌಶಲ್ಯಗಳು, ಕಾರ್ಮಿಕರು ಮತ್ತು ವಾಣಿಜ್ಯ ಇಲಾಖೆಗಳು ಈ ಅವಕಾಶವನ್ನು ಬಳಸಿಕೊಂಡು ವಿದೇಶಿ ನೆಲದಲ್ಲಿ ಭಾರತೀಯರಿಗೆ ಉದ್ಯೋಗ ಮತ್ತು ತರಬೇತಿ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. 2012ರ ಅಂತ್ಯದಲ್ಲಿ ಶಿನ್ಜೋ ಅಬೆ ಅಧಿಕಾರಕ್ಕೆ ಬಂದಿದ್ದರು. ಜಪಾನ್‌ನಲ್ಲಿ ನೆಲೆಸುವ ವಿದೇಶಿಗರ ಸಂಖ್ಯೆ ಶೇ. 10ರಷ್ಟು ಏರಿಕೆಯಾಗಿ 2.2 ಮಿಲಿಯಕ್ಕೆ ಏರಿದೆ. ತಾಂತ್ರಿಕ ಇಂಟರ್ನ್‌ಗಳ ಸಂಖ್ಯೆ ಶೇ. 27ರಷ್ಟು ಏರಿದೆ ಮತ್ತು ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಶೇ. 36ರಷ್ಟು ಹೆಚ್ಚಾಗಿದೆ. ಆದರೆ ಕೌಶಲ್ಯ ಸಚಿವಾಲಯವು ನಿರ್ದಿಷ್ಟವಾಗಿ ಜಪಾನಿಗಾಗಿ ಕೌಶಲ್ಯ ಹೊಂದಿದ ಶಿಕ್ಷಿತ ಕಾರ್ಮಿಕರನ್ನೇ ಕಳುಹಿಸುವಂತೆ ಸೂಚನೆ ನೀಡಿದೆ.

ಕೃಪೆ: http://indiatoday.intoday.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News