ಹೈಕೋರ್ಟ್: 57 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Update: 2023-03-13 17:23 GMT

ಬೆಂಗಳೂರು, ಮಾ.13: ಬ್ಯಾಕ್‍ಲಾಗ್ ಹುದ್ದೆಗಳು ಸೇರಿದಂತೆ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ತುಂಬಲು 57 ಸಿವಿಲ್ ನ್ಯಾಯಾಧೀಶರನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ರಾಜ್ಯ ಹೈಕೋರ್ಟ್ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಎ.10 ಕೊನೆಯ ದಿನವಾಗಿದೆ.

ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಮಾಡಿಸಿರಬೇಕು. ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದವರಿಗೆ 38 ವಯೋಮಿತಿ, ಇತರೆ ಸಮುದಾಯಕ್ಕೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದರೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ ಎಂದು ವಿವರಿಸಲಾಗಿದೆ.

ಹೈಕೋರ್ಟ್, ಜಿಲ್ಲಾ ನ್ಯಾಯಾಂಗದ ಸಿಬ್ಬಂದಿ, ಪ್ರಾಸಿಕ್ಯೂಷನ್ ಮತ್ತು ಸರಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಸರಕಾರಿ ಪ್ರಾಸಿಕ್ಯೂಟರ್ ಹಾಗೂ ಹೆಚ್ಚುವರಿ ಸರಕಾರಿ ವಕೀಲರಾಗಿ ಸೇವಾ ನಿರತ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುತ್ತಿದೆ. ಇವರೂ ಸಹ ನೊಂದಾಯಿತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದವರಿಗೆ 43 ವಯೋಮಿತಿ, ಇತರೆ ಸಮುದಾಯಕ್ಕೆ 40 ವರ್ಷ ವಯೋಮಿತಿ ಮೀರಿರಬಾರದು ಎಂದು ಹೇಳಲಾಗಿದೆ.

ಹೈಕೋರ್ಟ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಲಿಖಿತ ಮತ್ತು ಮೌಖಿಕ) ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ. ವೇತನ ಶ್ರೇಣಿಯು 27,700 ರೂಪಾಯಿಯಿಂದ 44,770 ರೂಪಾಯಿವರೆಗೆ ಇರಲಿದೆ ಎಂದು ಹೈಕೋರ್ಟ್‍ನ ಸಿವಿಲ್ ನ್ಯಾಯಾಧೀಶರುಗಳ ನೇಮಕಾತಿ ಸಮಿತಿಯ ಮಹಾವಿಲೇಖನಾಧಿಕಾರಿ ಹಾಗೂ ಕಾರ್ಯದರ್ಶಿ ಕೆ.ಎಸ್.ಭರತ್ ಕುಮಾರ್ ತಿಳಿಸಿದ್ದಾರೆ.

Similar News