ಇನ್ನು ಮುಂದೆ ‘11 ಇ ನಕ್ಷೆ’, ‘ತತ್ಕಾಲ್ ಪೋಡಿʼಗೆ ಗ್ರಾ.ಪಂ. ಬಾಪೂಜಿ ಸೇವಾ ಕೇಂದ್ರಗಳಲ್ಲೇ ಅರ್ಜಿ

Update: 2023-08-24 17:47 GMT

ಬೆಂಗಳೂರು, ಆ. 24: ‘ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿಯಲ್ಲಿರುವ ‘11 ಇ ನಕ್ಷೆ’, ‘ತತ್ಕಾಲ್ ಪೋಡಿ’, ‘ಭೂ ಪರಿವರ್ತನೆಗಾಗಿ ಅರ್ಜಿ’ ಮತ್ತು ‘ಹದ್ದುಬಸ್ತು’ ಸೇವೆಗಳಿಗೆ ಅರ್ಜಿ ಸಲ್ಲಿಸಿ, ಪಡೆಯಲು ತಹಶಿಲ್ದಾರ್ ಕಚೇರಿ ಅಥವಾ ಹೋಬಳಿ ಮಟ್ಟದಲ್ಲಿರುವ ಅಟಲ್‍ಜಿ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡದೆ, ಗ್ರಾ.ಪಂ.ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸದರಿ ಸೇವೆಗಳನ್ನು ಪಡೆಯಬಹುದು.

ಗ್ರಾಮೀಣ ಪ್ರದೇಶದ ಜನರಿಗೆ ಅವಶ್ಯವಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿಯಲ್ಲಿರುವ ಸದರಿ ಸೇವೆಗಳನ್ನು ಮತ್ತಷ್ಟು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾ.ಪಂ.ಗಳಲ್ಲೇ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಗ್ರಾ.ಪಂ.ಬಾಪೂಜಿ ಸೇವಾ ಕೇಂದ್ರಗಳಲ್ಲೇ ಒದಗಿಸಲು ಸರಕಾರ ನಿರ್ಧರಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಗುರುವಾರ ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇ -ಆಡಳಿತ ನಿರ್ದೇಶಕರಾದ ಶುಭ ಕಲ್ಯಾಣ್ ಸುತ್ತೋಲೆ ಹೊರಡಿಸಿದ್ದು, ಗ್ರಾ.ಪಂ.ಸೇವಾ ಕೇಂದ್ರಗಳಲ್ಲಿ ‘11 ಇ ನಕ್ಷೆ’, ‘ತತ್ಕಾಲ್ ಪೋಡಿ’, ‘ಭೂ ಪರಿವರ್ತನೆಗಾಗಿ ಅರ್ಜಿ’ ಮತ್ತು ‘ಹದ್ದುಬಸ್ತು’ ಸೇವೆಗಳಿಗೆ ಅರ್ಜಿಗಳನ್ನು ಸ್ವೀಕರಿಸಲು ಕೆಳಕಂಡಂತೆ ಶುಲ್ಕ ಪಡೆಯಲು ಆದೇಶಿಸಲಾಗಿದೆ.

‘11 ಇ ನಕ್ಷೆ’, ‘ಭೂ ಪರಿವರ್ತನೆಗಾಗಿ ಅರ್ಜಿ ಹಾಗೂ ‘ತತ್ಕಾಲ್ ಪೋಡಿ’ಗೆ 2 ಎಕರೆ ವರೆಗೆ 1500 ರೂ. ನಿಗದಿಪಡಿಸಲಾಗಿದೆ. 2 ಎಕರೆಗಿಂತ ಹೆಚ್ಚು ಪ್ರತಿ ಎಕರೆಗೆ ಹೆಚ್ಚುವರಿ 400 ರೂ., ಗ್ರಾ.ಪಂ. ಸೇವಾ ಶುಲ್ಕ 25 ರೂ.ಗಳನ್ನು ನಿಗದಿಪಡಿಸಲಾಗಿದೆ. ‘ಹದ್ದುಬಸ್ತು’ ಸೇವೆಗೆ 2 ಎಕರೆಗೆ 500ರೂ/, 2 ಎಕರೆಗಿಂತ ಹೆಚ್ಚು ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ 300ರೂ. ನೋಟಿಸ್ ಶುಲ್ಕ ಗ್ರಾಮೀಣ ಪ್ರದೇಶದ ಪ್ರತಿ ಬಾಜುದಾರರಿಗೆ 25 ರೂ. ಹಾಗೂ ಗ್ರಾ.ಪಂ.ಸೇವಾ ಶುಲ್ಕ 25 ರೂ.ಗಳನ್ನು ನಿಗದಿಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News