ನೋಟುಗಳ ಅಭಾವ; ಕೃತಕ ಸೃಷ್ಟಿಯೇ?

Update: 2016-12-02 18:14 GMT

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ, ರಾಜ್ಯ ರಸ್ತೆ ಅಭಿವೃದ್ಧಿ ಯೋಜನಾಧಿಕಾರಿ ಜಯಚಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ತೆರಿಗೆ ಇಲಾಖೆ ಅಧಿಕಾರಿಗಳು, ಇಡೀ ರಾಜ್ಯವೇ ದಂಗು ಬಡಿಸುವಂತೆ, ಅಲ್ಲಿಂದ ಎರಡು ಸಾವಿರ ರೂಪಾಯಿ ಮುಖಬೆಲೆಯ ನಾಲ್ಕು ಕೋಟಿ ರೂ. ನಗದನ್ನು ಪತ್ತೆ ಮಾಡಿದ್ದಾರೆ. ಅವೆಲ್ಲವೂ ಖೋಟಾನೋಟುಗಳು ಅಲ್ಲ. ಎಲ್ಲವೂ ಇತ್ತೀಚೆಗಷ್ಟೇ ಮುದ್ರಣಾಲಯದಿಂದ ಹೊರ ಬಿದ್ದಿರುವ ಗರಿ ಗರಿ ಎರಡು ಸಾವಿರ ರೂಪಾಯಿ ಮುಖಬೆಲೆಯ ಅಸಲಿ ನೋಟುಗಳು. ಇಂದು ಜನಸಾಮಾನ್ಯರು ಬ್ಯಾಂಕುಗಳಿಗೆ ಹೋಗಿ ತಾವು ಪಡೆಯಬೇಕಾದ ಹಕ್ಕಿನ ಹಣವನ್ನು ಡ್ರಾ ಮಾಡಿಕೊಳ್ಳುವ ಸಂದರ್ಭದಲ್ಲಿ, ಬ್ಯಾಂಕ್ ಅಧಿಕಾರಿಗಳು ಸಾವಿರ ಸಬೂಬುಗಳನ್ನು ಹೇಳುತ್ತಾರೆ. ಎಟಿಎಂಗಳು ಖಾಲಿ ಬಿದ್ದಿವೆ. ಕೇಳಿದರೆ 'ಹಣ ಪೂರೈಕೆ ಇಲ್ಲ' ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ. ಹಣ ವಿನಿಮಯವಂತೂ ಭಾಗಶಃ ನಿಂತೇ ಬಿಟ್ಟಿದೆ. ತಮ್ಮ ಅಕೌಂಟಿನಲ್ಲಿದ್ದ ಹಣವನ್ನು ತೆಗೆದುಕೊಳ್ಳುವುದಕ್ಕೂ ಸಾವಿರ ನಿಬಂಧನೆಗಳಿವೆ. ಇಂತಹ ಸಂದರ್ಭದಲ್ಲಿ ಮೋದಿಯ ಕಪ್ಪು ಹಣದ ಸರ್ಜಿಕಲ್ ದಾಳಿಯನ್ನೇ ಅಣಕಿಸುವಂತೆ, ಇಬ್ಬರು ಮಾಮೂಲಿ ಅಧಿಕಾರಿಗಳ ಕೋಣೆಯಲ್ಲಿ ಆರು ಕೋಟಿ ರೂಪಾಯಿಯ ಹೊಸ ಎರಡು ಸಾವಿರದ ನೋಟುಗಳು ದೊರಕಿವೆ. ಇದು ಮೋದಿಯವರ ಕಪ್ಪು ಹಣ ನಿಯಂತ್ರಣದ ಮಿತಿಯನ್ನು ಹೇಳುತ್ತಿಲ್ಲವೇ? ಕಾನೂನು ಚಾಪೆಯಡಿಯಲ್ಲಿ ತೂರಿದರೆ, ಭ್ರಷ್ಟರು ರಂಗೋಲಿಯಡಿಯಲ್ಲಿ ತೂರುತ್ತಾರೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.

 
 ಕಪ್ಪು ಹಣ ಮಾಡಲು ಈ ದೇಶದಲ್ಲಿ ರಾಜಕಾರಣಿಗಳಿಗಿಂತಲೂ ಹೆಚ್ಚು ಸುಲಭ ಅಧಿಕಾರಿಗಳಿಗೆ. ಯಾಕೆಂದರೆ ಕಾನೂನು ಏನೇ ಹೇಳಿದರೂ ಅದನ್ನು ನೇರವಾಗಿ ಜಾರಿಗೊಳಿಸುವವರು ಅಧಿಕಾರಿಗಳು. ಈ ಅಧಿಕಾರಿಗಳ ನಡುವೆ ಇರುವ ಹೊಂದಾಣಿಕೆ ಹತ್ತು ಹಲವು ಅವ್ಯವಹಾರಗಳಿಗೆ ಕಾರಣವಾಗುತ್ತದೆ. ಆದುದರಿಂದಲೇ, ಅಧಿಕಾರಿಗಳ ಮನೆ ಝಾಡಿಸಿದರೆ ಅದರಿಂದ ಉದುರುವುದು ಕಪ್ಪು ಹಣಗಳೇ. ಇಲ್ಲಿ ಅಧಿಕಾರಿಗಳ ಮನೆಯಲ್ಲಿ ಹೊಸ ಕರೆನ್ಸಿ ದೊರಕಿರುವುದೇನೋ ನಿಜ. ಆದರೆ ಅವರು ಅದನ್ನು ಎಲ್ಲಿಂದ ತಂದು ತಮ್ಮ ಮನೆಯಲ್ಲಿಟ್ಟುಕೊಂಡರು. ಅಷ್ಟರಮಟ್ಟಿಗೆ ಹೊಸ ಕರೆನ್ಸಿಗಳು ಅವರಿಗೆ ದೊರೆಯುವ ಬಗೆಯಾದರೂ ಹೇಗೆ? ನವೆಂಬರ್ 8ರಿಂದ ಹೊಸ ಕರೆನ್ಸಿಯನ್ನು ಪಡೆಯಲು ಸಾವಿರ ನಿಯಮಗಳಿವೆ. ಜೀವನಾಶ್ಯಕಗಳಿಗೆ ನಾಲ್ಕು ಸಾವಿರ ಪಡೆಯಬೇಕಾದರೂ ಬ್ಯಾಂಕ್ ಅಧಿಕಾರಿಗಳು ಸಾವಿರ ನಿಯಮಗಳನ್ನು ಉರು ಹೊಡೆಯುತ್ತಾರೆ. ಹೀಗಿರುವಾಗ, ಇವರೇನು ಈ ಹಣವನ್ನು ಬ್ಯಾಂಕ್‌ಗಳಿಂದ ಲೂಟಿ ಹೊಡೆದರೇ? ಅಥವಾ ಇತ್ತೀಚೆಗೆ ಎಟಿಎಂಗೆ ಹಣ ಸಾಗಾಟ ಮಾಡುತ್ತಿರುವ ಚಾಲಕನೊಬ್ಬ ಮಾಡಿದಂತೆ, ವ್ಯಾನನ್ನೇ ನಾಪತ್ತೆ ಮಾಡಿದರೇ? ಈ ನಿಟ್ಟಿನಲ್ಲಿ ಯೋಚಿಸಿದರೆ, ಈ ಅಧಿಕಾರಿಗಳಿಗಿಂತ ವ್ಯಾನನ್ನು ನೇರವಾಗಿ ಎಗರಿಸಿದ ಆ ಚಾಲಕನೇ ವಾಸಿ. ಅವನಿಂದು ನೇರವಾಗಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಆದರೆ ಈ ಅಧಿಕಾರಿಗಳು ನಮ್ಮದೇ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಜನರ ಹಣವನ್ನು ದೋಚಿ ಮನೆಯಲ್ಲಿ ಕೂಡಿಟ್ಟಿದ್ದಾರೆ. ಆದರೆ ಈ ಜಾಲದಲ್ಲಿ ಕೇವಲ ಈ ಇಬ್ಬರು ಅಧಿಕಾರಿಗಳಷ್ಟೇ ಇದ್ದಾರೆ ಎನ್ನುವಂತಿಲ್ಲ. ಇವರಿಗೆ ತಮಿಳುನಾಡಿನಿಂದ ಹಣ ಬಂದಿದೆ ಎಂಬ ಮೂಲವಿದೆ. ಯಾರು ಯಾರು ಇವರ ಜೊತೆಗೆ ಶಾಮೀಲಾಗಿದ್ದಾರೆ ಎನ್ನುವುದನ್ನು ಗಂಭೀರ ತನಿಖೆಯಿಂದಷ್ಟೇ ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಇವರಿಗೆ ಆರ್‌ಬಿಐ ನಿಯಮವನ್ನು ಉಲ್ಲಂಘಿಸಿ ಹಣವನ್ನು ವಿತರಿಸಲಾಗಿದೆ. ಆದುದರಿಂದ ಇಷ್ಟು ನೋಟುಗಳು ಇವರಿಗೆ ದೊರಕಬೇಕಾದರೆ ಅದರಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವಂತೂ ಇದ್ದೇ ಇದೆ. ಜೊತೆಗೆ ವಿವಿಧ ಪ್ರಭಾವೀ ರಾಜಕಾರಣಿಗಳು ಕೈ ಜೋಡಿಸಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಹೊಸ ನೋಟುಗಳು ಕಪ್ಪು ಹಣ ರೂಪದಲ್ಲಿ ಸಂಗ್ರಹವಾಗುತ್ತಿರುವುದು ಕೇವಲ ಇವರಿಗಷ್ಟೇ ಸೀಮಿತವಾದ ವಿಷಯವಲ್ಲ. ಕೋಟಿ ಗಟ್ಟಲೆ ರೂಪಾಯಿಗಳು ಹೊಸ ನೋಟಿನ ರೂಪದಲ್ಲಿ ದೇಶಾದ್ಯಂತ ಪತ್ತೆಯಾಗುತ್ತಿವೆ. ಅಧಿಕಾರಿಗಳು ಬರೇ ಹಳೆ ನೋಟುಗಳನ್ನು ಕಪ್ಪು ಹಣ ರೂಪದಲ್ಲಿ ಪತ್ತೆ ಹಚ್ಚಿದ್ದರೆ ಪರವಾಗಿಲ್ಲ. ಜನರು ಒಂದೊಂದು ನೋಟುಗಳಿಗಾಗಿ ಪರಿತಪಿಸುತ್ತಿರುವ ಸಂದರ್ಭದಲ್ಲಿ ಬೇರೆ ಬೇರೆ ರಾಜಕಾರಣಿಗಳು, ಅಧಿಕಾರಿಗಳ ಕೋಣೆಯಲ್ಲಿ ಹೊಸ ನೋಟುಗಳು ಅದಾಗಲೇ ಕೋಟಿ ಗಟ್ಟಲೆ ಲೆಕ್ಕದಲ್ಲಿ ಸಂಗ್ರಹವಾಗುತ್ತಿದೆ ಎಂದ ಮೇಲೆ, ಈ ಮೋದಿಯ ಸರ್ಜಿಕಲ್ ದಾಳಿಗೆ ಅರ್ಥ ಏನು ಉಳಿಯಿತು? ಬರೇ ಜನಸಾಮಾನ್ಯರ ಹಣವನ್ನು ಬ್ಯಾಂಕಿಗೆ ಹಾಕಿಸಲು ಮತ್ತು ಅವರನ್ನು ಸಂಕಷ್ಟಕ್ಕೀಡು ಮಾಡಲು ಈ ಸರ್ಜಿಕಲ್ ದಾಳಿ ನಡೆಯಿತೇ? ಇಂದು ಕೇಂದ್ರದಲ್ಲಿ ಆಡಳಿತದಲ್ಲಿರುವ ರಾಜಕಾರಣಿಗಳ ಮನೆಗಳಿಗೆ ಅಥವಾ ಅವರ ಆಪ್ತರ ಮನೆಗಳಿಗೇನಾದರೂ ದಾಳಿ ನಡೆಸಲು ತೆರಿಗೆ ಅಧಿಕಾರಿಗಳಿಗೆ ಅನುಮತಿ ನೀಡಿದ್ದೇ ಆದರೆ ಸಿಗಬಹುದಾದ ಹೊಸ ನೋಟುಗಳ ಸಂಖ್ಯೆ ಎಷ್ಟಿರಬಹುದು ಎನ್ನುವುದು ಊಹಿಸಲೂ ಅಸಾಧ್ಯ. ಅದೆಲ್ಲವೂ ಯಾಕೆ? ನರೇಂದ್ರಮೋದಿಯವರು ನೋಟು ನಿಷೇಧ ಮಾಡಿದ ಬೆನ್ನಿಗೇ ಸುಮಾರು 500 ಕೋಟಿ ರೂಪಾಯಿ ವ್ಯಯ ಮಾಡಿ ರೆಡ್ಡಿ ತನ್ನ ಮಗಳ ಮದುವೆಯನ್ನು ನಡೆಸಿದರು. ಅಷ್ಟು ಅಲ್ಪಸಮಯದಲ್ಲಿ ಆತನಿಗೆ ಹೊಸ ನೋಟುಗಳು ದೊರಕಿದ ಬಗೆಯಾದರೂ ಹೇಗೆ? ಎಲ್ಲವನ್ನೂ ಈತ ಬ್ಯಾಂಕ್‌ನಲ್ಲೇ ವ್ಯವಹಾರ ಮಾಡಿದನೇ? ಕೇಂದ್ರ ಸರಕಾರಕ್ಕೆ ಒಂದಿಷ್ಟು ಬದ್ಧತೆಯೆನ್ನುವುದು ಇದ್ದಿದ್ದರೆ ಮದುವೆ ನಡೆಯುವ ಮೊದಲೇ, ಆದಾಯ ತೆರಿಗೆ ಅಧಿಕಾರಿಗಳ ಮೂಲಕ ದಾಳಿ ಮಾಡಿಸಬಹುದಿತ್ತು. ಆದರೆ ಕೋಟೆ ಸೂರೆ ಹೋದ ಮೇಲೆ, ಅಧಿಕಾರಿಗಳು ದಾಳಿಯ ನಾಟಕವನ್ನು ಮಾಡಿ, ನೋಟು ನಿಷೇಧದ ಮಿತಿಯನ್ನು ದೇಶದ ಮುಂದೆ ಸಾರಿದರು. ಅಂದರೆ ನಿಜಕ್ಕೂ ಸರಕಾರದ ಗುರಿ ಕಪ್ಪು ಹಣವನ್ನು ತಡೆಯುವುದು ಅಲ್ಲ ಎಂದಾಯಿತಲ್ಲ? ಇಂದು ಅಕ್ರಮವಾಗಿ ವಿವಿಧ ರಾಜಕಾರಣಿಗಳು ಬೇರೆ ಬೇರೆ ದಾರಿಯ ಮೂಲಕ ಹೊಸ ನೋಟುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಆದುದರಿಂದಲೇ ನೋಟುಗಳ ಅಭಾವ ಸೃಷ್ಟಿಯಾಗಿದೆ. ಜನರಿಗೆ ಜೀವನಾಶ್ಯಕ ಅಗತ್ಯಕ್ಕೆ ನೋಟುಗಳು ಸಿಗದೇ ಇರಲು ಮುಖ್ಯ ಕಾರಣ, ಕೆಲವು ಕಪ್ಪು ಕುಳಗಳು ಅಕ್ರಮ ದಾರಿಯ ಮೂಲಕ ಈಗಾಗಲೇ ಅನಗತ್ಯವಾಗಿ ಹಣವನ್ನು ಸಂಗ್ರಹಿಸಿಟ್ಟಿರುವುದು. ಸದ್ಯಕ್ಕೆ ದೇಶಾದ್ಯಂತ ನಡೆಯುತ್ತಿರುವುದನ್ನು ನಾವು ಗಮನಿಸೋಣ. ಕಪ್ಪು ವ್ಯವಹಾರಗಳು ಈ ದೇಶದಲ್ಲಿ ಎಂದೂ ನಡೆಯದಷ್ಟು ಪ್ರಮಾಣದಲ್ಲಿ ಈಗ ನಡೆಯುತ್ತಿವೆ. ಕಮಿಶನ್ ದಂಧೆ ಎಲ್ಲೆ ಮೀರಿವೆ. ಒಂದು ಲಕ್ಷ ಹೊಸ ನೋಟು ಬದಲಾಯಿಸಿ ಕೊಟ್ಟರೆ ಮೂವತ್ತು ಸಾವಿರ ಅಥವಾ ಐವತ್ತು ಸಾವಿರದ ವರೆಗೆ ಕಮಿಶನ್ ನೀಡಬೇಕು. ಕ್ರಿಮಿನಲ್‌ಗಳಂತೂ ಈ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ನಿರುದ್ಯೋಗಿಗಳು, ರಾಜಕಾರಣಿಗಳ ಚೇಲಾಗಳೂ ಇದರಲ್ಲಿ ಜೊತೆಯಾಗಿದ್ದಾರೆ. ನಿಜಕ್ಕೂ ದುಡಿದು ತಿನ್ನುವವರು, ಸಣ್ಣ ಉದ್ದಿಮೆದಾರರು, ವ್ಯಾಪಾರಿಗಳು ಮಾತ್ರ ಹಣವಿಲ್ಲದೆ ಕಕ್ಕಾಬಿಕ್ಕಿಯಾಗಿ ಬೀದಿಗೆ ಬಿದ್ದಿದ್ದಾರೆ. ಒಂದು ರೀತಿಯಲ್ಲಿ ದೇಶದ ಅರ್ಥವ್ಯವಸ್ಥೆಯನ್ನೇ ಸರ್ವನಾಶ ಮಾಡಲು ಹೊರಟಿದೆ ನೋಟು ನಿಷೇಧ. ಸರಿ, ಕ್ರಿಮಿನಲ್‌ಗಳಿಗೆ ಹೊಸ ನೋಟುಗಳು ಎಲ್ಲಿಂದ ಸಿಗುತ್ತವೆ? ಅವರ ಹಿಂದೆ ಯಾರಿದ್ದಾರೆ? ಬ್ಯಾಂಕ್ ಮ್ಯಾನೇಜರ್‌ಗಳಿಂದಲೇ ಡೀಲ್‌ಗಳು ಆರಂಭವಾಗುತ್ತವೆಯೇ? ಪ್ರಶ್ನೆಗಳು ಉತ್ತರವಿಲ್ಲದೆ ಬಿದ್ದುಕೊಂಡಿವೆ. ಕಪ್ಪು ಹಣ ಪಕ್ಕಕ್ಕಿರಲಿ. ಕನಿಷ್ಠ ಖೋಟಾನೋಟನ್ನಾದರೂ ತಡೆಯಲು ನಿಷೇಧಕ್ಕೆ ಸಾಧ್ಯವಿದೆಯೇ ಎಂದರೆ ಅದೂ ಇಲ್ಲ ಎನ್ನುವುದು ಸಾಬೀತಾಗಿದೆ. ಈಗಾಗಲೇ ದೇಶಾದ್ಯಂತ ಹೊಸನೋಟು ಖೋಟಾ ರೂಪದಲ್ಲಿ ಬಂದಿಳಿದಾಗಿದೆ. ಹೈದರಾಬಾದ್‌ನಲ್ಲಿ ಖೋಟಾ ನೋಟು ತಯಾರಿಕಾ ಘಟಕಗಳನ್ನೇ ತೆರೆಯಲಾಗಿದ್ದು, ಅವುಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಲವೆಡೆ, ಹಲವು ಕೋಟಿ ಬೆಲೆ ಬಾಳುವ ಖೋಟಾನೋಟುಗಳು ಪತ್ತೆಯಾಗಿವೆ. ಹಾಗಾದರೆ ನೋಟು ನಿಷೇಧದ ನಿಜವಾದ ಉದ್ದೇಶವೇನು? ಜನಸಾಮಾನ್ಯರ ಕಿಸೆಯಲ್ಲಿರುವ 500 ಮತ್ತು 1000 ರೂಪಾಯಿಯ ನೋಟನ್ನು ಕಿತ್ತು ಬ್ಯಾಂಕಿಗೆ ಒಪ್ಪಿಸುವುದಷ್ಟೇ ಈ ನಿಷೇಧದ ಗುರಿಯಾಗಿತ್ತೇ? ಬ್ಯಾಂಕುಗಳನ್ನು ಉಳಿಸುವುದಕ್ಕಾಗಿ ಜನರಿಗೆ ಮೋದಿ ಸರಕಾರ ದ್ರೋಹವೆಸಗಿತೇ? ಕಾಲವೇ ಇದಕ್ಕೆ ಉತ್ತರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News