ಕನ್ನಡ-ಮಾಹಿತಿ ತಂತ್ರಜ್ಞಾನ: ಕಂದಕ ನಿರ್ಮಾಣ ಸೂಕ್ತವಲ್ಲ...

Update: 2016-12-02 18:30 GMT

ರಾಯಚೂರು,ಡಿ.2: ಶಿಕ್ಷಣದಲ್ಲಿ ಅಗತ್ಯಮೀರಿ ತಂತ್ರಜ್ಞಾನದ ಸರ್ವಾ ಧಿಕಾರ ಸ್ಥಾಪಿಸುವುದು ಸರಿಯಲ್ಲ. ಕಂದಕ ನಿರ್ಮಾಣವೂ ಸೂಕ್ತವಲ್ಲ ಎಂದು ಸಮ್ಮೇಳನಾಧ್ಯಕ್ಷ ಬರಗೂರು ಅಭಿಪ್ರಾಯಪಟ್ಟಿದ್ದಾರೆ. ಬದಲಿಗೆ ಕನ್ನಡ ಮತ್ತು ತಂತ್ರಜ್ಞಾನದ ಸಂಬಂಧ ಮತ್ತು ಪ್ರಗತಿಯನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಅಗತ್ಯ ಇದೆ ಎಂದು ಅವರು ತಿಳಿಸಿದರು.

ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ಕನ್ನಡವನ್ನು ತಂತ್ರಜ್ಞಾನದ ಭಾಷೆಯ ನ್ನಾಗಿ ವಿಸ್ತರಿಸುವ ಯೋಜನೆಗಳನ್ನು ಸರಕಾರವು ತೀವ್ರಗತಿಯಲ್ಲಿ ಕೈಗೆತ್ತಿ ಕೊಳ್ಳಬೇ ಕಾಗಿದೆ. ಭಾಷಾಶಾಸ್ತ್ರೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅಗತ್ಯವೂ ಇದೆ. ಇದಕ್ಕಾಗಿ ಕರ್ನಾಟಕ ಸರಕಾರವು ‘ಯೂನಿಕೋಡ್ ಕನ್ಸಾರ್ಟಿಯಂ’ ಎಂಬ ಜಾಗತಿಕ ಸಂಸ್ಥೆಯಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವದ ಮೂಲಕ ಮತ ಚಲಾವಣೆಯ ಹಕ್ಕನ್ನು ಪಡೆಯಬೇಕು. ಇದರಿಂದ ಜಾಗತಿಕ ಸಂಸ್ಥೆಯಲ್ಲಿ ಕನ್ನಡದ ಸಮಸ್ಯೆಗಳನ್ನು ಗಮನಕ್ಕೆ ತಂದು ಸರಿಪಡಿಸಬಹುದು. ಕಂಪ್ಯೂಟರ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವ ಕನ್ನಡ ಅಕ್ಷರಗಳು ಮತ್ತು ತಂತ್ರಜ್ಞಾನದ ಶಿಷ್ಟತೆಯನ್ನು ರೂಪಿಸುವುದಕ್ಕೆ ಒಂದು ಶಾಶ್ವತ ಸಲಹಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ಭಾಷಾ ತಜ್ಞರ ಜೊತೆಗೆ ತಂತ್ರಜ್ಞರೂ ಇರಬೇಕು.

ಕರ್ನಾಟಕದಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಇರುವುದಕ್ಕಿಂತ ಹೆಚ್ಚು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿದ್ದರೂ ಅವುಗಳಿಂದ ಕನ್ನಡಕ್ಕೆ ಆಗಿರುವ ಅನುಕೂಲ ಸೊನ್ನೆಯೆಂದೇ ಹೇಳಬೇಕು. ಈ ಸಂಸ್ಥೆಗಳನ್ನು ಕನ್ನಡಕ್ಕಾಗಿ ತೊಡಗಿಸಿ ಕೊಳ್ಳುವ ಕೆಲಸವಾಗಬೇಕು, ಜೊತೆಗೆ ಕರ್ನಾಟಕ ಸರಕಾರವು ತಂತ್ರಾಂಶ ನೀತಿಯಲ್ಲಿ ಭಾಷೆಗೆ ಒತ್ತು ನೀಡುವ ಅಂಶವನ್ನು ಅಳವಡಿಸಿಕೊಳ್ಳಬೇಕು, ಸರಕಾರದ ಇ- ಇಲಾಖೆಯ ಕನ್ನಡ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಒಟ್ಟಾರೆ ಕನ್ನಡವನ್ನು ಮಾಹಿತಿ ತಂತ್ರಜ್ಞಾನದ ಭಾಷೆಯನ್ನಾಗಿ ಸಜ್ಜುಗೊಳಿಸುವ ಕೆಲಸವು ಪ್ರತ್ಯೇಕ ವಿಭಾಗ ಹಾಗೂ ತಂಡದ ಮೂಲಕ ಯೋಜನಾ ಬದ್ಧವಾಗಿ ಶೀಘ್ರಗತಿಯಲ್ಲಿ ನಡೆಯಬೇಕು, ಇದು ಕನ್ನಡವನ್ನು ತಂತ್ರಜ್ಞಾನದ ಸಂದರ್ಭದಲ್ಲಿ ಬೆಳೆಸುವ ಕ್ರಮ ಎಂದು ಬರಗೂರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News