ಸಾಮಾಜಿಕ ಅಸಮಾನತೆ ಇರುವವರೆಗೆ ದಲಿತ-ಬಂಡಾಯ ಸಾಹಿತ್ಯ ಜೀವಂತ: ಎಲ್.ಹನುಮಂತಯ್ಯ ಅಭಿಮತ

Update: 2016-12-02 18:36 GMT

ರಾಯಚೂರು,ಡಿ.2: ನಾಡಿನಲ್ಲಿ ಸಾಮಾಜಿಕ ಅಸಮಾನತೆ ಕೊನೆಯಾಗು ವವರೆಗೆ ದಲಿತ-ಬಂಡಾಯ ಸಾಹಿತ್ಯ ಮತ್ತು ಚಳವಳಿ ಜೀವಂತ ಇರಲಿದ್ದು, ಅಸಮಾನತೆಯ ಧ್ವನಿಗೆ ಅಭಿವ್ಯಕ್ತಿಯಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹೇಳಿದರು.

ಕೃಷಿ ವಿವಿ ಆವರಣದಲ್ಲಿ ನಡೆದ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಲಿತ-ಬಂಡಾಯ ಸಾಹಿತ್ಯ ಮತ್ತು ಚಳವಳಿ ಗೋಷ್ಠಿಯಲ್ಲಿ ಸಮಕಾಲಿನ ಕನ್ನಡ ದಲಿತ-ಬಂಡಾಯ ಸಾಹಿತ್ಯದ ವಿಷಯದ ಕುರಿತು ಅವರು ಮಾತನಾಡಿದರು.

ಹೊಸ ತಲೆಮಾರಿನ ಲೇಖಕರು ಕೂಡ ದಲಿತ-ಬಂಡಾಯ ಸಾಹಿತ್ಯ ಮತ್ತು ಚಳವಳಿಯ ವಿಷಯಗಳಾದ ಜಾತಿ ತಾರತಮ್ಯ, ಅಸ್ಪಶ್ಯತೆ, ದಲಿತರ ಕೇರಿ,ಗೊಲ್ಲರ ಕೇರಿ ಮತ್ತು ಕೊರವ-ಕೊರಚರ ಕೇರಿಗಳ ವಿಷಯಗಳನ್ನಿಟ್ಟು ಕೊಂಡು ಬರೆಯುತ್ತಿದ್ದಾರೆಯೇ ವಿನಃ ಉಳ್ಳವರ ಕೇರಿಯ ವಿಷಯಗಳನ್ನಲ್ಲ ಎಂದು ಪ್ರತಿಪಾದಿಸಿದ ಹನುಮಂತಯ್ಯ ಅವರು, ಆಧುನಿಕತೆ ಮತ್ತು ಜಾಗತೀಕರಣದ ಸ್ಪರ್ಶಕ್ಕೆ ಸಿಕ್ಕು ಬರವಣಿಗೆಯಲ್ಲಿ ಮಾತ್ರ ಬದಲಾವಣೆ ಯಾಗಿದೆ ಎಂದು ವಿವರಿಸಿದರು.
ಡಾ.ಚಿನ್ನಸ್ವಾಮಿ ಸೋಸಲೆ ಅವರು ಕನ್ನಡ ದಲಿತ ಸಾಹಿತ್ಯ: ಪ್ರಭಾವ- ಪ್ರೇರಣೆ, ಲಕ್ಷ್ಮೀನಾರಾಯಣ ನಾಗವಾರ ಕರ್ನಾಟಕ ದಲಿತ- ಬಂಡಾಯ ಚಳವಳಿ: ಅಂದು-ಇಂದು ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ ಅವರು ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News