ಸಾಮಾಜಿಕ ಅಸಮಾನತೆ ಇರುವವರೆಗೆ ದಲಿತ-ಬಂಡಾಯ ಸಾಹಿತ್ಯ ಜೀವಂತ : ಎಲ್.ಹನುಮಂತಯ್ಯ

Update: 2016-12-03 15:07 GMT

ರಾಯಚೂರು, ಡಿ. 3:  ನಾಡಿನಲ್ಲಿ ಸಾಮಾಜಿಕ ಅಸಮಾನತೆ ಕೊನೆಯಾಗುವವರೆಗೆ ದಲಿತ-ಬಂಡಾಯ ಸಾಹಿತ್ಯ ಮತ್ತು ಚಳವಳಿ ಜೀವಂತ ಇರಲಿದ್ದು, ಅಸಮಾನತೆಯ ಧ್ವನಿಗೆ ಅಭಿವ್ಯಕ್ತಿಯಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹೇಳಿದರು.

ಕೃಷಿ ವಿವಿ ಆವರಣದಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಲಿತ-ಬಂಡಾಯಸಾಹಿತ್ಯ ಮತ್ತು ಚಳವಳಿ ಗೋಷ್ಠಿಯಲ್ಲಿ ಸಮಕಾಲಿನ ಕನ್ನಡ ದಲಿತ-ಬಂಡಾಯ ಸಾಹಿತ್ಯದ ವಿಷಯದ ಕುರಿತು ಅವರು ಮಾತನಾಡಿದರು.

ಹೊಸ ತಲೆಮಾರಿನ ಲೇಖಕರು ಕೂಡ ದಲಿತ-ಬಂಡಾಯ ಸಾಹಿತ್ಯ ಮತ್ತು ಚಳವಳಿಯ ವಿಷಯಗಳಾದ ಜಾತಿ ತಾರತಮ್ಯ, ಅಸೃಶ್ಯತೆ, ದಲಿತರ ಕೇರಿ,ಗೊಲ್ಲರ ಕೇರಿ ಮತ್ತು ಕೊರವ-ಕೊರಚರ ಕೇರಿಗಳ ವಿಷಯಗಳನ್ನಿಟ್ಟುಕೊಂಡು ಬರೆಯುತ್ತಿದ್ದಾರೆಯೇ ವಿನಃ ಉಳ್ಳವರ ಕೇರಿಯ ವಿಷಯಗಳನ್ನಲ್ಲ ಎಂದು ಪ್ರತಿಪಾದಿಸಿದ ಹನುಮಂತಯ್ಯ ಅವರು, ಆಧುನಿಕತೆ ಮತ್ತು ಜಾಗತೀಕರಣದ ಸ್ಪರ್ಶಕ್ಕೆ ಸಿಕ್ಕು ಬರವಣಿಗೆಯಲ್ಲಿ ಮಾತ್ರ ಬದಲಾವಣೆಯಾಗಿದೆ ಎಂದು ವಿವರಿಸಿದರು.

ಸಾಹಿತ್ಯವೆಂದರೇ ಪುಸ್ತಕಗಳನ್ನು ರಚಿಸಿ ಕೆಲ ಕವನಗಳನ್ನು ಬರೆದು ತಮ್ಮ ಪಾಡಿಗೆ ತಾವು ಇರುವುದಲ್ಲ ಎಂದು ಹೇಳಿದ ಅವರು, ಸಮಾಜದಲ್ಲಿ ನಡೆಯುವ ಎಲ್ಲ ದನಿಗಳಿಗೆ ಸ್ಪಂದಿಸುವಂತಿರಬೇಕು. ಆ ಗುಣವನ್ನು ದಲಿತ-ಬಂಡಾಯ ಸಾಹಿತ್ಯ ಮತ್ತು ಚಳವಳಿ ಒಳಗೊಂಡಿತ್ತು ಮತ್ತು ಅದಕ್ಕೆ ಗ್ರಾಮೀಣ ಭಾರತವೇ ಪ್ರಮುಖವಾಗಿತ್ತು,ಗ್ರಾಮೀಣ ಭಾರತದಲ್ಲಿ ನಡೆಯುವ ತಾರತಮ್ಯ, ಅನೈರ್ಮಲ್ಯ, ರಾಜಕೀಯ ಒಳಸುಳಿ, ಅಸ್ಪಶ್ಯತೆಯಂತ ವಿಷಯಗಳೇ ಪ್ರಮುಖವಾಗಿದ್ದವು ಎಂದು ಅವರು ಹೇಳಿದರು.

ಸಾವಿರಾರು ವರ್ಷಗಳಿಂದ ನೋವು-ಅವಮಾನಗಳನ್ನು ಅನುಭವಿಸುತ್ತಿದ್ದ ಶೋಷಿತ ಸಮುದಾಯಗಳು ದಲಿತ-ಬಂಡಾಯ ಸಾಹಿತ್ಯ ಮತ್ತು ಚಳವಳಿಗಳ ಮೂಲಕ ಮಾತನಾಡತೊಡಗಿದವು ಎಂದು ಹೇಳಿದ ಅವರು, ನಾಡಿನಲ್ಲಿ ದೊಡ್ಡ ಚಳವಳಿಗೆ ಕಾರಣರಾದ ಅನೇಕ ನಾಯಕರು ಈ ಚಳವಳಿಯಿಂದಲೇ ಬಂದವರು ಎಂದು ಅವರು ನೆನಪಿಸಿದರು.

ಸಾಮಾಜಿಕ ಹೊಸಚಿಂತನೆಗೆ ಲೇಖಕರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ನೋಡಿದರೇ ನಿರಾಸೆಯಾಗುತ್ತದೆ ಎಂಬ ಅಂಶವನ್ನು ತಮ್ಮ ಮಾತಿನಲ್ಲಿ ಬಿಚ್ಚಿಟ್ಟ ಅವರು ಇಂದು ಧರ್ಮವನ್ನು ನಿಕಶಕ್ಕೊಡ್ಡುವ ಮತ್ತು ಅನುಸಂಧಾನಕ್ಕೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಕನ್ನಡ ವಿಮರ್ಶಾ ಲೋಕ ಇಂದು ನಿದ್ರಾವಸ್ಥೆಯಲ್ಲಿದೆ ಎಂಬ ಅಸಮಾಧಾನ ಮತ್ತು ಆಕ್ರೋಶವನ್ನು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ ಡಾ.ಎಲ್.ಹನುಮಂತಯ್ಯ ಅವರು ನಿದ್ರಾವಸ್ಥೆಯಲ್ಲಿರುವ ಕನ್ನಡ ವಿಮರ್ಶಾ ಕ್ಷೇತ್ರ ಅದರಿಂದ ಹೊರಬರಬೇಕಿದ್ದು, ಕನ್ನಡಿಗರಿಗೆ ಸೃಜನಶೀಲ ಕೃತಿಗಳ ಕುರಿತು ಜನರಿಗೆ ತಿಳಿಸಿ ಕೊಡುವ ಕೆಲಸ ಮಾಡಬೇಕಿದೆ ಎಂದರು.

ಹೊಸತಲೆಮಾರಿನ ಯುವ ಲೇಖಕರಿಗೆ ಅಕಾಡೆಮಿಗಳು, ಕಸಾಪಗಳ ಮೂಲಕ ತರಬೇತಿ ನೀಡುವ ಕೆಲಸ ಹಾಗೂ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಈ ಮೂಲಕ ಅವರ ಚಿಂತನೆಗಳಿಗೆ ರೂಪ ಕೊಡುವ ಹಾಗೂ ಸರಿದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳುವ ಕೆಲಸ ಹಾಗೂ ಜವಾಬ್ದಾರಿ ಹಿರಿಯ ಸಾಹಿತಿಗಳು ಹೊರಬೇಕು ಎಂದು ಅವರು ಹೇಳಿದರು.

ಡಾ.ಚಿನ್ನಸ್ವಾಮಿ ಸೋಸಲೆ ಅವರು ಕನ್ನಡ ದಲಿತ ಸಾಹಿತ್ಯ: ಪ್ರಭಾವ-ಪ್ರೇರಣೆ, ಲಕ್ಷ್ಮೀನಾರಾಯಣ ನಾಗವಾರ ಅವರು ಕರ್ನಾಟಕ ದಲಿತ-ಬಂಡಾಯ ಚಳವಳಿ: ಅಂದು-ಇಂದು ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ ಅವರು ಅಧ್ಯಕ್ಷತೆ ವಹಿಸಿದ್ದರು.

ಎಸ್.ಪ್ರದೀಪಕುಮಾರ ಕಲ್ಕೂರ್ ಸ್ವಾಗತಿಸಿದರು. ಡಾ.ಲಿಂಗರಾಜ ಅಂಗಡಿ ನಿರೂಪಿಸಿದರು. ನಾಯಕರಳ್ಳಿ ಮಂಜೇಗೌಡ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News