ಕ್ಯಾಸ್ಟ್ರೊ ಹತ್ಯೆಗೆ ಸಿಐಎ ರೂಪಿಸಿದ್ದ ಸಂಚುಗಳು ಒಂದೆರಡಲ್ಲ....

Update: 2016-12-04 10:21 GMT

ಹವಾನಾ(ಕ್ಯೂಬಾ),ಡಿ.4: ಗ್ಯಾಂಗ್‌ಸ್ಟರ್‌ಗಳು, ವಿಷಪೂರಿತ ಸಿಗಾರ್‌ಗಳು, ಸ್ಫೋಟಕ ಕಪ್ಪೆಚಿಪ್ಪುಗಳು, ವಿಷಲೇಪಿತ ಪೆನ್....ಇವೆಲ್ಲ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಅವರ ಹತ್ಯೆಗಾಗಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ರೂಪಿಸಿದ್ದ ಕೆಲವು ಸ್ಯಾಂಪಲ್‌ಗಳು ಮಾತ್ರ.
ಅಂದ ಹಾಗೆ ಕಳೆದ ವಾರ ನಿಧನರಾದ ಕ್ಯಾಸ್ಟ್ರೊ ಅವರ ಸಾವಿನ ಕಾರಣವನ್ನು ಸರಕಾರ ವು ಅತ್ಯಂತ ಗೌಪ್ಯವಾಗಿರಿಸಿದೆ.

ಸುಮಾರು 600 ಹತ್ಯಾಸಂಚುಗಳ ಗುರಿ ತಾನಾಗಿದ್ದೆ ಎಂದು ಕ್ಯಾಸ್ಟ್ರೊ ಬದುಕಿದ್ದಾಗ ಹೇಳಿಕೊಂಡಿದ್ದರು. ಆದರೆ ಸಾವನ್ನು ವಂಚಿಸುತ್ತಲೇ ಬಂದಿದ್ದ ಈ ಕ್ರಾಂತಿಕಾರಿ ನಾಯಕ ವೃದ್ಧಾಪ್ಯದಿಂದಾಗಿ ಸಹಜ ಸಾವನ್ನು ಅಪ್ಪಿರುವಂತಿದೆ. ನ.25ರಂದು ಕೊನೆಯುಸಿರೆಳೆದಾಗ ಅವರಿಗೆ 90 ವರ್ಷ ವಯಸ್ಸಾಗಿತ್ತು ಮತ್ತು ಅವರು ಕ್ಯೂಬಾದ ಅಧ್ಯಕ್ಷರಾಗಿರಲಿಲ್ಲ.

ಸಿಐಎ ದಾಖಲೆಗಳು ಮತ್ತು 1975ರಲ್ಲಿ ಅಮೆರಿಕ ಸೆನೆಟ್‌ನ ಚರ್ಚ್ ಸಮಿತಿಯು ಸಲ್ಲಿಸಿದ್ದ ವರದಿ ಕ್ಯಾಸ್ಟ್ರೊ ಹತ್ಯೆಗೆ ರೂಪಿಸಿದ್ದ ಸಂಚುಗಳನ್ನು ಬಹಿರಂಗಗೊಳಿಸಿವೆ. ಈ ಪೈಕಿ ಕೆಲವು ಸಂಚುಗಳು ಪ್ರಯೋಗಾಲಯದ ಹಂತದಿಂದ ಹೊರಕ್ಕೆ ಬಂದಿರಲೇ ಇಲ್ಲ.

‘ಗಡ್ಡ ’ವನ್ನು ನಿರ್ಮೂಲಿಸುವ ಸಂಚು

ಆರಂಭದಲ್ಲಿ ರೂಪಿಸಲಾಗಿದ್ದ ಕೆಲವು ಸಂಚುಗಳು ಕ್ಯಾಸ್ಟ್ರೊ ಹತ್ಯೆಯ ಉದ್ದೇಶ ಹೊಂದಿರಲಿಲ್ಲ, ಅವುಗಳನ್ನು ನೋಡಿದರೆ ಹೈಸ್ಕೂಲ್ ಮಕ್ಕಳು ರೂಪಿಸಿದ್ದರೇ ಎಂಬ ಅನುಮಾನ ಉಂಟಾದರೆ ತಪ್ಪೇನಿಲ್ಲ.

1960,ಮಾರ್ಚ್‌ನಿಂದ ಆಗಸ್ಟ್‌ವರೆಗೆ ಕ್ಯಾಸ್ಟ್ರೊ ಅವರ ಭಾಷಣಗಳ ದಾರಿತಪ್ಪಿಸಿ ಅವರ ಚರಿಷ್ಮಾಕ್ಕೆ ಹಾನಿಯನ್ನುಂಟು ಮಾಡಲು ಹಲವಾರು ಯೋಜನೆಗಳನ್ನು ಸಿಐಎ ರೂಪಿಸಿತ್ತು ಎಂದು ಚರ್ಚ್ ಸಮಿತಿ ಹೇಳಿದೆ.

 ಕಾಸ್ಟ್ರೊ ಅವರ ಭಾಷಣವನ್ನು ಧ್ವನಿಮುದ್ರಿಸಿಕೊಳ್ಳುವ ಸ್ಟುಡಿಯೊದಲ್ಲಿ ಎಲ್‌ಎಸ್‌ಡಿಯಂತಹ ಮಾದಕ ದ್ರವ್ಯವನ್ನು ಸಿಂಪಡಿಸುವುದು ಅಂತಹ ಒಂದು ಯೋಜನೆಯಾಗಿತ್ತು. ಆದರೆ ಮಾದಕ ದ್ರವ್ಯದ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದ್ದರಿಂದ ಈ ಯೋಜನೆಯು ತಿರಸ್ಕೃತಗೊಂಡಿತ್ತು.

ಸಿಐಎದ ತಾಂತ್ರಿಕ ಸೇವೆಗಳ ವಿಭಾಗವು ತಾತ್ಕಾಲಿಕವಾಗಿ ಮನಸ್ಸನ್ನು ಗೊಂದಲಕ್ಕೆ ತಳ್ಳುವ ರಾಸಾಯನಿಕವೊಂದನ್ನು ಸಿಗಾರ್ ಬಾಕ್ಸ್‌ಗೆ ಲೇಪಿಸಿತ್ತು. ಕ್ಯಾಸ್ಟ್ರೊ ಭಾಷಣಕ್ಕೆ ಮುನ್ನ ಸಿಗಾರ್ ಹಚ್ಚಿ ಜನರ ಮನಸ್ಸಿನಲ್ಲಿ ತನ್ನನ್ನು ಮೂರ್ಖನಂತೆ ಬಿಂಬಿಸಿಕೊಳ್ಳುತ್ತಾರೆ ಎಂದು ಆಶಿಸಿತ್ತು. ಆದರೆ ಈ ಯೋಜನೆ ಕಾರ್ಯಗತಗೊಳ್ಳಲಿಲ್ಲ.

ಕ್ಟಾಸ್ಟ್ರೊ ವ್ಯಕ್ತಿತ್ವದ ಪ್ರತೀಕವಾಗಿದ್ದ ಅವರ ಗಡ್ಡವನ್ನೇ ಇಲ್ಲವಾಗಿಸಲು ಯೋಚಿಸಿದ್ದ ಸಿಐಎ ಅವರ ಶೂಗಳಿಗೆ ಥಾಲಿಯಮ್ ಲವಣವನ್ನು ಲೇಪಿಸಲು ಯೋಜನೆಯನ್ನು ಹಾಕಿಕೊಂಡಿತ್ತು. ಪ್ರಬಲ ಕೇಶ ನಿವಾರಕವಾಗಿರುವ ಥಾಲಿಯಮ್ ಲವಣ ಅವರ ಪ್ರಸಿದ್ಧ ಗಡ್ಡದ ಕೂದಲುಗಳು ಸಂಪೂರ್ಣವಾಗಿ ಉದುರಿ ಬೀಳುವಂತೆ ಮಾಡಲಿತ್ತು.

ಕ್ಯಾಸ್ಟ್ರೊ ವಿದೇಶಕ್ಕೆ ಭೇಟಿ ನೀಡಿದಾಗ ಅವರು ತನ್ನ ಹೋಟೆಲ್ ರೂಮಿನ ಹೊರಗೆ ತನ್ನ ಶೂಗಳನ್ನು ಬಿಟ್ಟರೆ ಅವುಗಳಿಗೆ ಒಳಗಿನಿಂದ ಥಾಲಿಯಮ್ ಲವಣವನ್ನು ಲೇಪಿಸಲು ಆಲೋಚಿಸಲಾಗಿತ್ತು. ಆದರೆ ಕ್ಯಾಸ್ಟ್ರೊ ತನ್ನ ವಿದೇಶ ಪ್ರಯಾಣವನ್ನೇ ರದ್ದುಗೊಳಿಸಿದ್ದರು.

ಮಾರಣಾಂತಿಕ ಸಿಗಾರ್

1960-1965ರ ಅವಧಿಯಲ್ಲಿ ಕ್ಯಾಸ್ಟ್ರೊ ಹತ್ಯೆಗಾಗಿ ಸಿಐಎ ಕನಿಷ್ಠ ಎಂಟು ಸಂಚುಗಳನ್ನು ರೂಪಿಸಿತ್ತು ಎನ್ನುವುದಕ್ಕೆ ಪ್ರಬಲ ಸಾಕ್ಷಾಧಾರಗಳನ್ನು ಚರ್ಚ್ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕ್ಯಾಸ್ಟ್ರೊ ರ ನೆಚ್ಚಿನ ಸಿಗಾರ್ ಬಾಕ್ಸ್‌ಗೆ ಮಾರಣಾಂತಕ ಬೊಟ್ಯುಲಿನಂ ಟಾಕ್ಸಿನ್ ಅನ್ನು ಲೇಪಿಸಲಾಗಿತ್ತು. ಇದು ಎಷ್ಟೊಂದು ಪರಿಣಾಮಕಾರಿಯೆಂದರೆ ಸಿಗಾರ್ ಬಾಯಲ್ಲಿ ಕಚ್ಚಿದ ತಕ್ಷಣ ವ್ಯಕ್ತಿ ಸಾಯುತ್ತಾನೆ. ಈ ಸಿಗಾರ್ ಪೆಟ್ಟಿಗೆಯನ್ನು 1961,ಫೆಬ್ರವರಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನಿಗೆ ಒಪ್ಪಿಸಲಾಗಿತ್ತು. ಆದರೆ ಅದನ್ನು ಕ್ಯಾಸ್ಟ್ರೊಗೆ ತಲುಪಿಸುವ ಪ್ರಯತ್ನ ನಡೆದಿತ್ತೇ ಎನ್ನುವುದನ್ನು ದಾಖಲೆಗಳು ಬಹಿರಂಗಗೊಳಿಸಿಲ್ಲ.

ಗ್ಯಾಂಗ್‌ಸ್ಟರ್‌ಗಳು

1960ರಲ್ಲಿ ಕ್ಯಾಸ್ಟ್ರೊ ಹತ್ಯೆಗಾಗಿ ಗ್ಯಾಂಗ್‌ಸ್ಟರ್‌ಗಳನ್ನು ನೇಮಿಸಿಕೊಂಡಿದ್ದ ಸಿಐಎ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರೆ 1,50,000 ಡಾಲರ್‌ಗಳನ್ನು ನೀಡುವ ಕೊಡುಗೆಯನ್ನು ಅವರ ಮುಂದಿರಿಸಿತ್ತು.

ಗ್ಯಾಂಗ್‌ಸ್ಟರ್‌ಗಳು ಮಾಡುವ ಹತ್ಯೆಗಳ ಮಾದರಿಯಲ್ಲಿ ಗುಂಡು ಹಾರಿಸಿ ಕ್ಯಾಸ್ಟ್ರೊ ರನ್ನು ಕೊಲ್ಲುವ ಬಗ್ಗೆ ಸಿಐಎ ಯೋಚಿಸಿತ್ತು. ಆದರೆ ಗ್ಯಾಂಗ್‌ಸ್ಟರ್‌ಗಳು ಕ್ಯಾಸ್ಟ್ರೊ ಆಹಾರದಲ್ಲಿ ಅಥವಾ ಪಾನೀಯದಲ್ಲಿ ವಿಷದ ಮಾತ್ರೆಯನ್ನು ಬೆರೆಸುವ ಸಲಹೆಯನ್ನು ನೀಡಿತ್ತು.

ಸಿಐಎದ ತಾಂತ್ರಿಕ ಸೇವೆಗಳ ವಿಭಾಗವು ಬೊಟ್ಯುಲಿನಂ ಟಾಕ್ಸಿನ್ ಒಳಗೊಂಡಿದ್ದ ಮಾತ್ರೆಯನ್ನು ತಯಾರಿಸಿ ಅದನ್ನು ಕ್ಯೂಬಾದ ಅಧಿಕಾರಿ ಜುವಾನ್ ಒರ್ಟಾಗೆ ನೀಡಿತ್ತು.

ಆದರೆ ಹಲವಾರು ವಾರಗಳವರೆಗೂ ಕ್ಯಾಸ್ಟ್ರೊರ ಆಹಾರದಲ್ಲಿ ಅಥವಾ ಪಾನೀಯದಲ್ಲಿ ಈ ಮಾತ್ರೆಯನ್ನು ಬೆರೆಸಲು ಧೈರ್ಯವೇ ಆ ಅಧಿಕಾರಿಗೆ ಬಂದಿರಲಿಲ್ಲ ಮತ್ತು ಅಂತಿಮವಾಗಿ ಆತ ಸಿಐಎ ತನಗೆ ಒಪ್ಪಿಸಿದ್ದ ಕೆಲಸವನ್ನು ನಿರಾಕರಿಸಿದ್ದ.
ಬೇ ಆಫ್ ಪಿಗ್ಸ್ ಘಟನೆಯ ಬಳಿಕ ಮತ್ತೆ ಈ ವಿಷ ಮಾತ್ರೆಯ ಯೋಜನೆ ಜೀವ ತಳೆದಿತ್ತು, ಆದರೆ 1963ರಲ್ಲಿ ಅದನ್ನು ಮತ್ತೆ ಕೈಬಿಡಲಾಗಿತ್ತು.

ಸ್ಫೋಟಕ ಕಪ್ಪೆಚಿಪ್ಪು

1963ರಲ್ಲಿ ಆಕರ್ಷಕವಾದ ಕಪ್ಪೆಚಿಪ್ಪಿನಲ್ಲಿ ಸ್ಫೋಟಕವನ್ನು ಅಳವಡಿಸಿ ಅದನ್ನು ಕ್ಯಾಸ್ಟ್ರೊ ಸ್ಕಿನ್ ಡೈವಿಂಗ್‌ಗೆ ತೆರಳುವ ಸ್ಥಳದಲ್ಲಿ ಅವರಿಗೆ ಕಾಣುವಂತೆ ಇರಿಸಲು ಸಿಐಎ ಯೋಜಿಸಿತ್ತು. ಕ್ಯಾಸ್ಟ್ರೊ ಅದರಿಂದ ಆಕರ್ಷಿತಗೊಂಡು ಕೈಯಲ್ಲೆತ್ತಿಕೊಂಡ ತಕ್ಷಣ ಅದು ಸ್ಫೋಟಗೊಳ್ಳಬೇಕು ಎನ್ನುವುದು ಅದರ ಸಂಚಾಗಿತ್ತು. ಆದರೆ ಇದು ಕಾರ್ಯಸಾಧ್ಯವಲ್ಲ ಎಂಬ ಕಾರಣದಿಂದ ಯೋಜನೆಯನನು ಕೈಬಿಡಲಾಗಿತ್ತು.

ರೋಗಾಣುಮಿಶ್ರಿತ ಡೈವಿಂಗ್ ಸೂಟ್

ಬೇ ಆಫ್ ಪಿಗ್ಸ್‌ನ ಬಂದಿಗಳ ಬಿಡುಗಡೆ ಬಗ್ಗೆ ಕ್ಯಾಸ್ಟ್ರೊ ಜೊತೆಗೆ ಮಾತುಕತೆ ನಡೆಸುತ್ತಿದ್ದ ಅಮೆರಿಕದ ವಕೀಲ ಜೇಮ್ಸ್ ಡೊನೊವನ್ ಅವರ ಮೂಲಕ ಕ್ಯಾಸ್ಟ್ರೊಗೆ ರೋಗಾಣು ಮಿಶ್ರಿತ ಡೈವಿಂಗ್ ಸೂಟ್‌ನ್ನು ತಲುಪಿಸಲು ಸಿಐಎ ಉದ್ದೇಶಿಸಿತ್ತು. ಅದು ತೀವ್ರ ಚರ್ಮರೋಗವನ್ನುಂಟು ಮಾಡುವ ಬೂಷ್ಟನ್ನು ಈ ಸೂಟ್‌ನೊಳಗೆ ಲೇಪಿಸಿತು.್ತ ಅಲ್ಲದೆ ಡೈವಿಂಗ್ ಸೂಟ್‌ನೊಂದಿಗಿನ ಉಸಿರಾಡುವ ಸಾಧನವನ್ನು ಕ್ಷಯದ ರೋಗಾಣುಗಳಿಂದ ತುಂಬಿಸಿತ್ತು. ಆದರೆ ಈ ಸೂಟ್ ಪ್ರಯೋಗಶಾಲೆಯಿಂದ ಹೊರಕ್ಕೆ ಬರಲೇ ಇಲ್ಲ.

ವಿಷಪೂರಿತ ಪೆನ್

ಕ್ಯಾಸ್ಟ್ರೊರನ್ನು ಕೊಲ್ಲಲು ಬಯಸಿದ್ದ ಎಎಂ/ಲ್ಯಾಷ್ ಸಂಕೇತ ನಾಮದ ಹಿರಿಯ ಕ್ಯೂಬನ್ ಅಧಿಕಾರಿಗೆ ವಿಷಪೂರಿತ ಬಾಲ್‌ಪೆನ್‌ವೊಂದನ್ನು ಸಿಐಎ ನೀಡಿತ್ತು. ಈ ಪೆನ್‌ನಲ್ಲಿ ವಿಷ ತುಂಬಿದ್ದ ಅತ್ಯಂತ ಸೂಕ್ಷ್ಮಸೂಜಿಯೊಂದನ್ನು ಅಳವಡಿಸಲಾಗಿತ್ತು ಮತ್ತು ಈ ಸೂಜಿ ದೇಹದಲ್ಲಿ ಸೇರಿದರೆ ಬಲಿಪಶುವಿಗೆ ಗೊತ್ತೇ ಆಗುತ್ತಿರಲಿಲ್ಲ.
ಮೇಜರ್ ರೊಲ್ಯಾಂಡೊ ಕ್ಯುಬೆಲಾ ಎಂದು ಬಳಿಕ ಗುರುತಿಸಲ್ಪಟ್ಟಿದ್ದ ಎಎಂ/ಲ್ಯಾಷ್ ಈ ವಿಧಾನವನ್ನು ಮೆಚ್ಚಿಕೊಂಡಿರಲಿಲ್ಲ. ಇನ್ನಷ್ಟು ಅತ್ಯಾಧುನಿಕ ವಿಧಾನದ ಬಗ್ಗೆ ಯೋಚಿಸುವಂತೆ ಆತ ಸಿಬಿಐಗೆ ತಿಳಿಸಿದ್ದ.

ಕ್ಯುಬೆಲಾ ಆ ಪೆನ್‌ನ್ನು ಎಸೆದಿದ್ದನೇ ಅಥವಾ ಇಟ್ಟುಕೊಂಡಿದ್ದನೇ ಎನ್ನುವುದು ತನಗೆ ನೆನಪಿಲ್ಲ ಎಂದು ಸಿಐಎ ಅಧಿಕಾರಿಯೋರ್ವರು ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ. ಆದರೆ ಕ್ಯುಬೆಲಾ ಆ ಪೆನ್‌ನ್ನು ತಾನು ಕ್ಯೂಬಾಕ್ಕೆ ಒಯ್ಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದ.

ಡಲ್ಲಾಸ್‌ನಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್.ಕೆನೆಡಿ ಅವರ ಹತ್ಯೆ ನಡೆದ ದಿನವಾದ 1963,ನ.22ರಂದು ಈ ಪೆನ್‌ನ್ನು ಕ್ಯುಬೆಲಾಗೆ ಒಪ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News