ಇಸ್ರೇಲ್‌ | ನೆತನ್ಯಾಹು ಸರಕಾರದಿಂದ ಅಲ್-ಜಝೀರಾ ಚಾನೆಲ್‌ ಗೆ ನಿ‍ಷೇಧ

Update: 2024-05-05 14:41 GMT

 ಅಲ್ ಜಝೀರಾ ಟಿವಿ ವಾಹಿನಿ ( Photo: X \@AJEnglish ) | ಬೆಂಜಮಿನ್ ನೆತನ್ಯಾಹು (Photo: NDTV )

ಟೆಲ್‌ ಅವೀವ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನೇತೃತ್ವದ ಸರಕಾರದ ಸಚಿವ ಸಂಪುಟವು ಅಲ್-ಜಝೀರಾ ಚಾನೆಲ್‌ನ ಪ್ರಸಾರಕ್ಕೆ ಇಸ್ರೇಲ್‌ನಲ್ಲಿ ನಿಷೇಧ ಹೇರಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಸಚಿವ ಸಂಪುಟವು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ ಎಂದು ತಿಳಿದುಬಂದಿದೆ. ಫೆಲೆಸ್ತೀನ್ ಜನರ ಪರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಲ್‌ ಜಝೀರಾ ವಾಹಿನಿಯು ಯುದ್ಧ ಪೀಡಿತ ಗಾಝಾದ ಸ್ಥಿತಿಗತಿಗಳನ್ನು ಜಗತ್ತಿಗೆ ತೆರೆದಿಡುತ್ತಿದೆ.

ಅಕ್ಟೋಬರ್ 7, 2023ರಿಂದ ಹಮಾಸ್ ವಿರುದ್ಧ ಇಸ್ರೇಲ್‌ ಯುದ್ಧ ಘೋಷಿಸಿದ ಬಳಿಕ ಅಲ್‌ ಜಝೀರಾ ಮಾಧ್ಯಮ ಮತ್ತು ಇಸ್ರೇಲ್ ನಡುವಿನ ಸಂಬಂಧ ಮತ್ತಷ್ಟು ಹದೆಗೆಡಲು ಪ್ರಾರಂಭಿಸಿತ್ತು. ಅಲ್‌ ಜಝೀರಾದ ವರದಿಗಳು ಇಸ್ರೇಲ್‌ ನ ಕೆಂಗಣ್ಣಿಗೆ ಗುರಿಯಾಗಿತ್ತು. ಚಾನೆಲ್‌ ವರದಿಗಳನ್ನು ಸಹಿಸದ ಇಸ್ರೇಲ್, ಯುದ್ಧದ ಸಮಯದಲ್ಲಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಿ ಚಾನೆಲ್‌ ಗೆ ನಿಷೇಧ ಹೇರುವ ನಿರ್ಣಯ ಅಂಗೀಕರಿಸಿದೆ ಎಂದು ಅಲ್-ಜಝೀರಾ ವರದಿ ಮಾಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದ ನಿರ್ಧಾರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಘೋಷಿಸಿದ್ದಾರೆ. ಚಾನೆಲ್‌ ಮೇಲಿನ ನಿಷೇಧವು ಯಾವಾಗ ಜಾರಿಯಾಗುತ್ತದೆ? ಶಾಶ್ವತವೇ ಅಥವಾ ತಾತ್ಕಾಲಿಕವಾಗಿ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಖತರ್‌ ಮೂಲದ ವಾಹಿನಿ ಅಲ್-ಜಝೀರಾ ತಿಳಿಸಿದೆ.

ಅಲ್-ಜಝೀರಾ ವಿರುದ್ಧದ ಇಸ್ರೇಲ್‌ನ ಈ ನಿರ್ಧಾರವು ಗಾಝಾದಲ್ಲಿ ಯುದ್ಧವನ್ನು ನಿಲ್ಲಿಸುವ ಮಧ್ಯಸ್ಥಿಕೆ ಪ್ರಯತ್ನಗಳಲ್ಲಿ ಖತರ್‌ ಪ್ರಮುಖ ಪಾತ್ರ ವಹಿಸುತ್ತಿರುವ ಸಮಯದಲ್ಲೇ ನಿಷೇಧ ಹೇರುತ್ತಿರುವುದು ಉದ್ವಿಗ್ನತೆಗೆ ಕಾರಣವಾಗಬಹುದು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News