ಕಾನೂನು ವ್ಯವಸ್ಥೆ ಸಂಪೂರ್ಣ ಡಿಜಿಟಲೀಕರಣ: ಟಿ.ಬಿ.ಜಯಚಂದ್ರ

Update: 2016-12-04 14:52 GMT

ಬೆಂಗಳೂರು, ಡಿ.4: ಭಾರತೀಯ ಕಾನೂನು ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡುವುದರ ಮೂಲಕ ಸಮಯ ಹಾಗೂ ಹಣದ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಲೀಗಲ್‌ಡೆಸ್ಕ್.ಕಾಮ್ ಏರ್ಪಡಿಸಿದ್ದ ಭಾರತೀಯ ಕಾನೂನು ವ್ಯವಸ್ಥೆಯ ಡಿಜಿಟಲೀಕರಣ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾನೂನು ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಕಾನೂನು ವ್ಯವಸ್ಥೆಯಲ್ಲಿ ತಂತ್ರಜ್ಞಾನ ಹೆಚ್ಚು ಬಳಕೆಯಾಗಬೇಕು. ಆಧಾರ್ ವಿಷಯದಲ್ಲಿ ಆದಂತೆ ಡಿಜಿಟೈಸೇಷನ್ ಪ್ರಕ್ರಿಯೆಯಿಂದ ಕಾನೂನು ಪ್ರಕ್ರಿಯೆಗಳ ಸರಳೀಕರಣ, ವೆಚ್ಚ ಉಳಿತಾಯ ಹಾಗೂ ಕಾನೂನು ಕೆಲಸಗಳ ಸರಳ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಅಡಿಷನಲ್ ಸಾಲಿಸಿಟರ್ ಜನರಲ್ ಪ್ರಭುಲಿಂಗ್ ಕೆ.ನಾವಡಗಿ ಮಾತನಾಡಿ, ಕಾನೂನು ವ್ಯವಸ್ಥೆಯ ಡಿಜಿಟಲೀಕರಣ ಮಾಡುವುದು ಅತ್ಯಂತ ಅಗತ್ಯವಾಗಿದೆ. ಭಾರತದಲ್ಲಿ ಕಾನೂನು ವ್ಯವಸ್ಥೆಯನ್ನು ಡಿಜಿಟೈಸೇಷನ್ ಪರೀಕ್ಷಿಸುವುದು ಇದರಿಂದ ಸಾಧ್ಯವಾಗಲಿದೆ. ನ್ಯಾಯಾಲಯದ ದಾಖಲೆಗಳು, ಸ್ಥಿರಾಸ್ತಿ ಮತ್ತು ದಾಖಲೆ ನೋಂದಣಿ ಪ್ರಕ್ರಿಯೆಯನ್ನು ಡಿಜಿಟೈಸ್ ಮಾಡುವುದರಿಂದ ಅದರ ದುರ್ಬಳಕೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಲೀಗಲ್‌ಡೆಸ್ಕ್.ಕಾಂನ ಅಶೋಕ್ ಕಡಸೂರ್ ಮಾತನಾಡಿ, ಭಾರತ ಕಾನೂನು ವ್ಯವಸ್ಥೆಯನ್ನು ತಂತ್ರಜ್ಞಾನದ ಸರಳೀಕರಣದೊಂದಿಗೆ ಗಮನಾರ್ಹ ಬದಲಾವಣೆ ತರಬಹುದು. ಜನ ಸಮುದಾಯಕ್ಕೆ ಅವರ ಅನುಪಸ್ಥಿತಿಯಲ್ಲಿಯೂ ನೋಟರೀಕರಣ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು.

ಹಿರಿಯ ವಕೀಲ ಸಜನ್ ಪೂವಯ್ಯ ಮಾತನಾಡಿ, ಸುವ್ಯವಸ್ಥಿತ ನ್ಯಾಯಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಗೆ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ. ಇದು ಆಧುನಿಕ ಪ್ರಜಾಪ್ರಭುತ್ವ ಸಮಾಜದ ಅಗತ್ಯವೂ ಹೌದು. ದಾಖಲೆಗಳ ಡಿಜಿಟೈಸೇಷನ್, ಎಲೆಕ್ಟ್ರಾನಿಕ್ ದೃಢೀಕರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಬಳಕೆಯ ಮೂಲಕ ಪ್ರಾಮಾಣಿಕ ಮಾಹಿತಿ ತಂತ್ರಜ್ಞಾನದ ಅಳವಡಿಕೆಯಿಂದ ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿತ್ವದ ನ್ಯಾಯಾಂಗ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News