ಬಿಜೆಪಿ ಈಶ್ವರಪ್ಪನವರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಿಂದುಳಿದ ವರ್ಗಗಳಿಗೆ ಪಾಠವಾಗಲಿ

Update: 2016-12-07 15:13 GMT

ಕರ್ನಾಟಕದ ಭಾಜಪದ ಮೇಲುಸ್ತುವಾರಿ ಹೊಂದಿರುವ ಪೊಲಸಾನಿ ಮುರಳೀಧರ ರಾವ್ (ಆಂಧ್ರದ ಹಿಂದುಳಿದ ಸಮುದಾಯವಾದ ವೇಲುಮ ಸಮುದಾಯದವರು) ಮತ್ತೊಮ್ಮೆ ಗುಡುಗಿದ್ದಾರೆ. ಈ ಗುಡುಗು ಅಡಗುವುದೋ, ಮಳೆಯಾಗಿ ಸುರಿಯುವುದೋ, ಸಿಡಿಲಾಗಿ ಬಡಿದು ಈಶ್ವರಪ್ಪನವರನ್ನು ಬಲಿ ತೆಗೆದುಕೊಳ್ಳುವುದೋ ಗೊತ್ತಿಲ್ಲ.

ಈಶ್ವರಪ್ಪನವರಿಗೆ ಈಗ ಒದಗಿ ಬಂದಿರುವ ಪರಿಸ್ಥಿತಿ ಕುರುಬ ಸಮಾಜಕ್ಕೆ ಮಾತ್ರವಲ್ಲ ಭಾಜಪದ ಸಮಸ್ತ ಒಬಿಸಿ ಸಮುದಾಯವೂ ಸೇರಿದಂತೆ ಲಿಂಗಾಯತರಿಗೂ ಪಾಠವಾಗಬೇಕು. ಈಶ್ವರಪ್ಪರಂಥವರು ತಮ್ಮ ಹಿಡಿತದಲ್ಲೇ ಇದ್ದು ರಾಜಕಾರಣ ಮಾಡಬೇಕೆ ಹೊರತು ಸಮಸ್ತ ಹಿಂದುಳಿದ ಸಮುದಾಯದವರ ನಾಯಕನಾಗಿ ಹೊರ ಹೊಮ್ಮಬಾರದು ಎಂಬ ಹಮ್ಮು ಭಾಜಪಕ್ಕೆ. ಈಶ್ವರಪ್ಪನವರು ತಾವೂ ಸಹ ಅಖಂಡ ಹಿಂದೂ ಸಮಾಜವೆಂದು ಭಾವಿಸಿಕೊಂಡು ಅತ್ಯಂತ ಖಾರವಾಗಿ ಹೇಳಿಕೆ ಕೊಟ್ಟು ಸಮಾಜದ ಅನೇಕ ಜನವಿಭಾಗಗಳಿಗೆ ಅಪಥ್ಯರಾದರು. ಇಂದು ತಮ್ಮದೇ ಸಮುದಾಯದ ಸಂಘಟನೆ ಮಾಡೋಣವೆಂದರೆ ಅದೂ ಸಾಧ್ಯವಾಗುತ್ತಿಲ್ಲ. ಒಮ್ಮೆ ಹೊರಗೆ ಒಮ್ಮೆ ಒಳಗೆ ಎಂದು ಕಣ್ಣುಮುಚ್ಚಾಲೆಯಾಡುವ ಯಡಿಯೂರಪ್ಪರಂಥವರಿಗೆ ಮಣೆ ಹಾಕುವ ಭಾಜಪ ಈಶ್ವರಪ್ಪನವರನ್ನು ನಡೆಸಿಕೊಳ್ಳುತ್ತಿರುವ ರೀತಿ ತುಂಬಾ ನೋವು ಬರಿಸುತ್ತದೆ.

ಅನಂತಕುಮಾರ್ ತರಹದ ಓರ್ವ ಬ್ರಾಹ್ಮಣ ರಾಜಕಾರಣಿ ಭಾಜಪದಲ್ಲಿ ಏನೂ ಮಾಡದಿದ್ದರೂ ನಡೆದು ಹೋಗುತ್ತದೆ. ಆದರೆ ಹಿಂದುಳಿದ ಜನಾಂಗದ ಈಶ್ವರಪ್ಪರಂಥವರು ಖಡಕ್ ಹೇಳಿಕೆಗಳನ್ನು ನೀಡಿ ತಮ್ಮ ಹಿಂದೂ ನಿಷ್ಠೆ ತೋರಿಸದಿದ್ದರೆ ಸಂಘಪರಿವಾರದಿಂದ ದೂರವಾಗುತ್ತಾರೆ. ಹೀಗಾಗಿ ಖಾರದ ಹೇಳಿಕೆಗಳು ಕೊಟ್ಟು ಅಪಥ್ಯರಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈಶ್ವರಪ್ಪರವರಂಥ ನಾಯಕರಿಂದ ಹೇಳಿಕೆ ಕೊಡಿಸಿ ಸಂಘ ಪರಿವಾರದ ಮೇಲ್ಜಾತಿಯ ನಾಯಕರು ಕೈ ಬಾಯಿ ಹೊಲಸುಮಾಡಿಕೊಳ್ಳದೇ ತಾವು ಮಾತ್ರ ತಮ್ಮ ಸ್ವಚ್ಛ ಅಬಾಧಿತ ಇಮೇಜ್ ಕಾಪಾಡಿಕೊಳ್ಳುತ್ತಾರೆ. ಕಡೆ ಕಡೆಗೆ ಹಿಂದುಳಿದ ನಾಯಕರ ಸಮಸ್ತ ವ್ಯಕ್ತಿತ್ವವೇ ಬದಲಾಗಿಬಿಡುತ್ತದೆ. ಎಷ್ಟೇ ಅಪಮಾನವಾದರೂ ಸಂಘ ಪರಿವಾರದಲ್ಲಿ ಗುರುತಿಸಿಕೊಳ್ಳದಿದ್ದರೆ ಯಾವ ಭವಿಷ್ಯವೂ ಇರುವುದಿಲ್ಲ.

ಜೀವನ ಪರ್ಯಂತ ಒಂದೇ ವಾತಾವರಣದಲ್ಲಿದ್ದು ರಾಜಕಾರಣ ಮಡಿದ ಇವರು ಹೊಸ ಯಾವ ಸಿದ್ಧಾಂತ ಮತ್ತು ತತ್ವಗಳಿಗೂ ತೆರೆದುಕೊಳ್ಳುವುದಿಲ್ಲ,ಎಲ್ಲ ಭ್ರಷ್ಟ್ರಾಚಾರದ ಆರೋಪಗಳು ಬರುವುದು ಬಹುಜನ ಸಮುದಾಯದ ನಾಯಕರುಗಳ ಮೇಲೆ, ಅದರಲ್ಲೂ ಹಿಂದುಳಿದ ವರ್ಗದವರ ಮೇಲೆ. ಈ ಸುಳಿಯಲ್ಲಿ ಸಿಲುಕಿದಾಗ ಯಾರೂ ಕೈಹಿಡಿಯುವದಿಲ್ಲ.

ಕೊನೆ ಕೊನೆಗೆ ಸತ್ಯ ಗೋಚರಿಸಿದರೂ ಬೇರೆ ಪರ್ಯಾಯಗಳಿರುವುದಿಲ್ಲ. ಇವರ ಇಮೇಜ್ ನಿಂದಾಗಿ ಬೇರೆಯವರೂ ಇವರನ್ನು ಮುಟ್ಟಿಸಿಕೊಳ್ಳುವುದಿಲ್ಲ.ಇವರದೇ ಪಕ್ಷದ ಹಲವಾರು ಇವರನ್ನು ಪುಸಲಾಯಿಸುತ್ತಾರೆ ನಿಜ, ಆದರೆ ಕಷ್ಟ ಕಾಲಕ್ಕೆ ಯಾರೂ ಇವರೊಂದಿಗೆ ಬರುವುದಿಲ್ಲ.

ಇದೇ ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ರಂಥವರಿಗೂ ಆಗಿದ್ದು. ಇದೇ ಹಿಂದುಳಿದ ಜನಾಂಗದ ನಾಯಕತ್ವದ ದೊಡ್ಡ ದುರಂತ.

ಈಶ್ವರಪ್ಪನವರ ಉದ್ದೇಶ ಮತ್ತು ಭವಿಷ್ಯ ಏನೇ ಆಗಿರಲಿ, ಅವರ ಜೊತೆಗಿರುವ ಸಮುದಾಯದ ಯುವ ನಾಯಕತ್ವ ಈ ದುರಂತವನ್ನು ಅರಿಯುವಂತಾಗಲಿ.

Full View

Writer - ಶ್ರೀಧರ್ ಪ್ರಭು

contributor

Editor - ಶ್ರೀಧರ್ ಪ್ರಭು

contributor

Similar News