ಪ್ರಧಾನಿ ಮೋದಿಗೆ ಜಯಲಲಿತಾ ನೀಡಿದ ಕೊನೆಯ 'ಚಿನ್ನದಂತಹ' ಸಲಹೆ ಏನು ಗೊತ್ತೇ ?

Update: 2016-12-12 13:57 GMT

ಚೆನ್ನೈ, ಡಿ.12: ಚೆನ್ನೈಯ ಅಪೊಲೊ ಆಸ್ಪತ್ರೆಯ ತೀವ್ರ ನಿಗಾ ವಾರ್ಡ್‌ನಲ್ಲಿ ಡಿ.2ರಂದು ಶುಕ್ರವಾರ ಟಿವಿಯಲ್ಲಿ ವಾರ್ತೆಗಳನ್ನು ವೀಕ್ಷಿಸುತ್ತಿದ್ದ ವೇಳೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನುದ್ದೇಶಿಸಿದ ಟಿಪ್ಪಣಿಯೊಂದನ್ನು ಸ್ವಲ್ಪ ತ್ರಾಸದಿಂದಲೇ ಬರೆದಿದ್ದರು. ಮುಖ್ಯ ಕಾರ್ಯದರ್ಶಿ ಪಿ. ರಾಮಮೋಹನ ರಾವ್‌ಗೆ ಬರೆದಿದ್ದ ಆ ಟಿಪ್ಪಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಸಂದೇಶವಿತ್ತು.

 ಚಿನ್ನವೆಂಬುದು ಭಾವನಾತ್ಮಕ ವಿಷಯವಾಗಿರುವುದರಿಂದ ಭಾರತೀಯರಲ್ಲಿರುವ ಚಿನ್ನದ ಪ್ರಮಾಣದ ಕುರಿತ ಮಧ್ಯೆ ಪ್ರವೇಶಿಸದಂತೆ ಪ್ರಧಾನಿಗೆ ಸಲಹೆ ನೀಡಬೇಕೆಂದು ಆ ಒಂದು ಸಾಲಿನ ಟಿಪ್ಪಣಿಯಲ್ಲಿತ್ತು. ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗುವ 2 ದಿನ ಮುಂಚೆ, ನೋಟು ರದ್ದತಿಯಿಂದ ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಸಂಕಷ್ಟ ಸಹಿತ ತನ್ನ ಸುತ್ತಲೂ ನಡೆಯುತ್ತಿದ್ದುದರ ಅರಿವು ಜಯಲಲಿತಾರಿಗಿತ್ತು ಎನ್ನುವುದಕ್ಕೆ ಇದು ಪುರಾವೆಯಾಗಿದೆ.

ಅಂದರೆ, ಆಗ ಜಯಾರ ಇಂದ್ರಿಯಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಅವರು ಚೇತರಿಸಿಕೊಳ್ಳುತ್ತಿದ್ದಾರೆಂಬ ವೈದ್ಯರ ಹೇಳಿಕೆಗೆ ಅದು ಹೊಂದಾಣಿಕೆಯಾಗುತ್ತಿತ್ತು.

ಬಳಿಕ ಆ ಟಿಪ್ಪಣಿಯನ್ನು ಪ್ರಭಾರ ರಾಜ್ಯಪಾಲ ವಿದ್ಯಾಸಾಗರ ರಾವ್‌ಗೆ ತೋರಿಸಲಾಗಿತ್ತೆಂಬುದನ್ನು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ. ಬಹುಶಃ ಕೇಂದ್ರ ಸರಕಾರದ ಪ್ರತಿನಿಧಿಯ ಮೂಲಕವೇ ಆ ಸಂದೇಶ ಪ್ರಧಾನಿಗೆ ತಲುಪಲಿ ಎಂಬುದು ಅದರ ಉದ್ದೇಶವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News