ಪೊಲೀಸರ ಮುಕ್ತಾಯ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ: ಕುಟುಂಬ ಆರೋಪ

Update: 2024-05-04 15:24 GMT

ರೋಹಿತ್ ಮೇಮುಲಾ | PC : NDTV 

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ಮೇಮುಲಾ ಅವರ ಆತ್ಮಹತ್ಯೆ ಪ್ರಕರಣದ ಕುರಿತ ತೆಲಂಗಾಣ ಪೊಲೀಸರ ಮುಕ್ತಾಯದ ವರದಿ ಸುಳ್ಳಿನಿಂದ ಕೂಡಿದೆ ಎಂದು ರೋಹಿತ್ ವೇಮುಲಾ ಅವರ ಕುಟುಂಬ ಆರೋಪಿಸಿದೆ. ಅಲ್ಲದೆ, ನಾವು ಈ ಮುಕ್ತಾಯ ವರದಿಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲಿದ್ದೇವೆ ಎಂದು ಹೇಳಿದ್ದಾರೆ.

ರೋಹಿತ್ ವೇಮುಲಾ ದಲಿತನಲ್ಲ. ಆತ ತನ್ನ ನಿಜವಾದ ಜಾತಿ ಬಹಿರಂಗವಾಗುತ್ತದೆ ಎಂಬ ಭೀತಿಯಿಂದ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಪ್ರತಿಪಾದಿಸಿ ಪೊಲೀಸರು ಪ್ರಕರಣದ ಮುಕ್ತಾಯ ವರದಿ ಸಲ್ಲಿಸಿದ್ದಾರೆ. ಸಾಕ್ಷ್ಯಾಧಾರದ ಕೊರತೆ ಉಲ್ಲೇಖಿಸಿ ಪೊಲೀಸರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

ಕೆಳ ನ್ಯಾಯಾಲಯದಲ್ಲಿ ‘ಪ್ರತಿಭಟನಾ ಅರ್ಜಿ’ ಸಲ್ಲಿಸಲು ತೆಲಂಗಾಣ ಉಚ್ಚ ನ್ಯಾಯಾಲಯ ಅವಕಾಶ ನೀಡಿದೆ. ‘‘ಮುಕ್ತಾಯ ವರದಿ’’ ‘‘ಸುಳ್ಳುಗಳಿಂದ ಕೂಡಿದೆ’’ ಎಂದು ವೇಮುಲಾ ಅವರ ಸಹೋದರ ರಾಜಾ ವೇಮುಲಾ ಅವರು ಪ್ರತಿಪಾದಿಸಿದ್ದಾರೆ. ಆತ್ಮಹತ್ಯೆಯ ಹಿಂದಿನ ಕಾರಣದ ಕುರಿತು ತನಿಖೆ ನಡೆಸುವ ಬದಲು ಪೊಲೀಸರು ರೋಹಿತ್ ವೇಮುಲಾ ದಲಿತ ಅಲ್ಲ ಎಂದು ಪ್ರಮಾಣೀಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರ ಆಗ್ರಹ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣದ ಕುರಿತ ತನಿಖೆಯನ್ನು ಮರು ಆರಂಭಿಸಲು ತೆಲಂಗಾಣ ಸರಕಾರ ನಿರ್ಧರಿಸಿದೆ.

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ತೆಲಂಗಾಣ ಪೊಲೀಸರು ಮರು ತನಿಖೆ ನಡೆಸಲಿದ್ದಾರೆ ಎಂದು ಡಿಜಿಪಿ ರವಿ ಗುಪ್ತಾ ಶುಕ್ರವಾರ ಸಂಜೆ ಹೇಳಿದ್ದಾರೆ.

‘‘ಪ್ರಕರಣದ ಕುರಿತ ಮರು ತನಿಖೆಗೆ ಅನುಮತಿ ಪಡೆಯಲು ದಂಡಾಧಿಕಾರಿಯವರಲ್ಲಿ ಮನವಿ ಮಾಡಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು’’ ಎಂದು ಡಿಜಿಪಿ ರವಿ ಗುಪ್ತಾ ಶುಕ್ರವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ವೇಮುಲಾ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರನ್ನು ಶನಿವಾರ ಭೇಟಿಯಾಗಿದ್ದಾರೆ. ಅಲ್ಲದೆ, ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ರೆಡ್ಡಿ ಅವರು ವೇಮುಲಾ ಅವರ ಆತ್ಮಹತ್ಯೆ ಪ್ರಕರಣದ ಕುರಿತಂತೆ ಮರು ತನಿಖೆ ನಡೆಸುವ ಹಾಗೂ ನ್ಯಾಯ ಒದಗಿಸುವ ಭರವಸೆಯನ್ನು ರಾಧಿಕಾ ವೇಮುಲಾ ಅವರಿಗೆ ನೀಡಿದ್ದಾರೆ ಎಂದು ಅಧಿಕೃತ ಪತ್ರಿಕಾ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News