ಡ್ಯಾನ್ಸರ್ ಗಳ ಮೇಲೆ ನೋಟು ಎಸೆದು 'ಕಜ್ರಾ ರೇ' ಎಂದು ಕುಣಿದ ಬಿಜೆಪಿ ನಾಯಕ !

Update: 2016-12-12 16:22 GMT

ಭೋಪಾಲ್, ಡಿ. 12 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಿಸಿ ತಿಂಗಳು ಒಂದು ಕಳೆದರೂ ಅದರಿಂದ ಉಂಟಾಗಿರುವ ನೋಟು ಕೊರತೆಯ ಸಂಕಟದಿಂದ ಜನಸಾಮಾನ್ಯರು ಇನ್ನೂ ಸಂಕಷ್ಟದಲ್ಲೇ ಇದ್ದಾರೆ. ಬ್ಯಾಂಕ್ ಹಾಗು ಎಟಿಎಂ ಗಳೆದುರು ಜನರ ಸರತಿ ಸಾಲು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಆರಂಭದಲ್ಲಿ ನೋಟು ರದ್ದತಿಯ ಬಗ್ಗೆ ಉತ್ತಮ ನಿರೀಕ್ಷೆ ಇಟ್ಟುಕೊಂಡವರೂ ಈಗ ಅದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುವ ಪರಿಸ್ಥಿತಿ ಉಂಟಾಗಿದೆ. 


ಆದರೆ ಈ ನಡುವೆ ಬಿಜೆಪಿಯ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗು ಹಾಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗು ಮಹೇಶ್ ಶರ್ಮ ಅವರ ಮಕ್ಕಳ ಕೋಟ್ಯಂತರ ರೂ . ಖರ್ಚಿನ ಅದ್ದೂರಿ ವಿವಾಹ ಸಮಾರಂಭಗಳು ಯಾವುದೇ ವಿಘ್ನವಿಲ್ಲದೆ ನಡೆದವು. ಈಗ ಇನ್ನೊಂದು ಸುದ್ದಿ ಬಂದಿದೆ. ಮಧ್ಯ ಪ್ರದೇಶದ ಧರ್ ಜಿಲ್ಲೆಯ  ಬಿಜೆಪಿ ನಾಯಕ  ಅಲ್ಲಿನ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಲ್ಯಾಣ್ ಪಟೇಲ್ ಅವರು ಮದುವೆ ಸಮಾರಂಭವೊಂದರಲ್ಲಿ  ಮಹಿಳಾ ಡ್ಯಾನ್ಸರ್ ಗಳ ಜೊತೆ ಕುಣಿಯುತ್ತಾ ಇರುವ ವೀಡಿಯೊ ಬಹಿರಂಗವಾಗಿದೆ. ಅಷ್ಟೇ ಅಲ್ಲ , ಈ ನಾಯಕ ಮಹಾಶಯ ಡ್ಯಾನ್ಸರ್ ಗಳ ಮೇಲೆ ನಿಷೇಧಿತ ನೋಟುಗಳನ್ನು ಎಸೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. 


ಡಿಸೇಂಬರ್ 9  ರಂದು ಈ ಘಟನೆ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಬಿಳಿ ಅಂಗಿ, ನೀಲಿ ಜೀನ್ಸ್ ಹಾಕಿಕೊಂಡಿರುವ ಈ ಬಿಜೆಪಿ ನಾಯಕ ಬಾಲಿವುಡ್ ಹಿಟ್ ಹಾಡು ' ಕಜ್ರಾ ರೇ' ಹಾಡಿಗೆ ಹೆಜ್ಜೆ ಹಾಕುತ್ತಿರುವುದು ರೆಕಾರ್ಡ್ ಆಗಿದೆ. ರೆಕಾರ್ಡ್ ಆಗುತ್ತಿರುವುದು ತಿಳಿದ ಕೂಡಲೇ ಅದನ್ನು ನಿಲ್ಲಿಸಲು ಹೇಳಿದ ಈ ನಾಯಕ ಬಳಿಕ ಡ್ಯಾನ್ಸರ್ ಗಳ ಮೇಲೆ ನೋಟುಗಳನ್ನು ಎಸೆದಿದ್ದಾನೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News