ಕುರ್‌ಆನ್ ಸುಟ್ಟ ಪ್ರಕರಣ

Update: 2016-12-12 17:18 GMT

ಮಡಿಕೇರಿ, ಡಿ.12 : ಐಗೂರು ಮಸೀದಿಯಲ್ಲಿ ಕುರ್‌ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ಧರಣೇಶ್ ಆರೆಸ್ಸೆಸ್ ಕಾರ್ಯಕರ್ತ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಿ.ಎಲ್‌ವಿಶ್ವ ಸ್ಪಷ್ಟಪಡಿಸಿದ್ದಾರೆ.


 ನಗರದಲ್ಲಿ ಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಅವರ ಆರೋಪವನ್ನು ಖಂಡಿಸಿದ ಅವರು, ಮಲೆಯಾಳಿ ಸಮಾಜದ ಹೆಸರಿನಲ್ಲಿ ಜನಾಂಗದ ಏಳಿಗೆಗಾಗಿ ಕಾರ್ಯನಿರ್ವಹಿಸಬೇಕೇ ಹೊರತು, ಇತರ ರಾಜಕೀಯ ಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.


ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲೆಯ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದ ವಿಶ್ವ, ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಕೆಡಿಪಿ ಸಭೆೆಗೆ ಶಾಸಕರು, ಬಿಜೆಪಿಯ ಪ್ರತಿನಿಧಿಗಳು ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕಿನಲ್ಲಿ ಮೂವರು ರೈತರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ರೀತಿಯ ಅನೇಕ ಸಮಸ್ಯೆಗಳು ಜಿಲ್ಲೆಯಲ್ಲಿದ್ದು, ಇದರ ಪರಿಹಾರಕ್ಕಾಗಿ ಕೆಡಿಪಿ ಸಭೆೆಯಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಗೈರು ಹಾಜರಾಗುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡಲಾಗಿದೆ ಎಂದು ಆರೋಪಿಸಿದರು. ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಬಿ.ಎ. ಜೀವಿಜಯ ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಸದ್ಯದಲ್ಲೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.


     ಜೀವಿಜಯ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ
  ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕೊಡಗಿನ ಮಡಿಕೆೇರಿ ಕ್ಷೇತ್ರದಿಂದ ಜಾತ್ಯತೀತ ನಿಲುವಿನ ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಜಾತ್ಯತೀತ ಜನತಾ ದಳ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಸಿ.ಎಲ್. ವಿಶ್ವ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಐಗೂರು ಗ್ರಾಪಂ ಸದಸ್ಯ ಚಂಗಪ್ಪ, ಪಕ್ಷದ ಮಡಿಕೇರಿ ತಾಲೂಕು ಅಧ್ಯಕ್ಷರಾದ ಡಾ. ಮನೋಜ್ ಬೋಪಯ್ಯ, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಪಕ್ಷದ ವಕ್ತಾರ ಎ.ಜೆ. ಕೃಷ್ಣಪ್ಪ, ಐಗೂರು ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಹಾಗೂ ಪ್ರಮುಖರಾದ ಶಿವದಾಸ್ ಹಾಗೂ ಕ್ರಿಸ್ಟೋಫರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News