ಕಾಂಗ್ರೆಸ್ ಸರಕಾರದಿಂದ ಅಂಬೇಡ್ಕರ್‌ಗೆ ಅಪಮಾನ: ಬಿ.ಎಸ್. ಯಡಿಯೂರಪ್ಪ

Update: 2016-12-13 13:25 GMT

ಹಾಸನ , ಡಿ.13 :  ಕಾಂಗ್ರೆಸ್ ಸರಕಾರದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಗೆ ಅವಮಾನ  ಆಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
     ನಗರದ ಕೆ.ಆರ್. ಪುರಂನಲ್ಲಿರುವ ಬಿಜೆಪಿ ಕಛೇರಿಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷರಾಗಿದ್ದ ಬಿ.ಸಿ. ರಾಜೇಶ್ ಹಾಗೂ ಇತರರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವನ್ನು ಎಳೆ ಎಳೆಯಾಗಿ ಜನತೆಗೆ ತಿಳಿಸಲಾಗುವುದು. ಇಂದು ಕಾಂಗ್ರೆಸ್ ಸರಕಾರ ಜನರ ಪಾಲಿಗತೆ ಬದುಕಿದ್ದರೂ ಸತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸ್ಪಂದಿಸದೆ, ನೀರಾವರಿಗೆ ಗಮನ ನೀಡದೆ, ರೈತರ ಸಾಲಮನ್ನಾ ಯಾವ ಅಭಿವೃದ್ಧಿ ಕೆಲಸ ಮಾಡದೆ, ಇಲ್ಲಿನ ಸಮಸ್ಯೆ ಬಗೆಹರಿಸುವುದಾಗಿ  ಕೇಂದ್ರದಿಂದ 50 ಭಾಗ ಅನುದಾನವನ್ನು ಕೇಳಿದೆ. ರೈತರ ಬಗ್ಗೆ ಅನುಕಂಪ ಇದ್ದರೇ ರೈತರ ಎಲ್ಲಾ ಸಾಲ ಮನ್ನಾ ಮಾಡಲಿ ಎಂದು ಕಿವಿಮಾತು ಹೇಳಿದರು.

ರಾಜ್ಯ ಸರಕಾರದಲ್ಲಿರುವ ಖಜಾನೆಯ ಹಣ ಎಲ್ಲಾ ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಹಾಸನ ಜಿಲ್ಲೆ ಎಂದರೇ ಇತರೆ ಜಿಲ್ಲೆಗಿಂತ ಹಿನ್ನಡೆಯಾಗಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಯಾವ ಗುಂಪುಗಾರಿಕೆ ಮಾಡದೆ ಯಾರೇ ಅಭ್ಯರ್ಥಿಯಾದರೂ ನಾನೇ ಅಭ್ಯರ್ಥಿ ಎಂದು ಶ್ರಮಿಸಬೇಕು. ಚುನಾವಣೆ 6 ತಿಂಗಳು ಇರುವಂತೆ ಸರ್ವೆ ಮಾಡಿಸಿ ಯಾರು ಜನ ಮನ್ನಣೆ ಪಡೆದಿರುತ್ತಾರೆ ಅವರಿಗೆ ಆದ್ಯತೆ ನೀಡಲಾಗುವುದು ಎಂದರು. ಪಕ್ಷದ ಗೆಲುವಿಗೆ ಎಲ್ಲಾರು ಸ್ವಯಂ ಘೋಷಿತವಾಗಿ ಪಕ್ಷ ಸಂಘಟಿಸುವಂತೆ ಕರೆ ನೀಡಿದರು.

     ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಮಾತನಾಡಿ, ಬಿಎಸ್‌ಪಿ ಪಾರ್ಟಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಹಲವು ವರ್ಷ ದುಡಿದ ಬಿ.ಸಿ. ರಾಜೇಶ್ ವರು ಬಿಜೆಪಿ ಪಕ್ಷದ ಕಾರ್ಯವೈಕರಿಯನ್ನು ಹಾಗೂ ಪರಿಶಿಷ್ಟ ಜಾತಿ ಬಗ್ಗೆ ಇರುವ ಕಾಳಜಿ ಮೆಚ್ಚಿ ನಮ್ಮ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇಂತಹ ಸೇರ್ಪಡೆಯು ರಾಜ್ಯದಲ್ಲಿ ಒಂದು ಬದಲಾವಣೆ ಆಗಲಿದೆ ಎಂದು ಹೇಳಿದರು.

ಕಾಂಗ್ರೆಸರು ಸಂವಿಧಾನ ನೀಡಿದ ಅಂಬೇಡ್ಕರನ್ನು ಸೋಲಿಸಿದ್ದಾರೆ. ಜೊತೆಗೆ ಅವರು ಮೃತಗೊಂಡ ಮೇಲೆ ಅವರ ದೇಹವನ್ನು ಸಮಾಧಿ ಮಾಡಲು ದೆಹಲಿಯಲ್ಲಿ ಅವಕಾಶ ಕೊಡದೆ ಅಡ್ಡಿಪಡಿಸಿದರು. ಕಾಂಗ್ರೆಸ್ ಮುಖಂಡರೆಲ್ಲರನ್ನು ಇಲ್ಲಿ ಸಮಾಧಿ ಮಾಡಲು ಅವಕಾಶ ನೀಡುತ್ತಾರೆ. ಆದರೇ ಇವರಿಗೆ ಏತಕ್ಕಾಗಿ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದರು. ಸಂವಿಧಾನ ಬರೆದ 5 ಸ್ಥಳವನ್ನು ಪಂಚತೀರ್ಥ ಆಗಬೇಕೆಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ದಲಿತರ ವರ್ಗಕ್ಕೆ ಧ್ವನಿ ಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
     ದಲಿತರ ಪರವಾಗಿ ಇದ್ದೇನೆ ಹಾಗೂ ಅಹಿಂದ ಹೆಸರಿನಲ್ಲಿಯೇ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಈಗ ಅದರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಬರ ಕಾಮಗಾರಿ ಕೆಲಸ ಮಾಡದೆ ಕೇವಲ ಭ್ರಷ್ಟಚಾರಕ್ಕೆ ಅವಕಾಶ ನೀಡಿದ ಪರಿಣಾಮ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮಿಲಾಗಿ ಅನೇಕ ಕಾಂಗ್ರೆಸ್ ಶಾಸಕರು, ಸಚಿವರು ಸಿಕ್ಕಿ ಬೀಳುತ್ತಿದ್ದಾರೆ. ಆಗ ತನ್ವೀರ್ ಶೇಟ್ ಈಗ ಹೆಚ್.ವೈ. ಮೇಟಿ ಸರದಿ ಬಂದಿದೆ ಎಂದು ವ್ಯಂಗ್ಯವಾಡಿದರು. ಸಚಿವರು ಮೊಬೈಲ್‌ನಲ್ಲಿ ಅಶ್ಲೀಲ ವಿಡೀಯೋ ನೋಡಿ ಟಿಪ್ಪು ಜಯಂತಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಹಲವಾರು ಸಚಿವರನ್ನು ಕಾಂಗ್ರೆಸ್ ಆಡಳಿತ ಇಟ್ಟುಕೊಂಡಿದೆ. ಕೂಡಲೇ ಇಂತಹ ಕಳಂಕಿತ ಸಚಿವರು ಮತ್ತು ಶಾಸಕರ ರಾಜೀನಾಮೆ ಹಿಂಪಡೆಯಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
     ಸಭೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಯೋಗಾರಮೇಶ್, ಮಾಜಿ ಅಧ್ಯಕ್ಷ ರೇಣುಕುಮಾರ್, ಬಸವರಾಜು, ಮಾಜಿ ಶಾಸಕ ಬಿ.ವಿ. ಕರೀಗೌಡ, ಮಹಾಂತಪ್ಪ, ಜಿಲ್ಲಾ ಮಾಧ್ಯಮ ವಕ್ತಾರ ವೇಣುಗೋಪಾಲ್, ಡಿ.ವೈ. ಗೋಪಾಲ್, ಕಟ್ಟಾಯ ಶಿವಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎನ್. ನಾಗೇಶ್, ಮಲ್ಲಿಗೆವಾಳ್ ದೇವಪ್ಪ, ಪ್ರೀತಮ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News