ಪ್ರಧಾನಿಗೆ ಇತಿಹಾಸ ಗೊತ್ತಿಲ್ಲ. ಅವರ ಪಕ್ಷದವರು ದೇಶದ ಸ್ವಾತಂತ್ರ್ಯ ಹೋರಾಟ ವಿರೋಧಿಸಿದವರು : ಕಪಿಲ್ ಸಿಬಲ್

Update: 2016-12-17 04:00 GMT

ಹೊಸದಿಲ್ಲಿ, ಡಿ.17: ಅಧಿಕ ಮೌಲ್ಯದ ನೋಟುಗಳ ಅಮಾನ್ಯ ನಿರ್ಧಾರವನ್ನು ವಿರೋಧಿಸಿದ ಕಾಂಗ್ರೆಸ್ ಹಾಗೂ ಎಡಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಉಭಯ ಪಕ್ಷಗಳು ಮೋದಿ ವಿರುದ್ಧ ವಾಗ್ದಾಳಿ ನಡೆಸಿವೆ. ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ಪಕ್ಷವೇ ಮುಖ್ಯ ಎಂದು ಪ್ರಧಾನಿ ಟೀಕಿಸಿದ್ದರು. ಜತೆಗೆ ನೋಟು ಅಮಾನ್ಯ ಸಲಹೆಯನ್ನು ಇಂದಿರಾ ಗಾಂಧಿ ವಿರೋಧಿಸಿದ್ದರು ಎಂದು ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಲ್ ಅವರು, "ಸಮಸ್ಯೆ ಎಂದರೆ ನಮ್ಮ ಪ್ರಧಾನಿಗೆ ಇತಿಹಾಸದ ಅರಿವೂ ಇಲ್ಲ. ಅದನ್ನು ತಿಳಿದುಕೊಳ್ಳಲು ಅವರು ಪ್ರಯತ್ನವನ್ನೂ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ, ತಮ್ಮ ಪಕ್ಷದವರು ಏನು ಮಾಡುತ್ತಿದ್ದರು ಎನ್ನುವುದನ್ನು ಮೋದಿ ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಚಳವಳಿಗೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಪಕ್ಷ ಅವರಿಗೆ ದೇಶಕ್ಕಿಂತ ಮುಖ್ಯವಾಗಿತ್ತು" ಎಂದು ಟೀಕಿಸಿದರು.

ಸ್ವಾತಂತ್ರ್ಯಕ್ಕೆ ಮುನ್ನ 500 ಹಾಗೂ 1000 ರೂಪಾಯಿ ನೋಟು ಅಮಾನ್ಯಗೊಳಿಸಿದ ಕ್ರಮದ ಬಗ್ಗೆ ಡಾ.ರಾಜೇಂದ್ರ ಪ್ರಸಾದ್ ಮಾಡಿದ ಟೀಕೆಯನ್ನು ಸಿಬಲ್ ಉಲ್ಲೇಖಿಸಿದರು. ಇದರಿಂದ ಮಧ್ಯಮವರ್ಗ ಹಾಗೂ ಕೆಳವರ್ಗದವರಿಗೆ ತೊಂದರೆಯಾಗುತ್ತದೆ. ಲಾಭಕೋರರ ಬಗ್ಗೆ ಅಥವಾ ಕಾಳಧನಿಕರ ಬಗ್ಗೆ ಕಾಂಗ್ರೆಸ್‌ಗೆ ಕರುಣೆ ಇಲ್ಲ. ಆದರೆ ಈ ಹೆಸರಿನಲ್ಲಿ ಪ್ರಾಮಾಣಿಕರನ್ನು ಶಿಕ್ಷಿಸುವ ಹಕ್ಕು ಇಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ನೆನಪಿಸಿಕೊಂಡರು. ರಾಜೇಂದ್ರ ಪ್ರಸಾದ್ ಅವರನ್ನೂ ದೇಶವಿರೋಧಿ ಹಾಗೂ ಹಗರಣಗಳಿಗೆ ಬೆಂಬಲ ನೀಡುವವರು ಎಂದು ಮೋದಿ ಪರಿಗಣಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಭಾರತವನ್ನು ನಗದುರಹಿತ ದೇಶವಾಗಿ ಮಾರ್ಪಡಿಸಲು ಕೇಂದ್ರ ಹೊರಟಿದೆ. ಈ ಮೂಲಕ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಇ-ಕಾಮರ್ಸ್ ಕಂಪನಿಗಳು ದೇಶವನ್ನು ನಿಯಂತ್ರಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News