​ಡಿಪೋ ಜಾಗ ಕುರಿತು ಯಡಿಯೂರಪ್ಪ ಹೇಳಿದ್ದೇ ಅಂತಿಮವಲ್ಲ: ಶ್ರೀನಿವಾಸ್

Update: 2016-12-25 17:37 GMT

ಶಿವಮೊಗ್ಗ, ಡಿ. 25: ಶಿವಮೊಗ್ಗ ನಗರದ ಹೊರವಲಯ ಸಂತೆಕಡೂರು ಗ್ರಾಮದಲ್ಲಿ ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣಕ್ಕೆ ಮೀಸಲಿರಿಸಿರುವ ಸುಮಾರು 8 ಎಕರೆ ಜಾಗವನ್ನು ಶಿಕ್ಷಣ ಉದ್ದೇಶಕ್ಕೆ ಮೀಸಲಿರಿಸಿ, ಡಿಪೋಗೆ ಬೇರೆಡೆ ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪಸೂಚನೆ ನೀಡಿರುವುದು ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಯಡಿಯೂರಪ್ಪಸೂಚನೆಗೆ ಕೆಲ ನಾಗರಿಕ ಪರ ಸಂಘಟನೆಗಳು ಈಗಾಗಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿ, 
್ರತಿಭಟನೆ ನಡೆಸುವ ಎಚ್ಚರಿಕೆ ನೀಡಿವೆ. ಈ ನಡುವೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ರವರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಡಿಯೂರಪ್ಪಹೇಳಿದ್ದೇ ಅಂತಿಮವಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಪಕ್ಷ ತನ್ನ ಸ್ಪಷ್ಟ ನಿರ್ಧಾರ ತಿಳಿಸಲಿದೆ ಎಂದು ಹೇಳಿದ್ದಾರೆ. ರವಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣಕ್ಕೆ ಜಿಲ್ಲಾಡಳಿತ ಸಂತೆಕಡೂರು ಗ್ರಾಮದಲ್ಲಿ ಈಗಾಗಲೇ ಜಾಗ ಗುರುತಿಸಿದೆ. ಈ ಜಾಗದಲ್ಲಿ ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣ ಬೇಡವೆಂದು ಯಡಿಯೂರಪ್ಪನರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಗಾದರೆ ನಗರ ವ್ಯಾಪ್ತಿಯಲ್ಲಿ ಡಿಪೋ ನಿರ್ಮಾಣಕ್ಕೆ ಅಗತ್ಯ ಜಾಗ ಲಭ್ಯವಿದೆಯೇ? ಈಗಾಗಲೇ ಜಾಗ ಗುರುತಿಸಲಾಗಿದೆಯೇ? ಇದಕ್ಕೆ ನಾಗರಿಕ ವಲಯದ ಅಭಿಪ್ರಾಯವೇನು?’ ಎಂಬ ಇತ್ಯಾದಿ ಪ್ರಶ್ನೆಗಳಿಗೆ ಇನ್ನಷೇ ಸ್ಪಷ್ಟ ಉತ್ತರ ಲಭ್ಯವಾಗಬೇಕಾಗಿದೆ ಎಂದು ತೀ.ನಾ.ಶ್ರೀನಿವಾಸ್ ತಿಳಿಸಿದ್ದಾರೆ. ಸ್ಪಷ್ಟ ನಿರ್ಧಾರ: ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ರವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ತದನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ವಿಷಯದಲ್ಲಿ ನಾಗರಿಕರಿಗೆ ಅನನುಕೂಲವಾಗುವ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದಿಲ್ಲ. ಯಡಿಯೂರಪ್ಪರವರು ಏನೇ ಹೇಳಿಕೊಳ್ಳಲಿ. ಅವರು ಹೇಳಿದ ಕೂಡಲೇ ಎಲ್ಲವೂ ಅಂತಿಮವಾಗುವುದಿಲ್ಲ ಎಂದು ಹೇಳಿದ್ದಾರೆ.


ಬೇರೆಡೆ ಜಾಗ ಗುರುತಿಸಲು ಸೂಚಿಸಿದ್ದರು...
ಸರಕಾರಿ ಸಿಟಿ ಬಸ್ ನಿರ್ಮಾಣದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅಧಿಕಾರಿಗಳು ಬಿ.ಎಸ್.ವೈ. ಗಮನಕ್ಕೆ ತಂದಿದ್ದರು. ಆದರೆ ಇದನ್ನು ಒಪ್ಪದ ಬಿ.ಎಸ್.ವೈ.ರವರು ಈ ಸ್ಥಳದಲ್ಲಿ ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣ ಬೇಡ ಎಂದು ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಿದ್ದರು. ಬಿ.ಎಸ್.ವೈ.ರವರ ಈ ಹೇಳಿಕೆಗೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬಿ.ಎಸ್.ವೈ.ರವರು ಖಾಸಗಿ ಬಸ್ ಮಾಲಕರ ಪರವಾಗಿ ಲಾಬಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿಯೇ ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗ ರದ್ದತಿಗೆ ಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್‌ರವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News