ಸೊರಬದಲ್ಲಿ ಮದ್ಯವರ್ಜನ ಶಿಬಿರ

Update: 2016-12-26 08:08 GMT

ಸೊರಬ, ಡಿ.26: ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯ ಎಂದು ಮದ್ಯವರ್ಜನ ಸಮಿತಿಯ ಅಧ್ಯಕ್ಷ ಪಾಣಿ ರಾಜಪ್ಪಹೇಳಿದ್ದಾರೆ.

ಪಟ್ಟಣದ ಗುರುಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಸಮಿತಿ ಹಾಗೂ ಪ್ರಗತಿ ಬಂಧು ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ರವಿವಾರ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದುಷ್ಚಟಗಳಿಗೆ ಬಲಿ ಬೀಳುವ ಪುರುಷರು ತಾವು ನಿರ್ವಹಿಸುವ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ಇದರಿಂದ ಮಹಿಳೆ ಕುಟುಂಬ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗುತ್ತಿರುವುದು ವಿಷಾದನೀಯ ಎಂದ ಅವರು, ಶಿಬರದಲ್ಲಿ ತಿಳಿಸಿದ ಸಲಹೆ,ಸಹಕಾರ ರೂಢಿಸಿಕೊಂಡರೆ ನಿಮ್ಮಲ್ಲಿ ಮನ ಪರಿವರ್ತನೆ ಹೊಂದಿ ಆತ್ಮ ವಿಶ್ವಾಸ ಮೂಡುತ್ತದೆ. ನಿಮ್ಮಲ್ಲಿನ ಕೀಳರಿಮೆ ಕಡಿಮೆಯಾಗಿ ಸಮಾಜದ ಮುಖ್ಯ ವಾಹಿನಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಸಾಧ್ಯ ಎಂದು ಮದ್ಯವ್ಯಸನಿಗಳಿಗೆ ಸಲಹೆ ನೀಡಿದರು.
 
 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಕೆ.ರಮೇಶ್ ಮಾತನಾಡಿ, ಸರಕಾರ ಮದ್ಯಪಾನ ಸಂಯಮ ಮಂಡಳಿಯನ್ನು ಜಾರಿಗೊಳಿಸಿದ್ದರೂ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮುಕ್ತವಾಗಿ ಮದ್ಯಪಾನಕ್ಕೆ ದಾರಿ ಮಾಡಿದಂತಾಗಿದೆ. ಸರಕಾ ಲಾಭದ ದೃಷ್ಟಿಯಿಂದ ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಿಗೆ ಕೊಡಬಾರದು. ಯಾವುದೇ ಪರವಾನಿಗೆ ಇಲ್ಲದೆ ಅಣಬೆಗಳಂತೆ ತಲೆ ಎತ್ತಿರುವ ಮದ್ಯದಂಗಡಿಗಳಿಗೆ ಕಡಿವಾಣ ಹಾಕಬೇಕು. ಇದರಿಂದ ಗ್ರಾಮೀಣ ಜನರನ್ನು ಬಲವರ್ಧನೆಗೊಳಿಸುವುದಕ್ಕೆ ಹಾಗೂ ಮಹಿಳೆಯರ ಶೋಷಣೆಯಿಂದ ತಡೆಯುವುದಕ್ಕೆ ಸಾಧ್ಯ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಶಿವಕುಮಾರ್, ಶಿಬಿರಾಧಿಕಾರಿಗಳಾದ ನಾಗೇಶ್, ನಾಗರಾಜ್, ದಿನಕರ್ ಭಟ್ ಭಾವೆ, ಕಾಳಿಂಗರಾಜ್, ಶಿಬಿರದ ಮೇಲ್ವಿಚಾರಕಿಯರಾದ ನೇತ್ರಾವತಿ, ಜಯಲಕ್ಷ್ಮೀ, ಸರಸ್ವತಿ ನಾವುಡ, ಪ್ರಕಾಶ್, ಸುಷ್ಮಾ, ಉಷಾ, ಮಾಲತೇಶ್ ಲೀಲಾವತಿ ಮತ್ತಿತರರು ಹಾಜರಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News