ಡಾಕ್ಟರ್ ಪದವಿಗೆ ಕೇವಲ ಎಂಬಿಬಿಎಸ್ ಸಾಲದು

Update: 2016-12-30 18:41 GMT

ಮುಂಬೈ, ಡಿ.30: ಡಾಕ್ಟರ್ ಪದವಿಗೆ ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ಎಂಬಿಬಿಎಸ್ ಕೋರ್ಸ್ ಮುಗಿಸಿದರಷ್ಟೇ ಸಾಲದು. ಗುರುವಾರದಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಕರಡು ಮೆಡಿಕಲ್ ಕೌನ್ಸಿಲ್ (ತಿದ್ದುಪಡಿ) ಕಾಯ್ದೆ-2016ರ ಅನ್ವಯ ವಿದ್ಯಾರ್ಥಿಗಳು ವೈದ್ಯ ಪದವಿ ಪಡೆಯಲು ನ್ಯಾಶನಲ್ ಎಕ್ಸಿಟ್ ಟೆಸ್ಟ್ ಪರೀಕ್ಷೆಯಲ್ಲೂ ತೇರ್ಗಡೆಯಾಗಬೇಕು. ಬಹುತೇಕ ಖಾಸಗೀಕರಣಗೊಂಡಿರುವ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಸ್ವಲ್ಪಮಟ್ಟಿನ ಸಮಾನತೆ ಸಾಧಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

    
 ಕೇಂದ್ರ ಸರಕಾರದ ಅಧಿಕಾರಿಯೊಬ್ಬರ ಪ್ರಕಾರ ಈ ನ್ಯಾಶನಲ್ ಎಕ್ಸಿಟ್ ಟೆಸ್ಟ್ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ವೈದ್ಯಕೀಯ ಸ್ನಾತಕೋತ್ತರ ಪ್ರವೇಶಾತಿಗೆ ನಡೆಯುವ ನೀಟ್. ಕೇಂದ್ರ ಆರೋಗ್ಯ ಸೇವೆಗಳಿಗೆ ನೇಮಕಾತಿಗಾಗಿ ಹಾಗೂ ವಿದೇಶಿ ವೈದ್ಯಕೀಯ ಪದವಿ ಪಡೆಯುವ ಸಲುವಾಗಿ ನಡೆಯುವ ಪರೀಕ್ಷೆಗಳಿಗೆ ಹೊಸ ಪರೀಕ್ಷೆ ಪರ್ಯಾಯವಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
 

 ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನಿರ್ವಹಣೆಯನ್ನು ಸಾರ್ವಜನಿಕರ ಮುಂದಿಡಲಾಗುವುದು. ಒಂದು ಸಂಸ್ಥೆಯ ಶೇ. 90ರಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾದಲ್ಲಿ ಅದು ಆ ಸಂಸ್ಥೆಯ ಶಿಕ್ಷಣದ ಗುಣಮಟ್ಟದ ದ್ಯೋತಕವಾಗುವುದಲ್ಲದೆ ವೈದ್ಯಕೀಯ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ ತಮಗೆ ಬೇಕಾಗುವ ಕಾಲೇಜನ್ನು ಆಯ್ದುಕೊಳ್ಳಲು ಸಹಕಾರಿಯಾಗಲಿದೆ.
   ಹಲವರು ಸರಕಾರದ ಈ ಯೋಜನೆಯನ್ನು ಸ್ವಾಗತಿಸಿದ್ದಾರಾದರೂ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಸದಸ್ಯ ಹಾಗೂ ಖ್ಯಾತ ಹೃದ್ರೋಗ ತಜ್ಞರೂ ಆದ ಡಾ. ದೇವಿಪ್ರಸಾದ್ ಶೆಟ್ಟಿ ಹೇಳುವಂತೆ ಇಂತಹ ಒಂದು ಪದ್ಧತಿ ಈಗಾಗಲೇ ಹೆಚ್ಚು ವೈದ್ಯರು ಇರುವ ದೇಶಗಳಿಗೆ ಸೂಕ್ತವಾಗಿದೆ.
‘‘ಸರಕಾರ ಮೆಡಿಕಲ್ ಕೌನ್ಸಿಲ್ ಕಾಯ್ದೆಯಲ್ಲಿ ಅಲ್ಪ ತಿದ್ದುಪಡಿ ತಂದು ಪ್ರಯೋಜನವಿಲ್ಲ. ಮಸೂದೆಯನ್ನು ಸಂಸತ್ ಅಂಗೀಕರಿಸಿರುವಾಗ ಸಂಪೂರ್ಣ ಮಸೂದೆಯನ್ನು ಸರಕಾರವೇಕೆ ಪ್ರಸ್ತುತಪಡಿಸುತ್ತಿಲ್ಲ?’’ ಎಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದರ ಇನ್ನೊಬ್ಬ ಮಾಜಿ ಸದಸ್ಯ ಡಾ. ಗೌತಮ್ ಸೇನ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News