ಆಸ್ಪತ್ರೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ

Update: 2017-01-01 04:40 GMT

ಮಲ್ಲಪುರಂ, ಜ.1: ಆಘಾತಕಾರಿ ಪ್ರಕರಣವೊಂದರಲ್ಲಿ ದಲಿತ ಮಹಿಳೆಯೊಬ್ಬರು ಕೇರಳದ ಮಲ್ಲಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿರುವುದು ವರದಿಯಾಗಿದೆ. ಗಂಭೀರ ಹೆರಿಗೆ ನೋವು ಇದೆ ಎಂದು ಪದೇ ಪದೇ ಹೇಳುತ್ತಿದ್ದರೂ ನಿರ್ಲಕ್ಷಿಸಿದ ಆಸ್ಪತ್ರೆಯ ದಾದಿ, ಗರ್ಭಿಣಿಯನ್ನು ದಾಖಲಿಸಿಕೊಳ್ಳದೆ ಇರುವುದು ದೇಶದ ವೈದ್ಯಕೀಯ ಸೌಲಭ್ಯದ ದುರಂತ ಚಿತ್ರಣವನ್ನು ಮುಂದಿಟ್ಟಿದೆ.

ಮಹಿಳೆಯ ಆಪ್ತ ಸಂಬಂಧಿಕರು ಹೇಳಿರುವ ಪ್ರಕಾರ, ಮಂಜೇರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಯು ರೋಗಿಗಳ ಬಗ್ಗೆ ತೀವ್ರ ನಿರ್ಲಕ್ಷ ತೋರುತ್ತಾರೆ. ಗಂಭೀರ ಹೆರಿಗೆ ನೋವು ಇದೆಯೆಂದು ಮಹಿಳೆ ಹೇಳುತ್ತಿದ್ದರೂ ಅದರತ್ತ ಗಮನಹರಿಸದ ಆಸ್ಪತ್ರೆಯ ದಾದಿಯೊಬ್ಬಳು ನೋವು ಕಡಿಮೆಯಾಗಲು ಆಕೆಯನ್ನು ಮೂತ್ರ ವಿಸರ್ಜನೆಗೆಂದು ಶೌಚಾಲಯಕ್ಕೆ ಕಳುಹಿಸಿದ್ದಾಳೆ. ಮಹಿಳೆ ಶೌಚಾಲಯಕ್ಕೆ ಹೋಗಿ ಕುಳಿತುಕೊಳ್ಳಲೇ ಆಗದೆ ನೋವಿನಿಂದ ಕಿರುಚಾಡಿದ್ದನ್ನು ಕೇಳಿ ಉಳಿದವರು ನೆರವು ನೀಡಲೆಂದು ಉಳಿದವರು ಶೌಚಾಲಯದತ್ತ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಳು ಎಂದು ಸಂಬಂಧಿಕರು ನೋವು ತೋಡಿಕೊಂಡಿದ್ದಾರೆ. ಮಗು ಮತ್ತು ತಾಯಿಯನ್ನು ನಂತರ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ.

ಪ್ರಕರಣದ ಕುರಿತಂತೆ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವ ಕೆ.ಕೆ.ಶೈಲಜಾ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯಿಂದ ವರದಿ ಕೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ ಸಾಬೀತಾದರೆ ಕ್ರಮ ಕೈಗೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News