ಸ್ಯಾಟ್, ಆಕ್ಟ್ ಪರೀಕ್ಷೆಗಳಲ್ಲಿ 100 ಶೇ. ಸಾಧನೆಗೈದ ಮುಂಬೈ ಪೋರ!

Update: 2017-01-14 06:00 GMT

ಮುಂಬೈ, ಜ.14: ಈ ಅದ್ಭುತ ಪ್ರತಿಭೆಯ ಕನಸು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುವುದು. ಧೀರೂಭಾಯ್ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಅನಘ್ ಅಗರ್‌ವಾಲ್ ಕನಸು ನನಸಾಗಿರುವುದು ಮಾತ್ರವಲ್ಲ; ಈಗ ಇಡೀ ದೇಶವೇ ಹೆಮ್ಮೆಪಡುವಂಥ ಸಾಧನೆ ಮಾಡಿದ್ದಾನೆ.

ಹಾರ್ವರ್ಡ್‌ಗೆ ಪ್ರವೇಶ ಪಡೆಯಬೇಕಾದರೆ ಎಸ್‌ಎಟಿ ಅಥವಾ ಎಸಿಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದು ಎಲ್ಲ ಅಮೆರಿಕನ್ ಕಾಲೇಜು ಪ್ರವೇಶಕ್ಕೂ ಅನ್ವಯಿಸುತ್ತದೆ. ಆದರೆ ಈ 16ರ ಯುವಕ ಉತ್ತೀರ್ಣರಾಗಿರುವುದು ಮಾತ್ರವಲ್ಲದೇ, ಅದಕ್ಕೂ ಮೀರಿದ ಸಾಧನೆ ಮಾಡಿದ್ದಾನೆ. ಈ ಅದ್ಭುತ ಸಾಧನೆ ಎಲ್ಲರನ್ನೂ ದಂಗುಪಡಿಸುವಂಥದ್ದು. ಹೊಸ ವಿಧಾನದ ಎಸ್‌ಎಟಿ ಪರೀಕ್ಷೆಯಲ್ಲಿ ಅನಘ್ 1600ರಲ್ಲಿ 1600 ಅಂಕ ಪಡೆದಿದ್ದಾನೆ. ಅಮೆರಿಕನ್ ಕಾಲೇಜು ಟೆಸ್ಟಿಂಗ್ (ಎಸಿಟಿ)ನಲ್ಲಿ 36ಕ್ಕೆ 36 ಅಂಕ ಪಡೆದಿದ್ದಾನೆ.

"ಬಹುತೇಕ ಮಕ್ಕಳು ಯಾವುದಾದರೂ ಒಂದು ಪರೀಕ್ಷೆ ತೆಗೆದುಕೊಳ್ಳುತ್ತಾರೆ. ವೈಯಕ್ತಿಕವಾಗಿ ನಾನು ಸವಾಲಾಗಿ ಎರಡೂ ಪರೀಕ್ಷೆ ತೆಗೆದುಕೊಂಡೆ. ವಾಸ್ತವವಾಗಿ ಎಸ್‌ಎಟಿ ಪರೀಕ್ಷೆ ಬರೆಯುವುದು ನನ್ನ ಆದ್ಯತೆಯಾಗಿತ್ತು. ಐದು ತಿಂಗಳಿಂದ ಇದಕ್ಕೆ ಸಿದ್ಧತೆ ಮಾಡಿಕೊಂಡೆ. ಕೊನೆಕ್ಷಣದಲ್ಲಿ ಎಸಿಟಿ ಪರೀಕ್ಷೆ ಬರೆಯುವ ನಿರ್ಧಾರವನ್ನೂ ಕೈಗೊಂಡೆ" ಎಂದು ಸಾಧನೆಯ ಹಾದಿಯನ್ನು ಅನಘ್ ತೆರೆದಿಟ್ಟ.

ಹೂಡಿಕೆ ಬ್ಯಾಂಕಿಂಗ್ ವಿಷಯದಲ್ಲಿ ಅಧ್ಯಯನ ಮಾಡುವುದು ಈತನ ಗುರಿ. ಬಳಿಕ ಭಾರತಕ್ಕೆ ಬಂದು ರಾಜಕೀಯಕ್ಕೆ ಧುಮುಕಿ ಹಣಕಾಸು ಸಚಿವನಾಗುವುದು ಉದ್ದೇಶ ಎಂದು ಕನಸು ಬಿಚ್ಚಿಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News