ಸ್ಮೃತಿ ಇರಾನಿ ಶೈಕ್ಷಣಿಕ ದಾಖಲೆ ಬಹಿರಂಗಕ್ಕೆ ಸಿಐಸಿ ಆದೇಶ

Update: 2017-01-18 05:19 GMT

ಹೊಸದಿಲ್ಲಿ, ಜ.18: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ದಾಖಲೆ ಬಹಿರಂಗಕ್ಕೆ ದಿಲ್ಲಿ ವಿವಿಗೆ ಸೂಚನೆ ನೀಡುವ ಮೂಲಕ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದ್ದ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ 10 ಮತ್ತು 12ನೆ ತರಗತಿಯ ಶೈಕ್ಷಣಿಕ ದಾಖಲೆ ಬಹಿರಂಗಗೊಳಿಸುವಂತೆ ಸಿಬಿಎಸ್‌ಇಗೆ ಸೂಚಿಸಿದ್ದಾರೆ.

ಅದು ವೈಯಕ್ತಿಕ ಮಾಹಿತಿ ಎಂಬ ಸಿಬಿಎಸ್‌ಇ ವಾದವನ್ನು ಕೇಂದ್ರ ಮಾಹಿತಿ ಆಯೋಗ ತಳ್ಳಿಹಾಕಿದೆ. ಮೋದಿ ವಿರುದ್ಧ ತೀರ್ಪು ನೀಡಿದ ಬೆನ್ನಲ್ಲೇ ಆಚಾರ್ಯಲು ಅವರನ್ನು ಮಾನವ ಸಂಪನ್ಮೂಲ ಸಚಿವಾಲಯ ಪ್ರಕರಣಗಳ ವಿಭಾಗದಿಂದ ಎತ್ತಂಗಡಿ ಮಾಡಲಾಗಿತ್ತು.

ಶೈಕ್ಷಣಿಕ ಮಾಹಿತಿ ಬಹಿರಂಗಗೊಳಿಸುವುದರಿಂದ ಸ್ಮೃತಿ ಇರಾನಿಯವರ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎನ್ನುವುದಕ್ಕೆ ಸಿಪಿಐಒ ಯಾವ ಸಮರ್ಥನೆಯನ್ನೂ ನೀಡಿಲ್ಲ. ಫಲಿತಾಂಶ ಅಥವಾ ಪ್ರಮಾಣಪತ್ರದ ಅಂಶಗಳು, ಪಡೆದ ಶ್ರೇಣಿ, ವರ್ಷ ಹಾಗೂ ಸಂಖ್ಯೆ, ತಂದೆಯ ಹೆಸರು ಮತ್ತಿತರ ವಿವರಗಳನ್ನು ಖಾಸಗಿ ದಾಖಲೆ ಎಂದು ಪರಿಗಣಿಸುವಂತಿಲ್ಲ ಎಂದು ಸಿಐಸಿ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಇರಾನಿ ಅಧ್ಯಯನ ಮಾಡಿದ ಹೋಲಿ ಚೈಲ್ಡ್ ಅಲ್ಸಿಲಿಮ್ ಶಾಲೆಯು ಸ್ಮತಿಯವರ ನೋಂದಣಿ ಸಂಖ್ಯೆ ಅಥವಾ ಉಲ್ಲೇಖ ಸಂಖ್ಯೆಯನ್ನು ಸಿಬಿಎಸ್‌ಇಗೆ ನೀಡಬೇಕು. ಈ ಮೂಲಕ ಡಿಜಿಟಲೀಕರಿಸಿದ ದಾಖಲೆಗಳನ್ನು ಹುಡುಕಲು ನೆರವಾಗಬೇಕು ಎಂದು ಸಿಐಸಿ ಸೂಚಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇರಾನಿ, ಪದವಿ ಶೈಕ್ಷಣಿಕ ಅರ್ಹತೆಯನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಅವರ ಪದವಿ ಬಗ್ಗೆ ವಿವಾದ ಸೃಷ್ಟಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News