ಮಧ್ಯಮ ಮಾರ್ಗ: ತಂತ್ರ ಮತ್ತು ಪಲಾಯನ

Update: 2017-01-19 18:50 GMT

ವಿಮರ್ಶಕ ಗಿರಡ್ಡಿ ಗೋವಿಂದರಾಜರು ಈಚೆಗೆ ನಡೆದ ಮೂಡುಬಿದಿರೆಯ ನುಡಿಸಿರಿ ಸಮ್ಮೇಳನದಲ್ಲಿ ‘ಇಡೀ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗಿದೆ. ದೇಶಕ್ಕೆ ಮಾರಕವಾಗಿರುವ ಎಡ ಮತ್ತು ಬಲಪಂಥೀಯರ ಚಿಂತನೆಗಳು ಅಪಾಯ ತಂದೊಡ್ಡ್ಡುತ್ತಿವೆ. ಬಲಪಂಥೀಯಕ್ಕೆ ಸಡ್ಡುಹೊಡೆಯುವ ಭರದಲ್ಲಿ ಎಡಪಂಥೀಯವಾದ ಉಗ್ರರೂಪ ತಾಳುತ್ತಿದೆ’ ಎಂದು ಹೇಳುತ್ತಾ ‘ಎಡ ಮತ್ತು ಬಲಪಂಥೀಯ ವಿಚಾರಧಾರೆಗಳ ಮಧ್ಯೆ ...ಮಧ್ಯಮ ಮಾರ್ಗದ ಗುಂಪು ಹೆಚ್ಚು ಪ್ರಸ್ತುತವಾಗುತ್ತಿದೆ. ಎಡ ಮತ್ತು ಬಲಪಂಥೀಯ ವಿಚಾರಗಳನ್ನು ನಿಗ್ರಹಿಸುವ ಶಕ್ತಿ ಇರುವ ಮಧ್ಯಮಮಾರ್ಗದವರು ಮೈಕೊಡವಿ ನಿಲ್ಲಬೇಕು’ ಎಂದಿದ್ದರು. ಆದರೆ ಈ ಮಾತಿಗೆ ಬೇರೆ ಬೇರೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಾಡಿನ ಕೆಲವು ಖ್ಯಾತ ಚಿಂತಕರು, ಬರಹಗಾರರು ಪ್ರತಿಕ್ರಿಯಿಸಿದ ರೀತಿಯನ್ನು ಈಗ ಪುನರ್ಪರಿಶೀಲಿಸಬೇಕಾದ ಜರೂರಿದೆ.

ಜಾತೀಯತೆ, ಶ್ರೇಣೀಕರಣ, ಅಸ್ಪ ೃಶ್ಯತೆ, ಧರ್ಮದ ಹೆಸರಲ್ಲಿ ದಬ್ಬಾಳಿಕೆ, ಜನರ ಜಾತಿ ಮತ್ತು ಧರ್ಮಾಧಾರಿತ ವಿಭಜನೆ, ನಿರಂಕುಶ ನಿಲುವು ಮುಂತಾದವುಗಳನ್ನು ನಂಬಿ ಜಾರಿಗೆ ತರುವ ಚಿಂತನಾಕ್ರಮವು ಸಾವಿರಾರು ವರ್ಷಗಳ ಕಾಲ ಅಧಿಕಾರವನ್ನು ಆಕ್ರಮಿಸಿಕೊಂಡು ಅಮಾನವೀಯವಾಗಿ ವಿಜೃಂಭಿಸಿದ್ದೇ ಭಾರತದ ಚರಿತ್ರೆಯುದ್ದಕ್ಕೂ ಹೆಚ್ಚಾಗಿ ನಡೆದಿದೆ ಎಂಬುದಕ್ಕೆ ವರ್ತಮಾನದಲ್ಲೂ ಮುಂದುವರಿದಿರುವ ಸಮಾಜೋ-ಆರ್ಥಿಕ-ರಾಜಕೀಯ ವಿನ್ಯಾಸಗಳೇ ಖಚಿತವಾದ ಸಾಕ್ಷಿಗಳು. ಈ ಜನವಿರೋಧಿ ಮತ್ತು ಜೀವವಿರೋಧಿ ಸಂರಚನೆಗಳು ಸಂಸ್ಕೃತಿಯ ಮುಸುಕಿನಲ್ಲಿ ತಮ್ಮ ಯಜಮಾನಿಕೆಯ ಮುಂದುವರಿಕೆಗೆ ಬೇಕಾದ ಮಾನ್ಯತೆಯನ್ನು ಮತ್ತು ಮೌಲ್ಯವನ್ನು ಉತ್ಪಾದಿಸಿಕೊಂಡು ಬಂದಿವೆ; ಅಲ್ಲದೆ, ತಮಗಿಂತ ಅನ್ಯವಾದ ಆದರೆ ಜೀವಪರವಾದ ದನಿಗಳನ್ನು ದಮನ ಮಾಡುತ್ತಲೂ ಬಂದಿದ್ದಲ್ಲದೆ ಅವುಗಳ ತಿಳುವಳಿಕೆಯನ್ನು ಅಲ್ಲಗಳೆಯವ ಮತ್ತು ಅವಮಾನಿಸುವ ರಾಜಕಾರಣವನ್ನು ಮತ್ತು ಅರಿವಿನ ಹಿಂಸೆಯನ್ನು(Epistemic Violence) ತಮ್ಮ ಅಧಿಕಾರದ ಕಾರ್ಯತಂತ್ರದ ಭಾಗವಾಗಿ ಮಾಡಿಕೊಳ್ಳುತ್ತಲೇ ಬಂದಿವೆ. ಇಂದಿಗೂ ಅವು ಭಾರತದ ಸಂವಿಧಾನೇತರ ಶಕ್ತಿಯಾಗಿ ಕಾರ್ಯಾಚರಿಸುತ್ತಲೇ ಇವೆ. ಇದಕ್ಕೆ ಭಿನ್ನವಾದ, ಆದರೆ ಪ್ರಭುತ್ವದಿಂದ ನಿರಂತರವಾಗಿ ದಮನಗೊಂಡ ನೆಲೆಯಿಂದಲೇ ಚಿಗುರಿದ ಈ ನೆಲದ ಹಲವಾರು ಜೀವಮಾತೃಕೆಗಳು ದುಡಿದು ಬದುಕುವ ಸಮುದಾಯಗಳ ಲೋಕದಿಂದ ಮಾನವೀಯತೆ, ವೈಚಾರಿಕತೆ, ಸ್ವಾತಂತ್ರ, ಸಮಾನತೆ ಮತ್ತು ಸಹಬಾಳ್ವೆಗಳೆಲ್ಲವನ್ನು ಕೂಡಿದ ಒಂದು ಜೈವಿಕವಾದ ತಾತ್ವಿಕತೆಯನ್ನು ಕಟ್ಟಿವೆ, ಅವುಗಳ ಮೂಲಕ ಬಹುಸಮುದಾಯ-ಸಂಸ್ಕೃತಿಗಳ ಜಾತ್ಯತೀತ ಕೂಡುಬದುಕನ್ನು ಪ್ರತಿಪಾದಿಸಿವೆ. ಹಾಗಾಗಿ ಈ ತಾತ್ವಿಕತೆ, ಪ್ರತಿಪಾದನೆಗಳು ನೆಲಮೂಲದೊಂದಿಗಿನ ಒಡನಾಟದ ಅನುಭವದಲ್ಲಿ ಕಂಡುಕೊಂಡ ಕಾಣ್ಕೆಗಳೇ ಹೊರತು ಅವು ಹೊರಗಿನಿಂದ ಕಡ ತಂದವುಗಳಲ್ಲ, ಹೆಚ್ಚೆಂದರೆ ಅವು ಹೊರಗಿನ ತಿಳುವಳಿಕೆಗಳ ಗಾಳಿ ಬೆಳಕಿಗೆ ತೆರೆದುಕೊಂಡು ವಿಸ್ತರಣೆಗೊಂಡಿರಬಹುದು ಅಷ್ಟೆ, ಆದರೆ ಅವುಗಳ ಬೇರು ಈ ನೆಲದಲ್ಲಿಯ ಸತ್ವವನ್ನು ಹೀರಿಕೊಂಡೇ ಆಳವಾಗಿ ಇಳಿದಿವೆ. ಈ ತಾತ್ವಿಕತೆಗಳಿಗೂ ಇಲ್ಲಿಯ ನೂರಾರು ಸಮುದಾಯಗಳ ಚಾರಿತ್ರಿಕ ಅನುಭವಗಳಿಗೂ ಸಾವಯವ ಸಂಬಂಧವಿದೆ. ಈ ತಾತ್ವಿಕತೆಯ ಬೆಳಕಿನಲ್ಲಿಯೆ ಇಲ್ಲಿಯ ಸಮುದಾಯಗಳು ತಮಗೆ ಎದುರಾದ ಐತಿಹಾಸಿಕ ಸವಾಲುಗಳನ್ನು, ಪುರೋಹಿತಶಾಹಿ ವಿರೂಪಗಳನ್ನು ಮತ್ತು ಯಜಮಾನಿಕೆಯ ಆಕ್ರಮಣಗಳನ್ನು ಮೀರಿ ಸಾವಿರಾರು ವರ್ಷಗಳ ಕಾಲ ತಮ್ಮನ್ನು ತಾವು ನಿರ್ವಹಿಸಿಕೊಂಡು ಬಂದಿವೆ. ತಮ್ಮ ನಂಬಿಕೆ ಮತ್ತು ತಾವು ಕಂಡ ಕಾಣ್ಕೆಗಳನ್ನು ಅತ್ಯಂತ ಜತನವಾಗಿ ಕಾಪಾಡಿಕೊಂಡು ಬಂದಿವೆ. ಈ ಎಲ್ಲ ಕಾಣ್ಕೆ ಮತ್ತು ಅರಿವಿನ ಆಕರಗಳಾಗಿ ಬುದ್ಧ, ಬಸವ, ಅಕ್ಕ, ಅಲ್ಲಮ, ಜ್ಞಾನೇಶ್ವರ, ,ಕಬೀರ, ಕನಕ, ರವಿದಾಸ, ಫುಲೆ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಮತ್ತು ನಾರಾಯಣಗುರು ಮುಂತಾದವರಿದ್ದಾರೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ವಸಾಹತುಶಾಹಿಯ ನೆರಳಲ್ಲೇ ಉಂಟಾದ ಪಲ್ಲಟಗಳಿಂದಾಗಿ ದಮನಿತ ಸಮುದಾಯಗಳು ತಮ್ಮನ್ನು ಆವರಿಸಿಕೊಂಡಿದ್ದ ಯಜಮಾನಿಕೆಯ ಮುಸುಕುಗಳನ್ನು ಅತ್ಯಂತ ನಿರ್ಣಾಯಕವಾಗಿ ಕಿತ್ತೊಗೆದು ತಮ್ಮ ಮೂಲಬೇರುಗಳನ್ನು ಹುಡುಕಿಕೊಳ್ಳಲು ಸಾಧ್ಯವಾದದ್ದು ಎಲ್ಲರಿಗೂ ತಿಳಿದಿದೆ. ಅದರ ಭಾಗವಾಗಿಯೆ ದಮನಿತರ ಪಾಲಿಗೆ ಭೂತ ಮತ್ತು ವರ್ತಮಾನಗಳು ಏಕಕಾಲಕ್ಕೆ ಸಂಭವಿಸಿ ಭವಿಷ್ಯವನ್ನು ನಿರ್ದೇಶಿಸತೊಡಗಿದವು. ಈ ಸಂಕ್ರಮಣ ಕಾಲದಲ್ಲಿಯೆ ಜೋತಿಬಾ ಫುಲೆ, ಪೆರಿಯಾರ್, ಲೋಹಿಯಾ, ಅಂಬೇಡ್ಕರ್ ಮುಂತಾದವರು ದಮನಿತ ಸಮುದಾಯಗಳಿಗೆ ಅವುಗಳ ದಿಟವಾದ ಚರಿತ್ರೆಯನ್ನು, ವರ್ತಮಾನವನ್ನು ವಿವರಿಸಿಕೊಟ್ಟ ಕಾರಣಕ್ಕೆ ಅವು ತಮ್ಮ ಬಹುಕಾಲದ ಮೌನದಿಂದ ಎಚ್ಚರಗೊಂಡಂತೆ ಮಾತನಾಡತೊಡಗಿದವು.

ದಮನಿತ ಸಮುದಾಯಗಳು ತಮಗಾಗಿರುವ ಚಾರಿತ್ರಿಕ ಅನ್ಯಾಯಗಳಿಗೆ ಈಗ ನ್ಯಾಯದ ಹಕ್ಕು ಮಂಡಿಸತೊಡಗಿವೆ. ಅವುಗಳು ಕೇಳುತ್ತಿರುವ ನ್ಯಾಯ, ಮಂಡಿಸುತ್ತಿರುವ ತಾತ್ವಿಕತೆಯ ಆಕಾರಗಳು ಮತ್ತು ಒತ್ತಾಯಿಸುತ್ತಿರುವ ಹೊಸ ಸಂರಚನೆಯ ವಿನ್ಯಾಸಗಳೆಲ್ಲವನ್ನೂ ಒಟ್ಟುಗೂಡಿಸಿದ ಆಲೋಚನಾ ಮಾದರಿಗೆ ಎಡಪಂಥವೆಂದು ಕರೆಯಲಾಗುತ್ತಿದೆ. ಇರಲಿ. ಇಂತಹ ಎಡಪಂಥಕ್ಕೆ ಆದರ್ಶ ಮತ್ತು ಗುರಿ ಎಂದರೆ ಡಾ. ಬಿ ಆರ್ ಅಂಬೇಡ್ಕರ್ ರಚಿತ ಭಾರತ ಸಂವಿಧಾನ. ಈ ಸಂವಿಧಾನದ ಆಶಯಗಳು ಮತ್ತು ಚಿಂತನೆಗಳಲ್ಲಿ ಎಡಪಂಥದ ನಿಖರವಾದ ತಾತ್ವಿಕತೆ ಇದೆ ಎಂದರೆ ತಪ್ಪಾಗಲಾರದು. ನೈಜ ಪ್ರಜಾಪ್ರಭುತ್ವದ ಪ್ರತಿಪಾದನೆಯು ಎಡಪಂಥದ ಕಾರ್ಯಸೂಚಿ. ವೈಚಾರಿಕತೆ(rationalism) ಮತ್ತು ಮುಕ್ತ ಸಂವಾದ(dialogism)ಗಳು ಎಡಪಂಥದ ಅತ್ಯುನ್ನತ ದಾರಿಗಳು. ತನ್ನನ್ನು ಒಪ್ಪದವರನ್ನು, ಹೊರಗಿನವರನ್ನು, ವಿರೋಧಿಗಳನ್ನು ಕೂಡಾ ಸಮಾನವಾಗಿ ಗೌರವಯುತವಾಗಿ ಕಾಣಬೇಕೆಂಬುದು ಎಡಪಂಥದ ಸ್ಫೂರ್ತಿ. ಹೀಗಿರುವಾಗ ಎಡಪಂಥವು ಘೋಷಣೆ, ಭಾಷಣದಲ್ಲಿ ತೊಡಗಿದೆ ಎಂದು ಆರೋಪಿಸುವವರು ಅರ್ಥಮಾಡಿಕೊಳ್ಳದೇ ಹೋದ ಸಂಗತಿ ಎಂದರೆ ಘೋಷಣೆ, ಭಾಷಣಗಳು ಚಿಂತನೆಯೊಂದರ ಕಾರ್ಯಾಚರಣೆಯ ಭಾಗವೇ ಹೊರತು ಅವೇ ಚಿಂತನೆಯಲ್ಲ. ಇಷ್ಟಕ್ಕೂ ಘೋಷಣೆ, ಭಾಷಣಗಳನ್ನು ಕಂಡು ಆಕ್ಷೇಪಿಸುವವರು ಅವು ಪ್ರಜಾತಂತ್ರದಲ್ಲಿ ತಿಳುವಳಿಕೆಯನ್ನು ವರ್ಗಾಯಿಸುವ ದಾರಿಗಳಷ್ಟೆ, ಅವು ಎಂದೂ ಹಿಂಸೆ ಮತ್ತು ದೌರ್ಜನ್ಯಗಳಂತೆ ಜೀವವಿರೋಧಿಯಲ್ಲ ಎಂಬುದನ್ನು ತಿಳಿಯಲಾರರೆ?

ವಿಪರ್ಯಾಸವೆಂದರೆ ಈ ಎಡಪಂಥವನ್ನು ಈಗ ಅಪಾಯ ತಂದೊಡ್ಡುವ ಚಿಂತನಾ ಮಾದರಿಯೆಂದು ಹಣೆಪಟ್ಟಿ ಕಟ್ಟುವುದರ ಮೂಲಕ ಪ್ರಗತಿಪರವಾದ ಆಲೋಚನಾಕ್ರಮವನ್ನೇ ಸಮಾಜದ ಮುಂದೆ ಅಪರಾಧಿಯನ್ನಾಗಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿರುವಂತೆ ಕಾಣುತ್ತಿದೆ. ಜೊತೆಗೆ ಆ ಚಿಂತನಾ ಕ್ರಮವು ಮುಂದೊಡ್ಡಿದ ಪ್ರಶ್ನೆಗಳನ್ನು ತಿರಸ್ಕರಿಸುವ ಮತ್ತು ಅಮಾನ್ಯಗೊಳಿಸುವ ದೊಡ್ಡ ಸಂಚಿನಂತೆಯೂ ಕಾಣುತ್ತಿದೆ, ಈ ಪ್ರಕ್ರಿಯೆಯಲ್ಲಿ ‘ಬಲಪಂಥೀಯಕ್ಕೆ ಸಡ್ಡುಹೊಡೆಯುವ ಭರದಲ್ಲಿ ಎಡಪಂಥೀಯವಾದ ಉಗ್ರರೂಪ ತಾಳುತ್ತಿದೆ’ ಎಂಬ ಜಾಣತನವನ್ನು ಕೂಡಾ ತೋರಲಾಗುತ್ತಿದೆ. ಈ ವಾದಕ್ಕೆ ಬಿದ್ದಿರುವ ಯಾರೂ ಕೂಡಾ ಎಡಪಂಥ ಹೇಗೆ ಅಪಾಯಕಾರಿ ಚಿಂತನೆ? ಮತ್ತು ಅದು ಯಾವ ಸ್ವರೂಪದಲ್ಲಿ ಉಗ್ರರೂಪ ತಾಳುತ್ತಿದೆ ? ಮತ್ತು ಅದನ್ನು ಯಾಕೆ ನಿಗ್ರಹಿಸಬೇಕು ? ಎಂದು ವಿವರಿಸುತ್ತಿಲ್ಲ. ಸಮಾಜಕ್ಕೆ ವಿವರಣೆ ನೀಡಬೇಕಾದುದು ಸಾಮಾಜಿಕ ಹೊಣೆಗಾರಿಕೆ.

ಯಾವ ಚಿಂತನಾಕ್ರಮವೂ ಅಂತಿಮವಲ್ಲ, ಸಾರ್ವಕಾಲಿಕವೂ ಆಗಬೇಕಿಲ್ಲ ಎಂಬುದೇನೊ ಸರಿ. ಆದರೆ ಎಡಪಂಥವೆಂದು ನಾವು ಗುರುತಿಸುವ ಚಿಂತನಾಕ್ರಮವು ಬುದ್ಧನಿಂದ ಆರಂಭವಾಗಿ ಬೆಳೆದು, ಬೆಳೆದಂತೆ ಗರಿ ಕಳಚುತ್ತಾ, ಕಳಚಿದ ಜಾಗದಲ್ಲಿ ಗುರುತು ಉಳಿಸುತ್ತ್ತಾ’’ ಇಂದಿನವರೆಗೂ ಸಾಗುತ್ತಿರುವ ಒಂದು ಜೈವಿಕ ಚಿಂತನಾ ಕ್ರಮ. ಅದು ಚಿಕ್ಕ ತೊರೆಯಾಗಿ ಹರಿಯುತ್ತಾ, ತನ್ನ ಹರಿವಿನಲ್ಲಿ ದೊರೆಯುವ ಎಲ್ಲಾ ಪ್ರಗತಿಪರ, ಜನಪರ ಚಿಂತನೆಗಳನ್ನು ಜೊತೆಗೂಡಿಸಿಕೊಂಡು ಮುಂದೆ ಸಾಗುವ ಜೀವನದಿ. ಅದನ್ನು ಎಡಪಂಥವೆಂದು ಗುರುತಿಸುವುದರಿಂದ ಅದರ ವ್ಯಾಪ್ತಿಯನ್ನು ಕುಗ್ಗಿಸಿದಂತಾಗಬಹುದೇನೊ ಎನ್ನುವುದು ನನ್ನ ಭಾವನೆ. ಇಷ್ಟಾಗಿಯೂ ಮಧ್ಯಮಮಾರ್ಗದ ವಕ್ತಾರರು, ವಕೀಲರು ಮಂಡಿಸುತ್ತಿರುವಂತೆ ಮಧ್ಯಮ ಮಾರ್ಗವು ನಮ್ಮ ಮೂರನೆಯ ಆಯ್ಕೆಯಾಗಬೇಕಾದರೆ ಅದರ ರಾಜಕೀಯ, ಬೌದ್ಧಿಕ ತಾತ್ವಿಕತೆ ಯಾವುದು? ಅದರ ಮೂಲ ಆಕರಗಳು ಯಾವುವು? ಎಡಪಂಥವು ಕಂಡುಕೊಳ್ಳಲು, ಪ್ರತಿಪಾದಿಸಲು ಸಾಧ್ಯವಾಗದ ಯಾವ ಶ್ರೇಷ್ಠ ತಿಳುವಳಿಕೆಗಳು ಈ ಮಧ್ಯಮಮಾರ್ಗದಲ್ಲಿವೆ? ಅದು ನಮ್ಮನ್ನು ಯಾವ ಬಗೆಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿನ್ಯಾಸಗಳ ಗುರಿಯ ಕಡೆಗೆ ಕರೆದೊಯ್ಯುತ್ತದೆ? ಅಸಮಾನತೆ, ಅಸ್ಪೃಶ್ಯತೆಗಳ ಕುರಿತು ಎಡಪಂಥವು ತಳೆಯಲಾರದ ಯಾವ ಪ್ರಜಾ ತಾಂತ್ರಿಕ ನಿಲುವುಗಳು ಈ ಮಧ್ಯಮ ಮಾರ್ಗದಲ್ಲಿವೆ ? ಭೂಮಿ, ಬಂಡವಾಳ ಮತ್ತು ರಾಜಕೀಯಾಧಿಕಾರದ ಸಮಾನ ಹಂಚಿಕೆಯ ಆಗ್ರಹದ ಕುರಿತಾಗಿರುವ ಎಡಪಂಥದ ನಿಲುವುಗಳು ಅಥವಾ ಅವುಗಳಿಗಿಂತ ಮೀರಿದ ಯಾವ ನಿಲುವುಗಳು ಮಧ್ಯಮಮಾರ್ಗದಲ್ಲಿವೆ ? ಎಂಬುದನ್ನು ವಿವರಿಸಲು ಮುಂದಾದರೆ ಅದು ಅಷ್ಟರಮಟ್ಟಿಗಿನ ಸಾಮಾಜಿಕ ಹೊಣೆಗಾರಿಕೆಯಾಗಬಲ್ಲದು. ಆದರೆ ಎಡಪಂಥ ಮತ್ತು ಬಲಪಂಥದ ಒಳ್ಳೆಯ ಅಂಶಗಳನ್ನು ಆಯ್ದು ಮಧ್ಯಮಮಾರ್ಗವನ್ನು ಕಟ್ಟುಬಹುದೆಂದು ವಾದಿಸುವುದು ಎಡಪಂಥದ ನೆಲೆಯಲ್ಲಿ ಅವಕಾಶವಾದಿತನ, ಬಲಪಂಥದ ದೃಷ್ಟಿಯಲ್ಲಿ ಬಲಪಂಥದ ಮುಂದುವರಿಕೆಯಾಗುತ್ತದೆ. ಹಾಗಾದರೆ ಮಧ್ಯಮ ಮಾರ್ಗಗಳು ಎಡಪಂಥವನ್ನು ತಮ್ಮ ವಾದವಾಗಿಸಿಕೊಳ್ಳುವರೋ ಅಥವಾ ಬಲಪಂಥದ ಪ್ರತಿಗಾಮಿತನಕ್ಕೆ ವಾರಸುದಾರರಾಗುವರೊ? ಎಡಪಂಥದ ಅಪ್ಪಟ ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ತಾತ್ವಿಕತೆ ಎಲ್ಲಿ? ಮತೀಯತೆ, ಹಿಂಸೆ, ತಾರತಮ್ಯ, ಅಸ್ಪೃಶ್ಯತೆ, ಜಾತೀಯತೆ ಮತ್ತು ಧರ್ಮದ ಮೇಲಾಟಗಳನ್ನೇ ನಂಬುವ, ಉಸಿರಾಡುವ ಮತ್ತು ಅವುಗಳನ್ನೇ ಜಾರಿಗೊಳಿಸಲು ಹಂಬಲಿಸುವ ಬಲಪಂಥವೆಲ್ಲಿ? ಬಲಪಂಥವೆಂಬುದು ಇಂದು ಜನಮನ್ನಣೆ, ಜನಪ್ರಿಯತೆಯನ್ನು ಗಳಿಸುತ್ತಿರುವುದನ್ನು ಸಂಭ್ರಮಿಸುತ್ತಿರುವವರು ಅದರ ಬೌದ್ಧಿಕ ತಾತ್ವಿಕತೆ, ಅದರ ಪರಂಪರೆ ಮತ್ತು ವಿನ್ಯಾಸಗಳು ಯಾವುವು ಎಂಬುದನ್ನು ಗುರುತಿಸುವುದಿಲ್ಲ. ಬಲಪಂಥವು ಕೂಡಾ ತಾನು ಬಯಸುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ತಿಳುವಳಿಕೆಗಳು, ಮಾದರಿಗಳು ಯಾವುವು ಎಂಬುದನ್ನು ಈ ಸಮಾಜದ ಎದುರಿಗೆ ವಿವರಿಸುತ್ತಿಲ್ಲ, ಇಂತಹ ನಿರಾಕರಣೆಯ ದೊಡ್ಡ ಇತಿಹಾಸವನ್ನು ಹೊಂದಿರುವ ಬಲಪಂಥವು ಭಾರತವನ್ನು ಖಚಿತವಾಗಿ ಎಂದೂ ವಿಶ್ಲೇಷಿಸುವ ಮಾರ್ಗಕ್ಕೆ ವಿರುದ್ಧವಾಗಿ ಆವೇಶ ಮತ್ತು ಉನ್ಮಾದದಲ್ಲಿ ತನ್ನನ್ನು ಮರುಸೃಷ್ಟಿಸಿಕೊಳ್ಳುವುದರಲ್ಲಿ ನಿರತವಾಗಿದೆ.

ಯಾವುದೇ ಬೌದ್ಧಿಕ ಪರಂಪರೆ ಇರುವುದೇ ಆದರೆ ಅದು ಬುದ್ಧ್ದನ ಭೌದ್ಧಿಕತೆ, ವಿವೇಕ, ವೈಚಾರಿಕತೆ ಮತ್ತು ಸಮುಷ್ಟಿ ಪ್ರಜ್ಞೆಯಲ್ಲಿ ವೈಚಾರಿಕತೆ ಎನ್ನುವುದು ಎಡಪಂಥೀಯರ ಸ್ವತ್ತಲ್ಲದಿದ್ದರೂ ಅದು ವೈಚಾರಿಕತೆಯನ್ನು ಸಾಧನವಾಗಿಸಿಕೊಂಡು ಧರ್ಮ, ದೇವರು, ಜಾತಿ, ಕಂದಾಚಾರ, ಮೌಢ್ಯ, ಅಧಿಕಾರ, ದಬ್ಬಾಳಿಕೆಗಳನ್ನು ವಿವರಿಸುತ್ತದೆ. ಆದ್ದರಿಂದ ವೈಚಾರಿಕತೆ ಮತ್ತು ಎಡಪಂಥದ ನಡುವೆ ಒಂದು ಅಂತಃಸಂಬಂಧವೇ ಇದೆ. ಎಡಪಂಥವು ಅಧ್ಯಾತ್ಮವನ್ನು ನಿರಾಕರಿಸುತ್ತದೆ ಎಂದು ಬಹಳ ಸರಳವಾಗಿ ಆರೋಪಿಸುವವರು ತಮ್ಮ ಇಂತಹ ಆರೋಪಗಳನ್ನು ಯಾವ ತಾತ್ವಿಕ ಬದ್ಧತೆಯಿಂದಾಗಲಿ, ಸಾಮುದಾಯಿಕ ಹೊಣೆಗಾರಿಕೆಯಿಂದಾಗಲಿ ಮಾಡುವುದಿಲ್ಲ. ಅವು ಆರೋಪ ಮಾಡಲೆಂದೇ ಆರೋಪಿಸಿಕೊಂಡ ಹುಸಿನೆಲೆಯಿಂದ ಮೈಪಡೆಯುತ್ತವೆ. ವೈಚಾರಿಕತೆ ಕೂಡಾ ಒಂದು ಬಗೆಯ ಆಧ್ಯಾತ್ಮಿಕ ಮಾರ್ಗ; ಅದೂ ಕೂಡಾ ಜ್ಞಾನದ ಅನಂತ ಧ್ಯಾನ. ಹಾಗೆ ನೋಡಿದರೆ ಧ್ಯಾನದ ಒಟ್ಟು ಗುರಿಯೇ ವೈಚಾರಿಕತೆಯ ಮೂಲಕ ಸಾಧಿಸಬೇಕಾದ ಜ್ಞಾನ. ಈ ಮಾರ್ಗದ ಮೂಲ ಮಾದರಿಗಳೆಂದರೆ ಬುದ್ಧ, ಬಸವ, ಅಲ್ಲಮ, ಅಂಬೇಡ್ಕರ್ ಮೊದಲಾದವರು.

ವಿಪರ್ಯಾಸವೆಂದರೆ ಧರ್ಮದ ಹಿಂದೆ ಅಡಗಿರುವ ಪಟ್ಟಭದ್ರರು, ಮಾರುಕಟ್ಟೆಯ ಅಧ್ಯಾತ್ಮದ ದಲ್ಲಾಳಿಗಳು ಧ್ಯಾನವನ್ನು ಕಾಣದ ಅಥವಾ ಇಲ್ಲದ ದೇವರ ಭಜನೆ, ಉನ್ಮಾದದ ಮಟ್ಟಕ್ಕೆ ಇಳಿಸಿ ವ್ಯಾಪಾರಮಾಡತೊಡಗಿದ್ದಾರೆ. ಧರ್ಮಕ್ಕೂ ಮಾನವೀಯತೆಗೂ ಇದ್ದ ಅನುಸಂಗಿಕ ಕೊಂಡಿಯನ್ನು ಕತ್ತರಿಸಿ ಈಗ ಮನುಷ್ಯರೆಲ್ಲರೂ ಧರ್ಮಕ್ಕಾಗಿ ಇರಬೇಕೆ ಹೊರತು ಮನುಷ್ಯನಿಗಾಗಿ ಧರ್ಮವಿರಬೇಕಾದ ಅಗತ್ಯವಿಲ್ಲವೆಂದು ಹೇಳಲಾಗುತ್ತಿದೆ. ಬೀದಿಯಲ್ಲಿ ನಿಂತು ಅಬ್ಬರಿಸುವುದೇ ಧರ್ಮವಾಗಿದೆ. ಆದ್ದರಿಂದ ಎಡಪಂಥದ ಚಿಂತನಾ ಕ್ರಮವು ನಮ್ಮ ಆಯ್ಕೆ ಮತ್ತು ಆದ್ಯತೆಯಾಗದಿದ್ದರೆ ಅದು ನಮ್ಮ ದೌರ್ಬಲ್ಯವೇ ಹೊರತು ಚಿಂತನಾಕ್ರಮದ ತೊಡಕಲ್ಲ. ಅಂತದೊಂದು ಬಿಡುಗಡೆಯ ದಾರಿಗೆ ನಾವು ಕಣ್ಣು ತೆರೆಯಲಾಗದಿದ್ದರೆ ನಮ್ಮ ಅಂತರಂಗದ ಕಣ್ಣಿಗೆ ಶಾಶ್ವತವಾದ ಕುರುಡುತನ ಬಡಿದಿದೆ ಎಂದೇ ಅರ್ಥ.

ಪ್ರಜಾಪ್ರಭುತ್ವವಿದ್ದೂ ಹಿಂಸೆಯ ನಡುವೆ ಬದುಕಬೇಕಾದ ಸಂದಿಗ್ಧ ಸ್ಥಿತಿಯಲ್ಲಿರುವ ನಾವು ವರ್ತಮಾನದ ಕುರಿತು ಖಚಿತ ರಾಜಕೀಯ ನಿಲುವು ತಳೆಯಲೇಬೇಕಾದ ಅನಿವಾರ್ಯವಿದೆ. ಧರ್ಮ, ರಾಜಕಾರಣ ಮತ್ತು ಬಂಡವಾಳಶಾಹಿಯ ಅನೈತಿಕ ಕೂಟವು ನಮ್ಮ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದುಕಿನ ವಿನ್ಯಾಸಗಳನ್ನು ನಿರ್ದೇಶಿಸಿ, ನಿರ್ವಹಿಸುತ್ತಿರುವಾಗ ರಾಜಕೀಯದಿಂದ ಹೊರತಾದ ಒಂದು ನಿಲುವು ಸಾಧ್ಯವೇ ಇಲ್ಲದ ಒಂದು ಸಂಕೀರ್ಣ ಸಂದರ್ಭದಲ್ಲಿ ನಾವು ಬಂದು ನಿಂತಿದ್ದೇವೆ. ಇಂತಹ ಹೊತ್ತಿನಲ್ಲಿ ಎಡಪಂಥದ ಶಕ್ತಿ ಎಂದರೆ ಮಾನವೀಯತೆ, ಬಹುತ್ವ ಮತ್ತು ವೈಚಾರಿಕತೆ. ಈ ಮೂರೂ ಮೌಲ್ಯಗಳು ಭಾರತವನ್ನು ಮುನ್ನಡೆಸಲು ಬೇಕೊ ಬೇಡವೋ ಅನ್ನುವುದನ್ನು ಆಯ್ಕೆ ಮಾಡುವುದರ ಮೇಲೆ ನಾವು ಎಡಪಂಥೀಯರೊ ಬಲಪಂಥೀಯರೊ ಅನ್ನುವುದು ನಿಂತಿದೆ. ಆದರೆ ಭಾರತ ಸಂವಿಧಾನ, ಪ್ರಜಾತಂತ್ರ ಮತ್ತು ಅವುಗಳ ಎಲ್ಲ ಚೈತನ್ಯದೊಂದಿಗೆ ಮಾನವೀಯ ನಾಡೊಂದರ ನಿರ್ಮಾಣಕ್ಕೆ ಬಯಸುವ ಯಾವನೇ ವ್ಯಕ್ತಿ ಖಂಡಿತವಾಗಿ ಎಡಪಂಥದತ್ತ ವಾಲದೆ ಇರಲಾರ.

ಈಗ ಮಧ್ಯಮಮಾರ್ಗದ ಕುರಿತು ಪರಿಶೀಲಿಸುವ ಹೊತ್ತಿನಲ್ಲಿ ಕೆಲವು ಪ್ರಶ್ನೆಗಳು ಬಹಳ ಮುಖ್ಯವಾಗುತ್ತವೆ. ಮಧ್ಯಮಮಾರ್ಗದ ಚಿಂತಕರು ತಮ್ಮನ್ನು ತಾವು ಪ್ರಶ್ನೆಗಳಿಗೆ ಒಳಪಡಿಸಿಕೊಳ್ಳಬೇಕಾದ ತುರ್ತಿದೆ. ಎಡಪಂಥವು ತನ್ನ ತಾತ್ವಿಕತೆಯಾಗಿ ಗುರುತಿಸಿಕೊಂಡಿರುವ ಮಾನವೀಯತೆ, ಬಹುತ್ವ ಮತ್ತು ವೈಚಾರಿಕತೆಗಳ ಪ್ರತಿಪಾದನೆಯ ಅಗತ್ಯವಿಲ್ಲದೆಯೂ ಭಾರತವನ್ನು ಪ್ರಜಾತಂತ್ರದ ನೆಲೆಗಟ್ಟಿನ ಮೇಲೆ ಮುನ್ನಡೆಸಬಲ್ಲ ಮಧ್ಯಮಮಾರ್ಗವೊಂದು ಇದೆಯೆ ಸಂವಾದ-ಸಂಸ್ಕೃತಿಯನ್ನು ಜತನವಾಗಿಟ್ಟುಕೊಳ್ಳಬೇಕಾದ ಹೊತ್ತಿನಲ್ಲಿ ಕೇವಲ ಮಾತಿಲ್ಲದ ಮೌನವನ್ನು ಮಾತ್ರ ಮಧ್ಯಮಮಾರ್ಗವೆಂದು ಆ ಮೂಲಕ ಬುದ್ಧನನ್ನು ಸರಳೀಕರಿಸುವುದು ಸರಿಯೆ? ಎನ್ನುವ ಪ್ರಶ್ನೆಗಳಿಗೆ ಮದ್ಯಮಮಾರ್ಗದ ಪ್ರತಿಪಾದಕರು ಉತ್ತರಗಳನ್ನು ಕಂಡುಕೊಳ್ಳಬೇಕಿದೆ. ಆದರೆ ಶತಮಾನಗಳ ಶೋಷಣೆಯಿಂದ ದಮನಿತ ವರ್ಗಗಳ ಬಿಡುಗಡೆಯನ್ನು ಮಾತು-ಸಂವಾದಗಳಿಲ್ಲದ ಮೌನದಲ್ಲಿ ಸಾಧಿಸುವುದು ಸಾಧ್ಯವಾಗುವುದೇ ಆಗಿದ್ದರೆ ಬುದ್ದನ ಪರಮ ಅನುಯಾಯಿಯಾಗಿ ಬೌದ್ಧ ತತ್ವವನ್ನು ಆತ್ಯಂತಿಕವಾಗ ಶೋಧಿಸಿ, ನಂಬಿ, ಆಚರಿಸಿದ ಡಾ. ಬಿ. ಆರ್. ಅಂಬೇಡ್ಕರ್ ರವರು ಮೌನವಾಗಿದ್ದು ಬಿಡಬಹುದಾಗಿತ್ತು. ಆದರೆ ಅದು ಸಾಧ್ಯವಿರಲಿಲ್ಲ.

ಅವರು ತಮ್ಮ ಅನಂತ ಜ್ಞಾನದಾಹದಲ್ಲಿ ಇಪ್ಪತ್ತೈದು ಸಾವಿರ ಪುಟಗಳಿಗೂ ಮೀರಿದ ಅಗಾಧವಾದ ಹೊಸ ಚಿಂತನೆಯನ್ನು ಕಟ್ಟಿಕೊಟ್ಟಿದ್ದು ಮತ್ತು ದೇಶದ ಉದ್ದಗಲಕ್ಕೆ ಓಡಾಡಿ ತಳ ಸಮುದಾಯಗಳ ಅವಮಾನ, ಆಕ್ರಂದನಕ್ಕೆ ಅಹಿಂಸಾತ್ಮಕ ಹೋರಾಟದ ರೂಪ ನೀಡಿದ್ದು, ಅದನ್ನು ಸಾಮಾಜಿಕ ನ್ಯಾಯದ ಚಳವಳಿಯಾಗಿ ಬದಲಾಯಿಸಿದ್ದು ಬುದ್ಧನ ಮಧ್ಯಮ ಮಾರ್ಗದಿಂದ. ಅಂಬೇಡ್ಕರ್ ರವರು ಸಂವಾದ ಮತ್ತು ಬರಹಗಳ ಅನಂತ ಸಾಧ್ಯತೆಯನ್ನು ಆತ್ಯಂತಿಕವಾಗಿ ಶೋಧಿಸಿದ ಚಿಂತಕ. ಈ ಮಾರ್ಗದಲ್ಲಿ ಅವರು ಈ ದೇಶದ ಚರಿತ್ರೆ, ಸಮಾಜ, ಆರ್ಥಿಕ ಸಂರಚನೆಗಳು, ಸಾಂಸ್ಕೃತಿಕ-ರಾಜಕೀಯಗಳ ಸಂಕೀರ್ಣ ಸಂಬಂಧಗಳನ್ನು ಮುಖಾಮುಖಿಯಾಗಿ ಹೊಚ್ಚಹೊಸಬೆಳಕನ್ನು ನೀಡಿದ್ದು ಎಲ್ಲರ ಕಣ್ಣೆದುರಿಗೆ ನಿಚ್ಚಳವಾಗಿದೆ. ಶೋಷಿತ ಸಮುದಾಯಗಳಲ್ಲಿ ಮಡುಗಟ್ಟಿದ್ದ ಸಾವಿರಾರು ವರ್ಷಗಳ ಆಕ್ರೋಶವನ್ನು ಹಿಂಸೆ ಮತ್ತು ನಿಷ್ಕ್ರಿಯತೆಯಂತಹ ಎರಡು ಅತಿರೇಕದ ಸ್ಥಿತಿಗಳಿಗೆ ಒಯ್ಯದೆ ಅದನ್ನು ಅಹಿಂಸಾತ್ಮಕ ಹೋರಾಟವಾಗಿ, ಜ್ಞಾನದ ಅನುಸಂಧಾನದ ನೆಲೆಯಾಗಿ ಮತ್ತು ಜನಸಂವಾದವನ್ನಾಗಿ(dialogue) ಅಂಬೇಡ್ಕರ್ ರೂಪಿಸಿದ್ದು ಮಧ್ಯಮ ಮಾರ್ಗವಾಗಿಯೆ.

ಇದರ ಮೂಲಕ ಅಂಬೇಡ್ಕರ್ ಬುದ್ಧನ ಮಧ್ಯಮಮಾರ್ಗಕ್ಕೆ ವಿಸ್ತರಣೆ ಮತ್ತು ವ್ಯಾಪಕತೆಯನ್ನು ತಂದುಕೊಟ್ಟರು. ಹಾಗೆ ನೋಡಿದರೆ ಅಹಿಂಸೆಗೆ ಮೂರು ಆಯಾಮಗಳನ್ನು ನೀಡಿದ ಅಂಬೇಡ್ಕರ್‌ಗೆ ಅಹಿಂಸಾವಾದಿಯೆಂಬ ಕ್ರೆಡಿಟ್ ದಕ್ಕಬೇಕಿತ್ತು. ಆದರೆ ಚರಿತ್ರೆಯ ಪುಟಗಳಲ್ಲಿ ಅಡಗಿರುವ ಸಂಚು ಬಹಳ ಕ್ರೂರವಾದುದು. ಇಂಡಿಯಾದ ಅಕಾಡಮಿಕ್ ಲೋಕದೊಳಗೆ ಅನೇಕ ಸಮಸ್ಯೆಗಳಿವೆ. ಅಲ್ಲಿರುವ ಕೆಲವರಿಗೆ ಜ್ಞಾನವೆಂದು ಯಾವುದನ್ನು ಕರೆಯಲಾಗುತ್ತದದೋ ಅದು ರಾಜಕೀಯ ನಿಲುವಿನಿಂದ ಹೊರತಾದುದಲ್ಲವೆಂದು ತಿಳಿದಿಲ್ಲ ಅಥವಾ ಹಾಗೆ ನಟಿಸುತ್ತಾರೆ. ಜೊತೆಗೆ ರಾಜಕೀಯದಿಂದ ಮುಕ್ತವಾದ ಜ್ಞಾನವಿರಬೇಕೆಂದು ಬಯಸುತ್ತಾರೆ ಮತ್ತು ಹಾಗೆಯೆ ವಾದಿಸುತ್ತಾರೆ. ಯಾವುದೇ ರಾಜಕೀಯ ನಿಲುವನ್ನು ತೆಗೆದುಕೊಳ್ಳದಿರುವುದು ಅನೇಕರಿಗೆ ಒಂದು ಬಗೆಯ ಅಡಗುದಾಣ. ಆಂತವರು ಮಧ್ಯಮಮಾರ್ಗವನ್ನು ಹುಡುಕುತ್ತಾರೆ. ಕಾರಣ ತಾವು ಇದುವರೆಗೂ ರೂಪಿಸಿಕೊಂಡಿರುವ ವ್ಯಕ್ತಿತ್ವ ಮತ್ತು ನಿಲುವುಗಳು ಪ್ರಶ್ನಾರ್ಹವಾಗಬಾರದೆಂದು ಬಯಸುತ್ತಾರೆ. ಬಲಪಂಥೀಯತೆಯ ಕಡೆಗೆ ನಡೆದುಬಿಟ್ಟರೆ ತಾವು ಬಿಂಬಿಸಿಕೊಂಡ ನಿಲುವುಗಳು ಏಕ್ ದಂ ಎಡಪಂಥೀಯರಿಂದ ಟೀಕೆಗೊಳಗಾಗಿಬಿಡಬಹುದೆಂಬ ಆತಂಕ ಅವರಿಗಿದೆ. ಇದಕ್ಕೆ ವಿರುದ್ದವಾಗಿ ಎಡಪಂಥದ ಕಡೆ ಮುಖಮಾಡಿದಲ್ಲಿ ಬಲಪಂಥದಿಂದ ಅವಕಾಶಗಳು ತಪ್ಪಿಹೋಗುವ ಚಿಂತೆ. ಇವೆರಡರ ನಡುವೆ ಸಿಕ್ಕಿಕೊಂಡು ಎರಡನ್ನೂ ಸಂತೈಸುವವರಂತೆ ಕಾಣಿಸುವ ಮಂದಿ ಅವಕಾಶವಾದವನ್ನು ಎಡಪಂಥದ ಬುದ್ಧನ ನಿರವಕಾಶವಾದವಾಗಿ ನೋಡುವುದಾಗಲಿ ಅಥವಾ ಯಾವುದೇ ನಿಲುವನ್ನು ತೆಗೆದುಕೊಳ್ಳಲಾರದ ಇಂದಿನ ಜಾಣನಡಿಗೆಯನ್ನು ಬುದ್ಧನ ಮಧ್ಯಮಮಾರ್ಗವೆಂದು ಕರೆದುಬಿಡುವುದಾಗಲಿ ಸರಿಯಲ್ಲ.

ಇನ್ನೊಂದುಕಡೆ ಬುದ್ಧನಲ್ಲದೆ, ಗಾಂಧಿ, ರಾಜಾರಾಮ ಮೋಹನರಾಯ ರನ್ನೊಳಗೊಂಡಂತೆ ಕೆಲವರನ್ನು ಮಧ್ಯಮಮಾರ್ಗಿಗಳೆಂದು ಈಗ ಗುರುತಿಸಿ ಚರಿತ್ರೆಯ ಮರುವಿನ್ಯಾಸಕ್ಕೆ ಕೈಹಾಕಲಾಗಿದೆ. ಭಾರತದ ಪಾಲಿಗೆ ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನ ಅತ್ಯಂತ ನಿರ್ಣಾಯಕ ಕಾಲಘಟ್ಟವೇನೋ ಹೌದು. ವಸಾಹತುಶಾಹಿಯ ದಬ್ಬಾಳಿಕೆ, ಅಧಿಕಾರ ಬೆಂಬಲಿತ ದರೋಡೆಗೆ ಪ್ರತಿರೋಧವನ್ನು ಕಟ್ಟಿ ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯ ಜೊತೆಜೊತೆಗೆ ಆಂತರಿಕ ಗುಲಾಮಗಿರಿ, ಶೋಷಣೆ ಮತ್ತು ಕ್ರೂರ ಆಚರಣೆಗಳಿಂದ ಕೂಡಾ ದೇಶ ಬಿಡುಗಡೆಯನ್ನು ಹೊಂದಬೇಕಾಗಿದ್ದ ಸಂದರ್ಭವೇ ಹೌದು. ಆ ಸಂದರ್ಭದಲ್ಲಿ ಹೊರಹೊಮ್ಮಿದ ಬಹುತೇ�

Writer - ಬಿ.ಎಲ್.ರಾಜು, ಸಾಗರ

contributor

Editor - ಬಿ.ಎಲ್.ರಾಜು, ಸಾಗರ

contributor

Similar News